ತಪ್ಪದ ಜನತಾ ಬಜಾರ್‌ ವ್ಯಾಪಾರಸ್ಥರ ಗೋಳು

KannadaprabhaNewsNetwork | Published : Aug 19, 2024 12:58 AM

ಸಾರಾಂಶ

ಒಳಚರಂಡಿ ಕಾಮಗಾರಿ ನೆಪದಲ್ಲಿ ಕಳೆದ 8-10 ದಿನಗಳಿಂದ ಇಲ್ಲಿನ ಜನತಾ ಬಜಾರ್‌ನ ಎದುರಿನ ರಸ್ತೆಯಲ್ಲಿ ತೆಗ್ಗು ತೆಗೆದು ಹಾಗೆಯೇ ಬಿಟ್ಟಿದ್ದು, ವ್ಯಾಪಾರಸ್ಥರು, ಜನತೆ ಸಂಚರಿಸಲು ಸಂಕಷ್ಟ ಪಡುವಂತಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಒಂದು ಕಡೆ ಉದ್ಘಾಟನೆಯಾಗಿ ವರ್ಷ ಕಳೆದರೂ ವ್ಯಾಪಾರಕ್ಕೆ ಅವಕಾಶವಿಲ್ಲದ ಕಟ್ಟಡ. ಮತ್ತೊಂದು ಕಡೆ ಮಹಾನಗರ ಪಾಲಿಕೆ ಒಳಚರಂಡಿ ಕಾಮಗಾರಿಗಾಗಿ ತೆಗೆದ ತೆಗ್ಗುಗಳು. ಇಲ್ಲಿ ವ್ಯಾಪಾರ ಮಾಡುವುದಿರಲಿ ಸಂಚರಿಸಲೂ ಆಗದಂತಹ ಸ್ಥಿತಿ.

ಇದು ಜನನಿಬಿಡ ಪ್ರದೇಶವಾಗಿರುವ ಕಿತ್ತೂರು ಚೆನ್ನಮ್ಮ ವೃತ್ತದ ಕೂಗಳತೆಯ ದೂರದಲ್ಲಿರುವ ಜನತಾ ಬಜಾರ್‌ ವ್ಯಾಪಾರಸ್ಥರ ಸ್ಥಿತಿ. ಸಂಕಷ್ಟಗಳ ಸರಮಾಲೆಯಲ್ಲಿಯೇ ಕಾಲ ಕಳೆಯುತ್ತಿರುವ ಜನತಾ ಬಜಾರ್‌ ವ್ಯಾಪಾರಸ್ಥರಿಗೆ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ. ಒಳಚರಂಡಿ ಕಾಮಗಾರಿ ನೆಪದಲ್ಲಿ ಕಳೆದ 8-10 ದಿನಗಳಿಂದ ಇಲ್ಲಿನ ಜನತಾ ಬಜಾರ್‌ನ ಎದುರಿನ ರಸ್ತೆಯಲ್ಲಿ ತೆಗ್ಗು ತೆಗೆದು ಹಾಗೆಯೇ ಬಿಟ್ಟಿದ್ದು, ವ್ಯಾಪಾರಸ್ಥರು, ಜನತೆ ಸಂಚರಿಸಲು ಸಂಕಷ್ಟ ಪಡುವಂತಾಗಿದೆ. ಯಾವಾಗ ಈ ತೆಗ್ಗುಗಳನ್ನು ಮುಚ್ಚಿ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿಕೊಡುತ್ತಾರೆ ಎಂದು ಕಾಯುವ ಪರಿಸ್ಥಿತಿ ಎದುರಾಗಿದೆ.

₹18.50 ಕೋಟಿ ವೆಚ್ಚದಲ್ಲಿ ನಿರ್ಮಾಣ

ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ಅಡಿ ₹18.50 ಕೋಟಿ ವೆಚ್ಚದಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರ ಅನುಕೂಲಕ್ಕಾಗಿ ಎರಡು ಅಂತಸ್ತಿನ ಸುಂದರ ಮಾರುಕಟ್ಟೆ ನಿರ್ವಿುಸಲಾಗಿದೆ. ನೆಲ ಮಹಡಿಯಲ್ಲಿ ತರಕಾರಿ ಮಾರಾಟದ 50 ಕಟ್ಟೆ ಮತ್ತು 31 ಮಳಿಗೆ ನಿರ್ವಿುಸಲಾಗಿದೆ. ಮೊದಲನೇ ಮಹಡಿಯಲ್ಲಿ 71 ಕಟ್ಟೆ, 22 ಮಳಿಗೆ ನಿರ್ವಿುಸಲಾಗಿದೆ. ಎರಡನೇ ಮಹಡಿಯಲ್ಲಿ 20 ಕೊಠಡಿ (ಕಚೇರಿ)ಗಳನ್ನು ನಿರ್ವಿುಸಲಾಗಿದೆ.

ವರ್ಷದ ಹಿಂದೆಯೇ ಉದ್ಘಾಟನೆ

ಈ ಜನತಾ ಬಜಾರ್‌ ಕಟ್ಟಡವನ್ನು ಕಳೆದ 2023ರ ಫೆಬ್ರವರಿ 19ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹಾಲಪ್ಪ ಆಚಾರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಪ್ರಸಾದ ಅಬ್ಬಯ್ಯ ಮತ್ತಿತರ ಜನಪ್ರತಿನಿಧಿಗಳು ಉದ್ಘಾಟಿಸಿದ್ದರು. ಆದರೆ, ಮಾರುಕಟ್ಟೆ ಉದ್ಘಾಟನೆ ಆದಾಗಿನಿಂದ ಒಂದೇ ಒಂದು ದಿನ ಈ ಕಟ್ಟಡದಲ್ಲಿ ವ್ಯಾಪಾರ ಮಾಡಿಲ್ಲ. ಯಾವಾಗ ನಮಗೆ ಈ ಹೊಸ ಕಟ್ಟಡದಲ್ಲಿ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿಕೊಡುತ್ತಾರೆ ಎಂದು ವ್ಯಾಪಾರಸ್ಥರು ಚಾತಕ ಪಕ್ಷಿಯಂತೆ ಕಾಯುತ್ತಾ ಇದೇ ಮಾರುಕಟ್ಟೆಯ ಹೊರಭಾಗದಲ್ಲಿರುವ ಮುಖ್ಯರಸ್ತೆಯಲ್ಲಿ ತರಕಾರಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ.

ಈಗ ಹು-ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಇಲ್ಲಿನ ರಸ್ತೆಯಲ್ಲಿ ಹಾದು ಹೋಗಿರುವ ಒಳಚರಂಡಿ ಪೈಪ್‌ಲೈನ್‌ ದುರಸ್ತಿಗಾಗಿ ಒಂದು ಕಡೆ ಒಳಚರಂಡಿ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದರೂ ತೆಗೆದ ಗುಂಡಿ ಮುಚ್ಚುವ ಕಾರ್ಯವಾಗಿಲ್ಲ. ಈ ಕುರಿತು ಇಲ್ಲಿನ ವ್ಯಾಪಾರಸ್ಥರು ಪಾಲಿಕೆ ಅಧಿಕಾರಿಗಳಿಗೆ ಕೇಳಿದರೆ ನಾಳೆ ಮುಚ್ಚುತ್ತೇವೆ, ನಾಡಿದ್ದು ಮುಚ್ಚುತ್ತೇವೆ ಎಂದು ದಿನ ದೂಡುತ್ತಿದ್ದಾರೆ.

ವ್ಯಾಪಾರಕ್ಕೂ ಕಲ್ಲು

ಒಂದು ಕಡೆ ಉದ್ಘಾಟನೆಗೊಂಡು ಸಿದ್ಧವಾಗಿ ನಿಂತಿರುವ ಕಟ್ಟಡದಲ್ಲಿ ಮಾರಾಟಕ್ಕೆ ಅವಕಾಶ ನೀಡುತ್ತಿಲ್ಲ. ಮತ್ತೊಂದು ಕಡೆ ರಸ್ತೆಯಲ್ಲಿಯೇ ಹೇಗೋ ವ್ಯಾಪಾರಸ್ಥರು ತರಕಾರಿ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅದಕ್ಕೂ ಪಾಲಿಕೆ ಅಧಿಕಾರಿಗಳು ಕಲ್ಲು ಹಾಕಿರುವುದು ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. 2-3 ದಿನದೊಳಗೆ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಗುಂಡಿಗಳನ್ನು ಮುಚ್ಚದೇ ಹೋದಲ್ಲಿ ವ್ಯಾಪಾರಸ್ಥರೆಲ್ಲರೂ ಸೇರಿ ನಾವೇ ಮುಚ್ಚುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚರಂಡಿಯಂತಾದ ರಸ್ತೆ

ಜನತಾ ಬಜಾರ್‌ನ ಕಟ್ಟಡದ ಎದುರಿಗೆ ತೆಗ್ಗು ತೆಗೆದು ಪಕ್ಕದಲ್ಲಿ ಮಣ್ಣಿನ ಗುಡ್ಡೆ ಹಾಕಿ ಹಾಗೆ ಬಿಟ್ಟಿದ್ದಾರೆ. ಇನ್ನು ಇದೇ ರಸ್ತೆಯಲ್ಲಿ ಸಂಚರಿಸುವ ವೇಳೆ 10ಕ್ಕೂ ಅಧಿಕ ಸಾರ್ವಜನಿಕರು ಕಾಲುಜಾರಿ ಬಿದ್ದಿದ್ದಾರೆ. ಇಲ್ಲಿ ಸಂಚರಿಸಲೂ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗನೆ ಈ ದುರಸ್ತಿ ಕಾರ್ಯ ಪೂರ್ಣಗೊಳಿಸಿ ರಸ್ತೆಯುದ್ದಕ್ಕೂ ಹಾಕಿರುವ ಮಣ್ಣನ್ನು ತೆರವುಗೊಳಿಸಿ ವ್ಯಾಪಾರಕ್ಕೆ ಹಾಗೂ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ವ್ಯಾಪಾರಸ್ಥರು ಮನವಿ ಮಾಡಿದ್ದಾರೆ.ಕಲ್ಲು ಹಾಕ್ಯಾರ

ನಮ್ ಪಾಡು ಯಾರಿಗೂ ಬರಬಾರ್ದು, ಬಜಾರು ಎಲ್ಲ ರೆಡಿ ಮಾಡ್ಯಾರ. ಆದ್ರ ನಮಗೆ ತರಕಾರಿ ಮಾರಾಕ ಕೊಡವಲ್ರು. ಹಾಗೋ ಹೀಗೋ ಈ ಬಜಾರ ಮುಂದಿನ ರಸ್ತೆದಾಗ ವ್ಯಾಪಾರ ಮಾಡ್ಕೊಂಡು ಜೀವನಾ ಸಾಗುಸ್ತಾ ಇದ್ವಿ. ಅದಕ್ಕೂ ಕಲ್ಲು ಹಾಕ್ಯಾರ.

ರಾಜು ವಾಲ್ಮೀಕಿ, ಚಿಕ್ಕ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿಗುಂಡಿ ಮುಚ್ಚಲು ಸೂಚನೆ

ಜನತಾ ಬಜಾರ್‌ ಎದುರು ಒಳಚರಂಡಿ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಬಹುತೇಕ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸೋಮವಾರ ಇಲ್ಲವೇ ಮಂಗಳವಾರದೊಳಗೆ ತೆಗೆದಿರುವ ಗುಂಡಿಗ‍ಳನ್ನು ಮುಚ್ಚಿಸಲು ಸೂಚನೆ ನೀಡಲಾಗುವುದು.

ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತ

Share this article