ಕನ್ನಡಪ್ರಭ ವಾರ್ತೆ ಬೆಳಗಾವಿ
ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಯನ್ನು ಬಂದ್ ಮಾಡಲು ಹೊರಟಿರುವ ಅಧಿಕಾರಿಗಳ ಕ್ರಮ ಖಂಡಿಸಿ, ಕರ್ನಾಟಕ ಯುವರಕ್ಷಣಾ ವೇದಿಕೆ ಬೈಲಹೊಂಗಲ ತಾಲೂಕು ಘಟಕ ಹಾಗೂ ಹಣ್ಣಿಕೇರಿ ಗ್ರಾಮ ಪಂಚಾಯಿತಿ ಕಾರ್ಯಾಲಯ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟಿಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು, ಸರ್ಕಾರಿ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಜೈ ಕಿಸಾನ್ ಮಾರುಕಟ್ಟೆ ಬಂದ್ ಮಾಡಲು ಹುನ್ನಾರ ನಡೆಸಿದ್ದಾರೆ. ಇದು ಸರಿಯಲ್ಲ. ಈ ಜೈ ಕಿಸಾನ್ ಮಾರುಕಟ್ಟೆ ಪ್ರಾರಂಭವಾದಾಗಿನಿಂದ ತರಕಾರಿ ಬೆಳೆಯುವ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಇದರಿಂದ ತರಕಾರಿ ಸಾಗಾಣಿಕೆ ವೆಚ್ಚವು ಉಳಿತಾಯವಾಗುತ್ತದೆ. ಹೀಗಾಗಿ ಯಾವುದೆ ಕಾರಣಕ್ಕೂ ಜೈ ಕಿಸಾನ್ ಮಾರುಕಟ್ಟೆ ಬಂದ್ ಮಾಡಬಾರದು ಎಂದು ಆಗ್ರಹಿಸಿದರು.
ರೈತರಿಗೆ ಉತ್ತಮ ಬೆಲೆ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಖಾಸಗಿ ಮಾರುಕಟ್ಟೆ ಸ್ಥಾಪಿಸಲು ಅವಕಾಶ ಕಲ್ಪಿಸಿದೆ. ಆದರೆ ಈಗ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯ ಮೇಲೆ ಕೆಲವು ಸ್ವಯಂ ಘೋಷಿತ ರೈತ ಮುಖಂಡರು ಎಪಿಎಂಸಿ ಮಾರುಕಟ್ಟೆಯವರ ಜೊತೆ ಸೇರಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಅಲ್ಲದೆ ಸರ್ಕಾರದಿದಲೇ ಅನುಮತಿ ಪಡೆದು ಮಾರುಕಟ್ಟೆ ಪ್ರಾರಂಭಿಸಲಾಗಿದೆ. ಆದ್ದರಿಂದ ಜೈ ಕಿಸಾನ್ ಮಾರುಕಟ್ಟೆ ಯಥವತ್ತಾಗಿ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ರೈತ ಮುಂಖನಡ ಜಗದೀಶ ಪಾಟೀಲ ಮಾತನಾಡಿ, ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಯಿಂದ ರೈತರಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ. ಸಮಯಕ್ಕೆ ಸರಿಯಾಗಿ ತರಕಾರಿ ಬಿಲ್ ಸಂದಾಯ ಮಾಡುತ್ತಿದ್ದಾರೆ. ತೂಕದಲ್ಲಿಯೂ ಸಹಿತ ಯಾವುದೇ ಲೋಪದೋಷ ಕಂಡು ಬಂದಿರುವುದಿಲ್ಲ. ಅದಲ್ಲದೆ, ರೈತರ ಹಿತ ದೃಷ್ಟಿಯಿಂದ ಈ ಖಾಸಗಿ ಮಾರುಕಟ್ಟೆ ಮುಂದುವರಿಸಬೇಕು ಎಂದರು. ಪ್ರತಿಭಟನೆಯಲ್ಲಿ ರಾಜಪ್ಪ ಪಾಟೀಲ, ಶಿವಪುತರಯ್ಯ ಹಿರೇಮಠ, ಸಿದ್ದಾರಾಯಗೌಡ ಪಾಟೀಲ, ಈರಣ್ಣ ಸೇರಿದಂತೆ ಇತರರು ಪಾಲ್ಗೊಂಡಿದರು.