–ಶಾಸಕ ಕೆ. ಹರೀಶ್ ಗೌಡ ಅಭಿಮತ
- ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಕನ್ನಡಪ್ರಭ ವಾರ್ತೆ ಮೈಸೂರು
ನಾಡಿನ ಹೆಮ್ಮೆಯ ವಾಸ್ತುಶಿಲ್ಪಿ ಜಕಣಚಾರಿಯವರು ನಮ್ಮ ಪೀಳಿಗೆಗೆ ಮಾತ್ರವಲ್ಲದೇ, ಸೂರ್ಯ ಚಂದ್ರ ಇರುವವರೆಗೂ ಅಮರ ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಜಯಂತೋತ್ಸವ ಸಮಿತಿ ಸಂಯುಕ್ತವಾಗಿ ಸೋಮವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್, ಕುವೆಂಪು, ಬಸವಣ್ಣ ಅವರ ಸಾಲಿಗೆ ಸೇರುವ ಜಕಣಚಾರಿಯವರು ವಾಸ್ತುಶಿಲ್ಪದಲ್ಲಿ ನಾಡಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ನಿರ್ಮಿಸುವುದರ ಮೂಲಕ ಹಾಗೂ ರಸ್ತೆಗೆ ಅವರ ಹೆಸರಿಡುವ ಮೂಲಕ ಅವರ ಬಗ್ಗೆ ಮುಂದಿನ ಪೀಳಿಗೆಗಳು ತಿಳಿದುಕೊಳ್ಳುವಂತೆ ಮಾಡುವುದು ನಮ್ಮ ಕರ್ತವ್ಯ. ಇಂತಹ ಒಳ್ಳೆಯ ಕಾರ್ಯಕ್ಕೆ ಸಮುದಾಯದವರು ಒಗ್ಗಟಾಗಿ ನಮ್ಮೊಟ್ಟಿಗೆ ಕೈ ಜೋಡಿಸಬೇಕು ಎಂದರು.ಮೈಸೂರಿನಾದ್ಯಂತ 75 ರಿಂದ 80 ಸಾವಿರ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಜನರಿದ್ದಾರೆ. ನಿಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ. ಇದರಿಂದಲೇ ಸಮುದಾಯಕ್ಕೆ ಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತೀರಿ. ಮುಖ್ಯಮಂತ್ರಿಗಳು ಸಮಾಜದ ಎಲ್ಲಾ ತಳ ವರ್ಗದವರಿಗೆ ಸೌಲಭ್ಯಗಳನ್ನು ರೂಪಿಸುತ್ತಾರೆ. ಆದರೆ, ನಿಮ್ಮ ಸಮುದಾಯಕ್ಕೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕಾದರೆ ಒಗ್ಗಟ್ಟಾಗಿ ಇರುವುದು ಬಹಳ ಮುಖ್ಯ ಎಂದು ಅವರು ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಅವರು ಇಲ್ಲದಿದ್ದರೆ ಸಮಾಜದಲ್ಲಿ ನಿಮ್ಮ ಸಮುದಾಯದ ಗುರುತಿಸುವಿಕೆ ಸಾಧ್ಯವಾಗುತ್ತಿರಲಿಲ್ಲ. ಜಕಣಚಾರಿಯವರ ಸಾಧನೆ, ಪ್ರತಿಭೆ ಶಿಲ್ಪವೈಶಿಷ್ಟ್ಯ ತಿಳಿಯಲು ಈ ಕಾರ್ಯಕ್ರಮ ಬಹಳ ಉಪಯೋಗಕಾರಿ. ಇದು ಮುಂದಿನ ಪೀಳಿಗೆಗೂ ತಿಳಿಯಬೇಕು ಎಂದರು.ಎಲ್ಲರೂ ತಮ್ಮ ಇಚ್ಛೆಯ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ನಾವು ಬೆಳೆಯಬೇಕಾದರೇ ಸರ್ಕಾರದ ಜೊತೆಗೆ ಎಲ್ಲಾ ಸಮಾಜದ ಜನರು ಒಗ್ಗಟ್ಟಿನಲ್ಲಿ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಲೋಕನಾಥ್ ಮಾತನಾಡಿ, ಸಾಹಿತ್ಯಕ್ಕೆ ಕುವೆಂಪುವಾದರೆ, ಶಿಲ್ಪಕಲೆಗೆ ಜಕಣಾಚಾರಿ ಮೆರುಗು. ವಿದ್ಯಾರ್ಥಿಗಳು ಹಾಗೂ ಪೋಷಕರು ವಾಸ್ತುಶಿಲ್ಪದ ಅಧ್ಯಯನ ಮಾಡಲು ಮನಸ್ಸು ಮಾಡಬೇಕು. ಈ ಕಲೆಯನ್ನು ಎತ್ತರಕ್ಕೆ ಬೆಳೆಸಿ, ಮುಂದಿನ ತಲೆಮಾರುಗಳು ತಿಳಿದುಕೊಳ್ಳುವಂತೆ ಮಾಡಬೇಕು. ಶಿಲ್ಪಕಲೆ ಎಂಬುದು ಎಲ್ಲರಿಗೂ ಬರುವಂತದಲ್ಲ. ಇದಕ್ಕೆ ಅದರದ್ದೇ ಆದಂತಹ ತಪಸ್ಸು, ಶ್ರದ್ಧೆ ಇರಬೇಕು. ಆಗ ಮಾತ್ರವೇ ಶಿಲ್ಪಕಲೆ ಒಲಿಯುತ್ತದೆ ಎಂದು ಹೇಳಿದರು.ಪ್ರಾಧ್ಯಾಪಕ ಡಾ.ಟಿ.ಕೆ. ಕೆಂಪೇಗೌಡ ಮಾತನಾಡಿ, ನಾಡಿನಲ್ಲಿ ಶತಮಾನದಿಂದಲೂ ಹಲವಾರು ಸಂಗೀತಗಾರರು, ಸಂತರು ಆಚಾರ್ಯರ ಕೊಡುಗೆಗಳು ದಾಖಲಾಗಿವೆ. ಸತ್ಯಂ ಶಿವಂ ಸುಂದರಂ ಎಂಬ ಜಪ ಮಾಡಿಕೊಂಡು ಒಂದು ಸಂಸ್ಕೃತಿಯನ್ನೇ ಸೃಷ್ಟಿಸಿದ ಎಲ್ಲಾ ಕವಿ, ಕಲೆಗಾರರು ಹಾಗೂ ಶಿಲ್ಪಿಗಳಿಗೆ ಜಕಣಚಾರಿಯವರು ಸ್ಫೂರ್ತಿಯಾಗಿದ್ದಾರೆ ಎಂದರು.
ಶ್ರೀ ಗಣೇಶ್ವರ ಸ್ವಾಮೀಜಿ, ನಗರ ಪಾಲಿಕೆಯ ಉಪ ಆಯುಕ್ತ ಜಿ.ಎಸ್. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವ ಸಮಿತಿ ಪದಾಧಿಕಾರಿಗಳು ಇದ್ದರು.----
ಕೋಟ್...ಜಗತ್ತಿಗೆ ನಮ್ಮ ತಲೆಮಾರುಗಳು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ತಿಳಿಸಿಕೊಡಬೇಕು. ಇಲ್ಲವಾದರೆ ನಾವು ನಮ್ಮ ಜ್ಞಾನದ ಅಸ್ತಿತ್ವ ಕಳೆದುಕೊಳ್ಳುತ್ತೇವೆ. ಇಂದಿನ ಯುವಕರಿಗೆ ಸೃಜನಾತ್ಮಕ ಸಂವಾದದ ಅಗತ್ಯವಿದೆ.
- ಡಾ.ಟಿ.ಕೆ. ಕೆಂಪೇಗೌಡ, ಪ್ರಾಧ್ಯಾಪಕ