ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯ
ರಣ ಬಿಸಿಲಿನ ಹೊಡೆತಕ್ಕೆ ಮಂಡ್ಯ ಜಿಲ್ಲೆ ತತ್ತರಿಸಿದೆ. ಕೆರೆ-ಕಟ್ಟೆಗಳು ಒಣಗಿವೆ. ಜಾನುವಾರುಗಳಿಗೆ ಕುಡಿಯುವ ನೀರು ಸಿಗದೆ ಕಂಗಾಲಾಗಿವೆ. ಜನರು ನೀರಿಗೆ ಪರದಾಡುವ ಸ್ಥಿತಿ ಎದುರಾಗಿದೆ. ಜಿಲ್ಲೆಯೊಳಗೆ ಜಲಕ್ಷಾಮದ ತೀವ್ರತೆ ಹೆಚ್ಚಾಗುತ್ತಲೇ ಇದ್ದು, ಪ್ರದೇಶಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳಲಾರಂಭಿಸಿದೆ.ಕಳೆದ ವರ್ಷ ಮಳೆಯಾಗದೆ ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗಲಿಲ್ಲ. ಅಂತರ್ಜಲದ ಮಟ್ಟವೂ ಕುಸಿಯುತ್ತಲೇ ಇದೆ. ಪ್ರಸ್ತುತ ೧೩ ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಗಳು ಹಾಗೂ ಒಂದು ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಜಿಲ್ಲೆಯ ೩೪೮ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಬಹುದು ಎಂದು ಅಂದಾಜಿಸಲಾಗಿದೆ.
೧೯೩ ಕೊಳವೆಬಾವಿ ನಿರ್ಮಾಣ:ಮಳೆ ಕೊರತೆಯಿಂದಾಗಿ ಜಿಲ್ಲೆಯ ಅನೇಕ ಕೊಳವೆಬಾವಿಗಳಲ್ಲಿ ಜಲಮೂಲಗಳು ಬತ್ತಿ ಹೋಗಿವೆ. ಇದೀಗ ಅಭಿವೃದ್ಧಿ ಹೆಸರಿನಲ್ಲಿ ನಾಲೆಗಳಿಗೆ ಹರಿಸುತ್ತಿದ್ದ ನೀರು ಕೂಡ ಸ್ಥಗಿತಗೊಳಿಸಲಾಗಿದೆ. ಪರಿಣಾಮ ನೀರಾವರಿ ಆಶ್ರಿತ ಪ್ರದೇಶದಲ್ಲೂ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದು ಬೋರ್‌ವೆಲ್‌ಗಳು ಬತ್ತಿಹೋಗಿವೆ. ನೀರಿನ ಕೊರತೆ ನೀಗಿಸುವ ಸಲುವಾಗಿ ಇದುವರೆಗೆ ೧೯೩ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಅವುಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಐದು ಗ್ರಾಮಗಳಲ್ಲಿ ನೀರಿನ ಸೆಲೆಯೂ ಬತ್ತಿ ಹೋಗಿದೆ.
ನಾಗಮಂಗಲ ತಾಲೂಕಿನ ಸಾತೇನಹಳ್ಳಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಪ್ರತಿ ದಿನ ನಾಲ್ಕು ಬಾರಿ ಟ್ಯಾಂಕರ್ ಮುಖೇನ ಗ್ರಾಮಕ್ಕೆ ನೀರು ಒದಗಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಕೆ.ಆರ್. ಪೇಟೆ ತಾಲೂಕಿನ ೩ ಹಾಗೂ ನಾಗಮಂಗಲ ತಾಲೂಕಿನ ೨ ಗ್ರಾಮಗಳಿಗೆ ಟ್ಯಾಂಕರ್ ನೀರನ್ನು ಪೂರೈಸಲಾಗುತ್ತಿತ್ತು. ಅಲ್ಲಿ ಖಾಸಗಿ ಬೋರ್‌ವೆಲ್ ಹಾಗೂ ಹೊಸ ಕೊಳವೆ ಬಾವಿ ನಿರ್ಮಿಸಿ ಸಮಸ್ಯೆಗೆ ಪರಿಹಾರ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.ಕೆ.ಆರ್. ಪೇಟೆ ತಾಲೂಕಿನಲ್ಲಿ ೯೫, ಮದ್ದೂರು-೩೦, ಮಳವಳ್ಳಿ-೨೨, ಮಂಡ್ಯ-೨೮, ನಾಗಮಂಗಲ-೧೦ ಹಾಗೂ ಪಾಂಡವಪುರ ತಾಲೂಕಿನ ೮ ಗ್ರಾಮ ಸೇರಿ ೧೯೩ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ೧೯೩ ಕೊಳವೆಬಾವಿಗಳನ್ನು ನಿರ್ಮಿಸಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ ಮಾತ್ರ ಒಂದೂ ಕೊಳವೆಬಾವಿ ನಿರ್ಮಿಸಿಲ್ಲ.
೧೫ ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ನಿಂದ ನೀರು:ಕೆ.ಆರ್. ಪೇಟೆ ತಾಲೂಕಿನ ಕೊಟಗಹಳ್ಳಿ, ಬಲ್ಲೇನಹಳ್ಳಿ, ಕಾಡಹೆಮ್ಮಿಗೆ, ನಾಯಕನಹಳ್ಳಿ, ಅಣ್ಣೇಚಿಕ್ಕನಹಳ್ಳಿ, ಜಯಪುರ, ಮದ್ದೂರು ತಾಲೂಕಿನ ಹೊಸಕೆರೆ, ಹೆಗ್ಗಡೆದೊಡ್ಡಿ, ಆನೆದೊಡ್ಡಿ, ಮಳವಳ್ಳಿ ತಾಲೂಕಿನ ಬಸವನಹಳ್ಳಿ, ಮಂಡ್ಯ ತಾಲೂಕಿನ ತೂಬಿನಕೆರೆ, ದ್ಯಾಪಸಂದ್ರ, ಬಿ.ಯರಹಳ್ಳಿ, ನಾಗಮಂಗಲ ತಾಲೂಕಿನ ಎ.ಶಾನುಭೋಗನಹಳ್ಳಿ, ಹೊಣಕೆರೆ ಗ್ರಾಮ ಸೇರಿದಂತೆ ೧೫ ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಕೊಡಲಾಗುತ್ತಿದೆ.
ಈ ಹಿಂದೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೆಸಲಾಗಿದ್ದ ಕೊಳವೆಬಾವಿಗಳು ಬತ್ತಿಹೋಗುವ ಹಂತ ತಲುಪಿವೆ. ಎರಡೂವರೆ ಇಂಚು ನೀರು ಬರುತ್ತಿದ್ದ ಕೊಳವೆಬಾವಿಗಳಲ್ಲಿ ಈಗ ಒಂದೂವರೆ ಇಂಚು ನೀರು ಬರುತ್ತಿದೆ. ಇತ್ತೀಚೆಗೆ ಅದೂ ಕಡಿಮೆಯಾಗುತ್ತಿದ್ದು, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ನಾಗಮಂಗಲ ತಾಲೂಕಿನ ಮಳೆಯಾಶ್ರಿತ ಪ್ರದೇಶಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲಾರಂಭಿಸಿದೆಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಹಕಾರಿ:
ಕಾವೇರಿ, ಹೇಮಾವತಿ, ಲೋಕಪಾವನಿ, ಶಿಂಷಾ ನದಿಗಳು ಜಿಲ್ಲೆಗಳು ಹರಿಯುತ್ತವೆ. ಇಷ್ಟಾಗಿಯೂ ಕೂಡ ಜಿಲ್ಲೆಯಲ್ಲಿ ಶೇ.೫೨ರಷ್ಟು ಕೃಷಿ ಪ್ರದೇಶ, ಶೇ.೪೮ರಷ್ಟು ಮಳೆಯಾಶ್ರಿತ ಪ್ರದೇಶವಿದೆ. ನೀರಾವರಿ ಪ್ರದೇಶಗಳ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮಗಳಿಗೆ ಕಾವೇರಿ ನದಿಯಿಂದಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಸಲಾಗುತ್ತಿದ್ದು, ಇದು ಸ್ವಲ್ಪ ಮಟ್ಟಿಗೆ ಜನ-ಜಾನುವಾರುಗಳ ದಾಹ ಇಂಗಿಸುವಲ್ಲಿ ಸಹಕಾರಿಯಾಗಿದೆ.ಮಳೆಯಾಶ್ರಿತ ಪ್ರದೇಶಗಳಿಗೂ ವಿಶ್ವೇಶ್ವರಯ್ಯ ನಾಲೆ, ಕಾವೇರಿ ನದಿ, ಕೆಲವು ಕೆರೆ ಮೂಲಗಳಿಂದ ನೀರನ್ನು ಲಿಫ್ಟ್ ಮಾಡಿ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಕೊಡಲಾಗುತ್ತಿದೆ. ಇದಲ್ಲದೆ ಸ್ಥಳೀಯವಾಗಿ ಬೋರ್‌ವೆಲ್‌ಗಳನ್ನು ಅವಲಂಬಿಸಿ ಕಿರು ನೀರು ಸರಬರಾಜು ಯೋಜನೆಗಳ ಮೂಲಕವೂ ನೀರು ಪೂರೈಕೆ ಮಾಡುತ್ತಿದ್ದು, ೪೦೦ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿರುವುದರಿಂದ ನೀರಿನ ಸಮಸ್ಯೆ ಉಲ್ಬಣಿಸುವುದು ಕಡಿಮೆಯಾಗಿದೆ.
೩೪೮ ಗ್ರಾಮಗಳಲ್ಲಿ ಸಮಸ್ಯೆ ಆತಂಕ:ಬಿಸಿಲು ತಾಪ ಹೀಗೆಯೇ ಮುಂದುವರೆದು ಮಳೆ ಬಾರದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ೩೪೮ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಹುದಾದ ಸಂಭವನೀಯ ಗ್ರಾಮಗಳ ಪಟ್ಟಿಯನ್ನೂ ಸಿದ್ಧಪಡಿಸಿದೆ.
ಈ ಪೈಕಿ ನಾಗಮಂಗಲ ತಾಲೂಕಿನಲ್ಲಿ ಅತಿ ಹೆಚ್ಚು ೧೩೯ ಗ್ರಾಮಗಳನ್ನು ಗುರುತಿಸಲಾಗಿದೆ. ಉಳಿದಂತೆ ಮಂಡ್ಯ ತಾಲೂಕಿನಲ್ಲಿ ೫೦, ಮಳವಳ್ಳಿ-೩೬, ಮದ್ದೂರು-೪೫, ಕೆ.ಆರ್. ಪೇಟೆ-೫೮, ಶ್ರೀರಂಗಪಟ್ಟಣ-೧೦, ಪಾಂಡವಪುರ ತಾಲೂಕಿನ ೧೦ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎನ್ನಲಾಗಿದೆ. ಹಿಂದಿನ ವರ್ಷಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದ ಹಳ್ಳಿಗಳನ್ನು ಆಧರಿಸಿ ಈಗ ಸಮಸ್ಯೆ ಎದುರಾಗಬಹುದಾದ ಹಳ್ಳಿಗಳನ್ನು ಪಟ್ಟಿ ಮಾಡಲಾಗಿದೆ.ಸಮರೋಪಾದಿಯಲ್ಲಿ ಕ್ರಮ
ಕುಡಿಯುವ ನೀರಿಗೆ ಸಮಸ್ಯೆ ತಾರಕಕ್ಕೇರದಂತೆ ಸಮರೋಪಾದಿಯಲ್ಲಿ ಕಾಮಗಾರಿಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಈಗಾಗಲೇ ೧೬೭ ಗ್ರಾಪಂಗಳಲ್ಲಿ ಜಲಸಂರಕ್ಷಣಾ ಅಭಿಯಾನ ಆರಂಭಿಸಿದ್ದ, ೯೧ ಪಂಚಾಯಿತಿಗಳಲ್ಲಿ ಕೆರೆ, ಕಟ್ಟೆ, ಗೋಕಟ್ಟೆ, ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅಂತರ್ಜಲ ಸಂರಕ್ಷಣೆಗೆ ಒತ್ತು ನೀಡಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೂ ಸಾಕಷ್ಟು ಹಣವನ್ನು ಮೀಸಲಿಟ್ಟಿದ್ದೇವೆ. ಸಮಸ್ಯೆ ಇರುವ ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ. ಪೈಪ್‌ಲೈನ್ ತೊಂದರೆ ಇರುವ ಕಡೆ ಹೊಸದಾಗಿ ಜೋಡಣೆ ಮಾಡಿ ನೀರು ಪೂರೈಸಲಾಗುತ್ತಿದೆ.-ಶೇಖ್ ತನ್ವೀರ್ ಆಸಿಫ್, ಸಿಇಒ, ಜಿಲ್ಲಾ ಪಂಚಾಯಿತಿ
ಸಮಸ್ಯೆ ನಿವಾರಣೆಗೆ ಕ್ರಮಟ್ಯಾಂಕರ್ ಮೂಲಕ ನಾಗಮಂಗಲ ತಾಲೂಕಿನ ಒಂದು ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮದ್ದೂರು, ಮಳವಳ್ಳಿ, ನಾಗಮಂಗಲ ಸೇರಿದಂತೆ ಇತರ ಕಡೆಯಿಂದಲೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲಾರಂಭಿಸಿದೆ. ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದ ಟಾಸ್ಕ್‌ಫೋರ್ಸ್‌ನಲ್ಲಿ ೨೫ ಲಕ್ಷ ರು. ಹಾಗೂ ಬರಪರಿಹಾರ ಹಣದಲ್ಲಿ ೨೦ ಲಕ್ಷ ರು. ಹಣ ಸೇರಿ ೩.೧೫ ಕೋಟಿ ರು. ಹಣವಿದೆ. ಸಮಸ್ಯೆ ಎದುರಾದ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಿ ಸಮಸ್ಯೆ ಬಿಗಡಾಯಿಸದಂತೆ ನಿವಾರಿಸಲಾಗುತ್ತಿದೆ.
- ಸಂಜೀವಪ್ಪ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯ್ತಿ, ಮಂಡ್ಯ