ಜೈನ ಧರ್ಮದ ತತ್ವಗಳಲ್ಲಿ ವೈಚಾರಿಕತೆ, ವಿಜ್ಞಾನವೂ ಇದೆ: ಪ್ರೊ.ಪದ್ಮಾಶೇಖರ್

KannadaprabhaNewsNetwork | Published : Jan 4, 2025 12:30 AM

ಸಾರಾಂಶ

ಜೈನ ಧರ್ಮವು ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು, ದೇವರ ಪರಿಕಲ್ಪನೆಯನ್ನು ನಿರಾಕರಿಸಿತು. ಜೈನ ಧರ್ಮದ ಮೂಲವು ಸಿಂಧೂ ನಾಗರಿಕತೆಯಲ್ಲೂ ಕಾಣ ಸಿಗುತ್ತದೆ. ವೃಷಭನಿಗೆ ಮಹತ್ವವನ್ನು ಆ ನಾಗರಿಕತೆ ನೀಡಿತ್ತು. 24 ತೀರ್ಥಂಕರರಲ್ಲಿ ಕೊನೆಯ ಮೂವರಾದ ನೇಮಿನಾಥ, ಪಾರ್ಶ್ವನಾಥ ಹಾಗೂ ಮಹಾವೀರ ಜೈನ ಧರ್ಮವನ್ನು ಪುನರುಜ್ಜೀವನಗೊಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಜೈನ ಧರ್ಮದ ತತ್ವಗಳಲ್ಲಿ ವೈಚಾರಿಕತೆ ಇದೆ, ವಿಜ್ಞಾನವೂ ಇದೆ ಎಂದು ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಪದ್ಮಾಶೇಖರ್ ತಿಳಿಸಿದರು.

ನಗರದ ಮಾನಸಗಂಗೋತ್ರಿಯಲ್ಲಿರುವ ಮೈಸೂರು ವಿವಿ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗವು ಆಯೋಜಿಸಿರುವ ಜೈನ ಧರ್ಮದ ತಾತ್ವಿಕ ಅನುಸಂಧಾನ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಜೀವಿಗಳು ಅಳಿಯುತ್ತಲೇ ರೂಪಾಂತರಗೊಳ್ಳುತ್ತವೆ. ಹೀಗಾಗಿ, ಹಿಂಸೆಯನ್ನು ನಿಷ್ಠುರವಾಗಿ ಮಹಾವೀರ ವಿರೋಧಿಸಿದರು. ಸಸ್ಯಹಾರದ ಕಟ್ಟುನಿಟ್ಟಿನ ನಿಯಮಗಳನ್ನು ಸೂಚಿಸಿದರು. ಇದೇ ಜೈನ ಧರ್ಮ ಜನಪ್ರಿಯತೆ ಕಡಿಮೆಯಾಗಲು ಕಾರಣವಾಯಿತು ಎಂದರು.

ಜೈನ ಧರ್ಮವು ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು, ದೇವರ ಪರಿಕಲ್ಪನೆಯನ್ನು ನಿರಾಕರಿಸಿತು. ಜೈನ ಧರ್ಮದ ಮೂಲವು ಸಿಂಧೂ ನಾಗರಿಕತೆಯಲ್ಲೂ ಕಾಣ ಸಿಗುತ್ತದೆ. ವೃಷಭನಿಗೆ ಮಹತ್ವವನ್ನು ಆ ನಾಗರಿಕತೆ ನೀಡಿತ್ತು. 24 ತೀರ್ಥಂಕರರಲ್ಲಿ ಕೊನೆಯ ಮೂವರಾದ ನೇಮಿನಾಥ, ಪಾರ್ಶ್ವನಾಥ ಹಾಗೂ ಮಹಾವೀರ ಜೈನ ಧರ್ಮವನ್ನು ಪುನರುಜ್ಜೀವನಗೊಳಿಸಿದರು ಎಂದರು.

ದೇವರೆಂದರೆ ಭಯ ಭಿತ್ತಿದ್ದರು. ಈ ದೈವಿಕ ಭಯವನ್ನು ಜನರಿಂದ ಮಹಾವೀರ ಕಿತ್ತೆಸೆದರು. ಲೋಕವು ದೇವ ನಿರ್ಮಿತಿಯಲ್ಲ ಸ್ವಯಂ ನಿರ್ಮಿತಿಯೆಂದು ಸಾರಿದರು. ವಿಕಾಸವಾದ ಹಾಗೂ ವ್ಯಕ್ತಿತ್ವವಾದವನ್ನು ಪ್ರತಿಪಾದಿಸಿದರು. ವ್ಯಕ್ತಿ ಮಾಡಿದ ಪಾಪವನ್ನು ಅವನೇ ಅನುಭವಿಸಬೇಕು. ಸಾಧನೆ ಹಾಗೂ ಆತ್ಮನಿರ್ಭರತೆಯು ಮೋಕ್ಷದೆಡೆಗೆ ಕೊಂಡೊಯ್ಯುತ್ತದೆ ಎಂದು ಮಹಾವೀರ ಹೇಳಿದ್ದರು ಎಂದರು.

ಕೋಮುವಾದ ಭಾರತೀಯ ಸಮಾಜದ ಸೌಹಾರ್ದತೆ ಕದಡಿದ್ದು, ಸಂಕೀರ್ಣ ಸ್ಥಿತಿಯತ್ತ ದೂಡಿದೆ. ಈ ವೇಳೆ ಜೈನ ಧರ್ಮದ ತತ್ವಗಳು ಪ್ರಸ್ತುತವಾಗಿವೆ. ವಿವೇಕಾನಂದರ ಚಿಂತನೆಗಳಲ್ಲಿ ಜೈನ ಧರ್ಮ ಪ್ರಭಾವವಿತ್ತು. ಮಹಾತ್ಮ ಗಾಂಧೀಜಿ ಅಹಿಂಸೆ ಮೂಲಕ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಅವರು ತಿಳಿಸಿದರು.

ಮೈಸೂರು ವಿವಿ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ. ಸುತ್ತೂರು ಎಸ್. ಮಾಲಿನಿ, ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಡಿ. ಶಶಿಕಲಾ ಇದ್ದರು.

ಪ್ರಾಚೀನ ಕಾಲದಲ್ಲಿ ಧರ್ಮವೆಂದರೆ ಜವಾಬ್ದಾರಿಯಾಗಿತ್ತು. ಪಿತೃ ಧರ್ಮ, ಪತ್ನಿ ಧರ್ಮ, ಮುನಿ ಧರ್ಮ, ರಾಜ್ಯ ಧರ್ಮ, ಪ್ರಜಾ ಧರ್ಮ ಹೀಗೆ ಅನೇಕ ಧರ್ಮಗಳಿದ್ದವು. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಮಾಧ್ಯಮವಾಗಿದ್ದತ್ತು. ಆದರೆ, ಅದು ಮತಧರ್ಮವಾದ ಮೇಲೆ ಧರ್ಮದಲ್ಲಿ ಶ್ರೇಷ್ಠತೆಯ ವ್ಯಸನ, ಜಡತ್ವ ಸೃಷ್ಟಿಯಾಯಿತು. ಹೀಗಾಗಿಯೇ ವೈದಿಕ ಧರ್ಮವನ್ನು ಜೈನ ಹಾಗೂ ಬೌದ್ಧ ಧರ್ಮಗಳು ಧಿಕ್ಕರಿಸಿದವು.

- ಡಾ. ಪದ್ಮಾಶೇಖರ್, ವಿಶ್ರಾಂತ ಕುಲಪತಿ

Share this article