ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಅಧಿಕಾರಿಗಳ ಜೊತೆಗೂಡಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೆಗೆ ಒಳಗಾಗಿದೆ.3 ತಿಂಗಳಿನಿಂದ ಅಧಿಕಾರಿಗಳು ಒಟ್ಟಿಗೆ ಜಿಲ್ಲೆಯಾದ್ಯಂತ ತಿರುಗಾಡಿ ಬರದ ನಿಜಸ್ಥಿತಿ ಅಧ್ಯಯನ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿ ಅಗತ್ಯ ಬರ ಪರಿಹಾರ ಪಡೆಯುವಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದಾರೆ. ಬರದ ಹಿನ್ನೆಲೆಯಲ್ಲಿ ಇಲಾಖಾವಾರು ಸಭೆಗಳನ್ನು ನಡೆಸಿ, ಬಳಿಕ ತಾಲೂಕುವಾರು ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ರಚಿಸಿ ಅವರಿಂದ ವಾಸ್ತವ ವರದಿ ಪಡೆದುಕೊಂಡು ಸರ್ಕಾರದಿಂದ ಜಿಲ್ಲೆಗೆ ಸೂಕ್ತ ಪರಿಹಾರ ದೊರಕಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಜಿಲ್ಲೆಯ ಜನರಿಗೆ ಕುಡಿಯುವ ನೀರು, ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಕ್ರಮವಹಿಸಿದ್ದಾರೆ. ಪ್ರತಿ ಗುರುವಾರ ಬರ ನಿರ್ವಹಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಕೈಗೊಂಡಿದ್ದಾರೆ. ಅಲ್ಲದೆ, ಬರುವ ಜೂನ್‌ವರೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಸಮಸ್ಯಾತ್ಮಕ ಗ್ರಾಮಗಳಲ್ಲಿ ಈಗಾಗಲೇ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಘಟಪ್ರಭಾ ನದಿತಟದಲ್ಲಿ ನೀರು ಕಡಿಮೆಯಾಗಿರುವುದನ್ನು ಮನಗಂಡು ಹಿಡಕಲ್ ಜಲಾಶಯದಿಂದ 2 ಟಿ.ಎಂ.ಸಿ ನೀರು ಬಿಡುಗಡೆಗೆ ಕ್ರಮವಹಿಸಿದ್ದಾರೆ.ಜಿಲ್ಲಾಧಿಕಾರಿಗಳ ಬರ ನಿರ್ವಹಣೆಯ ಕಾರ್ಯದ ಪ್ರತಿ ಹಂತದಲ್ಲೂ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಸಲಹೆ ಸೂಚನೆ ನೀಡಿ ಸರ್ಕಾರದಿಂದ ಬರಬೇಕಿರುವ ಪರಿಹಾರ ಕಾಮಗಾರಿಗಾಗಿ ಅಗತ್ಯ ಅನುದಾನ ತರಲು ಸಾಥ್ ನೀಡಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಉಂಟಾಗಿರುವ ಬರವನ್ನು ನೀಗಿಸಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನದಿಂದ ಜಿಲ್ಲೆಯ ಜನತೆಗೆ ಬರದ ಬಿಸಿ ತಟ್ಟದಂತೆ ನೋಡಿಕೊಳ್ಳಲು ಎನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.
ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಸ್ಫೂರ್ತಿ:ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ 6 ತಿಂಗಳಲ್ಲಿ ಜಿಲ್ಲೆಯ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ಕುರಿತಂತೆ ಅಭ್ಯಾಸ ಮಾಡುವ ಹಾಗೂ ಪರೀಕ್ಷೆ ಎದುರಿಸುವ, ಬಾಲ್ಯ ವಿವಾಹದಿಂದ ಮಕ್ಕಳ ಮೇಲೆ ಉಂಟಾಗುವ ಪರಿಣಾಮ ಸೇರಿದಂತೆ ಇನ್ನೂ ಅನೇಕ ಉಪಯುಕ್ತ ಮಾಹಿತಿಯನ್ನು ಮಕ್ಕಳಿಗೆ ಮನದಟ್ಟುವಂತೆ ಭಾವನಾತ್ಮಕವುಳ್ಳ ಪತ್ರವನ್ನು ಪ್ರತಿ ತಿಂಗಳು ಬರೆಯುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 7 ಪತ್ರ ಬರೆದಿದ್ದು, ಇದಕ್ಕೆ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಹಿಳಾ ಶಕ್ತಿ ಇಮ್ಮಡಿ: ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ನಡೆಸಲಾದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಂಡು ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಮೊದಲ ಬಾರಿ ಮತದಾನ ಮಾಡಲು 21,919 ಯುವ ಮತದಾರರು ಸಿದ್ಧವಾಗಿದ್ದು, ಅದರಲ್ಲೂ 16,270 ಮಹಿಳಾ ಯುವ ಮತದಾರರೇ ಮೇಲುಗೈ ಸಾಧಿಸಿದ್ದಾರೆ. ಇದರಿಂದ ಮಹಿಳಾ ಶಕ್ತಿ ಇಮ್ಮಡಿಗೊಂಡಂತಾಗಿದೆ.ಕಳೆದ ಚುನಾವಣೆಗಳಲ್ಲಿ ಮಹಿಳೆಯರು ಮತದಾನದಿಂದ ವಂಚಿತರಾಗುತ್ತಿದ್ದರು. ಜಿಲ್ಲೆಯಾದ್ಯಂತ ಪುರುಷ ಮತದಾರರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಮಹಿಳೆಯರ ನಿರಾಸಕ್ತಿಯಿಂದ ಮತ ಹಾಕುವ ಸಂಖ್ಯೆ ಕಡಿಮೆ ಇರುತ್ತಿತ್ತು. ಆದರೆ, ಇದೀಗ ಮತದಾರರ ಪಟ್ಟಿಯಲ್ಲಿ ಬಾದಾಮಿ ಮತಕ್ಷೇತ್ರ ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಅಧಿಕವಾಗಿರುವುದು ಕಂಡು ಬಂದಿದೆ. ಜಿಲ್ಲಾಧಿಕಾರಿಗಳು ಮಹಿಳಾ ಮತದಾರರ ನೋಂದಣಿಗೆ ಹೆಚ್ಚಿನ ಮುತುವರ್ಜಿ ವಹಿಸಿರುವುದೇ ಇದಕ್ಕೆ ಕಾರಣ.
6 ತಿಂಗಳ ಕಾರ್ಯ ಅನನ್ಯ: ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು 6 ತಿಂಗಳು ಪೂರೈಸಿದ್ದಾರೆ. ಈ ಅವಧಿಯಲ್ಲಿ ಅವರು ಕೈಗೊಂಡಿರುವ ಸಮರ್ಥ ಬರ ನಿರ್ವಹಣೆ, ಶಾಲಾ ಮಕ್ಕಳಿಗೆ ಸ್ಫೂರ್ತಿದಾಯಕ ಪತ್ರ ಆಂದೋಲನ ಸೇರಿದಂತೆ ಹತ್ತು ಹಲವು ಕಾರ್ಯಗಳು ಶ್ಲಾಘನೆಗೆ ಒಳಗಾಗಿದೆ.