ಕೆರೆ ಕೋಡಿಯಿಂದ ಜಲಕಂಟಕ: ಜನಜೀವನವೇ ಅಸ್ತವ್ಯಸ್ತ

KannadaprabhaNewsNetwork | Published : Jul 28, 2024 2:00 AM

ಸಾರಾಂಶ

ಕಡೂರು, ತಾಲೂಕಿನ ಜನರ ಜೀವನಾಡಿಯಾಗಿದ್ದ ಮದಗದಕೆರೆ ಭೋರ್ಗರೆಯುತ್ತಿರುವ ಕೆರೆ ಅಪಾಯದ ಮಟ್ಟ ಮೀರುತ್ತಿರುವುದರಿಂದ ಆಗುತ್ತಿರುವ ಜಲಕಂಟಕ್ಕೆ ಜನಜೀವನವೇ ಅಸ್ತವ್ಯಸ್ತವಾಗಿದೆ.

ಕಾಲುವೆಗಳಲ್ಲೂ ಹೆಚ್ಚಿನ ಪ್ರಮಾಣದ ನೀರು ಹರಿದು ಕೆರೆ ರಸ್ತೆ ಜಲಾವೃತ । ಮರಗಳು ಬಿದ್ದು ರಸ್ತೆ ಸಂಪರ್ಕ ಬಂದ್

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಜನರ ಜೀವನಾಡಿಯಾಗಿದ್ದ ಮದಗದಕೆರೆ ಭೋರ್ಗರೆಯುತ್ತಿರುವ ಕೆರೆ ಅಪಾಯದ ಮಟ್ಟ ಮೀರುತ್ತಿರುವುದರಿಂದ ಆಗುತ್ತಿರುವ ಜಲಕಂಟಕ್ಕೆ ಜನಜೀವನವೇ ಅಸ್ತವ್ಯಸ್ತವಾಗಿದೆ.ಒಂದು ವಾರದಿಂದ ಗಿರಿ ಪ್ರದೇಶಗಳಲ್ಲಿ ಬೀಳುತ್ತಿರುವ ಮಳೆಗೆ ನೀರಿನ ಹರಿವು ಹೆಚ್ಚಾಗಿ 65 ಅಡಿ ಸಾಮರ್ಥ್ಯದ ಮದಗದ ಕೆರೆಯ ಒಳಹರಿವು ಯಥೇಚ್ಛವಾಗಿದ್ದು. ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಹೆಚ್ಚಾಗುವ ಮೂಲಕ ಶುಕ್ರವಾರ ಕೋಡಿ ಬಿದ್ದಿದ್ದು ಶನಿವಾರ ಕೋಡಿ ಮೇಲೆ ಸುಮಾರು ಮೂರು ಅಡಿಯಷ್ಟು ನೀರು ಹೆಚ್ಚಾದ ಕಾರಣ ಕಾಲುವೆಗಳಲ್ಲೂ ಹೆಚ್ಚಿನ ಪ್ರಮಾಣದ ನೀರು ಹರಿದು ಕೆರೆಗೆ ಹೋಗುವ ರಸ್ತೆ ಜಲಾವೃತವಾಗಿ ಜನ ಜನಸಂಚಾರಕ್ಕೆ ಅಡ್ಡಿಯಾಗಿದೆ.ಅಪಾಯದ ಮಟ್ಟ ಮೀರಿ ರಸ್ತೆಗಳಿಗೆ ಕೆರೆ ನೀರು ನುಗ್ಗಿರುವುದರಿಂದ ಎಮ್ಮೇದೊಡ್ಡಿಯ ಮುಸ್ಲಾಪುರದ ಹಟ್ಟಿಯಿಂದ ಕೆರೆಗೆ ತೆರಳುವ ದಾರಿಯನ್ನು ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಿ ಪೊಲೀಸರ ಬಿಗಿ ಬಂದೋಬಸ್ ಮಾಡಲಾಗಿದೆ. ರಾಯಗಾಲುವೆಗೆ ಹೋಗುವ ಕಾಲುವೆ ಕೂಡ ತುಂಬಿ ರಸ್ತೆಯ ಮೇಲೆ ಹರಿಯುತ್ತಾ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಸಾರ್ವಜನಿಕರು ಮುಂದೆ ಹೋದದಂತೆ ಅಡ್ಡಿಯಾಗಿದೆ.

ಕೆರೆ ಮೇಲಿನ ಹಲಸಿನಮರದಹಟ್ಟಿ, ಬಿಳಚೇನಹಳ್ಳಿ, ಕೋಟೆ, ಸಿದ್ದರಹಳ್ಳಿ, ಹೊಸ ಸಿದ್ದರಹಳ್ಳಿಗಳು ಸೇರಿದಂತೆ ಸುಮಾರು7 ಗ್ರಾಮಗಳು ರಸ್ತೆ ಸಂಪರ್ಕ ಕಡಿದುಕೊಂಡಿರುವ ಜೊತೆ ಮುಸ್ಲಾಪುರದ ಹಟ್ಟಿ, ಲಕ್ಕೇನಹಳ್ಳಿ ಸೇರಿ 7 ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತವಾಗಿ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೂ ಹೋಗದಂತಾಗಿದೆ. ಇನ್ನು ಪರದೇಶಿ ಹಾಳ್‌ ನಲ್ಲಿ ಮರಗಳು ಬಿದ್ದು ರಸ್ತೆ ಸಂಪರ್ಕ ಬಂದ್ ಆಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಗ್ರಾಮಸ್ಥರು ಮರಗಳನ್ನು ತೆರವುಗೊಳಿಸಿ ರಸ್ತೆಗಳ ಮೇಲೆ ಹರಿಯುತ್ತಿರುವ ನೀರು ಮುಂದೆ ಹೋಗುವಂತೆ ಕ್ರಮ ವಹಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಹೊಗರೇಹಳ್ಳಿ ಶಶಿ ಮಾತನಾಡಿ, ಮದಗದ ಕೆರೆ ಈ ಬಾರಿ ಕೋಡಿ ಬಿದ್ದು ಹರಿಯುವ ಮೂಲಕ ನೀರಿನ ರಭಸ ಹೆಚ್ಚಾಗಿ ರಸ್ತೆ ಸಂಪರ್ಕ ಕಡಿತವಾಗಿ ಅನೇಕ ಕಡೆ ಜನಸಂಚಾರ ಸಂಪೂರ್ಣ ಬಂದಾಗಿದೆ. ನೀರು ಹೆಚ್ಚಿನ ಪ್ರಮಾಣದಿಂದ ಲಕ್ಕೇನಹಳ್ಳಿ ಸೇತುವೆ ಸೇರಿ ಕಾಲುವೆ ಮಾರ್ಗದ ಅನೇಕ ಹಳೇ ಸೇತುವೆಗಳು, ರಸ್ತೆಗಳು ಶಿಥಿಲವಾಗಿವೆ. ಪ್ರವಾಹದಂತೆ ಉಕ್ಕುತ್ತಿರುವ ನೀರಿನಿಂದ ರಾಯಗಾಲುವೆ, ಬುಕ್ಕಸಾಗರ ಮಾರ್ಗದ ಕಾಲುವೆಗಳು ಹರಿದ ನೀರು ಅಡಕೆ ತೋಟಗಳು ಹೊಲಗದ್ದೆಗಳಿಗೆ ನುಗ್ಗಿ ಹೆಚ್ಚಿನ ಹಾನಿಉಂಟಾಗಿದೆ ಎಂದರು. ಗ್ರಾಮದಲ್ಲಿ ವಾಹನ ಸಂಚಾರ ಮತ್ತು ವಿದ್ಯುತ್ ಸಂಪರ್ಕ ಕಡಿತದಿಂದ ಜನರು ದ್ವೀಪದಲ್ಲಿರುವಂತೆ ಬದುಕು ನಡೆಸುತ್ತಿದ್ದು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ. ಕೆರೆ ನೀರಿನ ಹರಿವು ಇದೇ ರೀತಿ ಮುಂದುವರಿದರೆ ಈ ಗ್ರಾಮದ ಸಮಸ್ಯೆಗಳಿಂದ ಪರಿಸ್ಥಿತಿ ಬಿಗಾಡಲಿಯಿಸಲಿದೆ ಎಂದರು. ಎಮ್ಮೆದೊಡ್ಡಿ ಗ್ರಾಪಂ ಅಧ್ಯಕ್ಷ ಶಶಿಧರ್ ನಾಯ್ಕ, ಚಿಕ್ಕಿಂಗಳ ಗ್ರಾಪಂ ಅಧ್ಯಕ್ಷ ಪ್ರಕಾಶ್ ನಾಯ್ಕ, ಗ್ರಾಮಸ್ಥರಾದ ಶಾಂತ ಕುಮಾರ್, ಯೋಗೀಶ್ ನಾಯ್ಕ್, ವೆಂಕಟೇಶ್ ರೆಡ್ಡಿ, ಭೋವಿ ಸಮಾಜದ ಅಧ್ಯಕ್ಷ ನಾಗರಾಜ್, ವಿನಯ್, ಎಮ್ಮೆದೊಡ್ಡಿ ಸೋಮೇಶ್, ಪ್ರಕಾಶ್,ಧನುಷ್, ಮಂಜುನಾಥ್ ಮತ್ತಿತರಿದ್ದರು. 27ಕೆಕೆಡಿಯು.1.

ಕಡೂರು ತಾಲ್ಲೂಕಿನ ಮದಗದಕೆರೆಯು ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನಲೆಯಲ್ಲಿ ಕೆರೆಯ ಮಾರ್ಗದ ರಸ್ತೆಗಳು ಮುಳುಗಡೆಯಾಗಿರುವುದು. 27ಕೆಕೆಡಿಯು1ಎ.

ಮದಗದಕೆರೆ ಮಾರ್ಗದಲ್ಲಿ ಸಂಪರ್ಕ ಕಡಿತಗೊಂಡ ಮಾರ್ಗವನ್ನು ಗ್ರಾಮಸ್ಥರು ಪರಿಶೀಲಿಸಿದರು. ಹೊಗರೇಹಳ್ಳಿ ಶಶಿ, ಪ್ರಕಾಶ್ನಾಯ್ಕ್, ಶಶಿಧರ್ನಾಯ್ಕ್, ಶಾಂತಕುಮಾರ್, ಸೋಮೇಶ್, ನಾಗರಾಜ್, ಯೋಗೀಶ್, ವಿನಯ್ ಮತ್ತಿತರಿದ್ದರು.

Share this article