ಜನಿವಾರ ಕೇವಲ ನೂಲಲ್ಲ, ಬ್ರಾಹ್ಮಣರ ಅಸ್ಮಿತೆ: ಮಹೇಶ್ ಕಜೆ

KannadaprabhaNewsNetwork | Published : Apr 22, 2025 1:46 AM

ಸಾರಾಂಶ

ಸಿಇಟಿ ಸಂದರ್ಭ ಜನಿವಾರ ತೆಗೆಸಿರುವ ಘಟನೆಯನ್ನು ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ವಿವಿಧ ಬ್ರಾಹ್ಮಣ ಸಂಘಟನೆಗಳ ಸಹಭಾಗಿತ್ವದಲ್ಲಿ ಸೋಮವಾರ ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.

ಸಿಇಟಿ ವೇಳೆ ಜನಿವಾರ ತೆಗೆಸಿದ ಘಟನೆ ಖಂಡಿಸಿ ಪುತ್ತೂರಲ್ಲಿ ಬ್ರಾಹ್ಮಣರ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಪುತ್ತೂರು

ಜನಿವಾರ ಕೇವಲ ನೂಲಲ್ಲ, ಅದು ಬ್ರಾಹ್ಮಣರ ಅಸ್ಮಿತೆ. ಅದಕ್ಕೆ ಕೈ ಹಾಕಿದರೆ ತಾಯಿ ಗಾಯತ್ರಿಯ ಸೆರಗಿಗೆ ಕೈ ಹಾಕಿದಂತೆ. ಇದಕ್ಕೆ ಕೊನೆಯ ಉಸಿರು ಇರುವ ತನಕ ಅವಕಾಶ ನೀಡಲಾರೆವು. ಭಾರತದ ಸನಾತನ ಧರ್ಮ ಉಳಿಯಲು ಬ್ರಾಹ್ಮಣ್ಯ ಉಳಿಯಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ, ನ್ಯಾಯವಾದಿ ಮಹೇಶ್ ಕಜೆ ಹೇಳಿದರು. ಅವರು ಸಿಇಟಿ ಸಂದರ್ಭ ಜನಿವಾರ ತೆಗೆಸಿರುವ ಘಟನೆಯನ್ನು ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ವಿವಿಧ ಬ್ರಾಹ್ಮಣ ಸಂಘಟನೆಗಳ ಸಹಭಾಗಿತ್ವದಲ್ಲಿ ಸೋಮವಾರ ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸರ್ಕಾರದ ಕುಮ್ಮಕ್ಕಿನಿಂದ ಇಂಥಹ ಜನಿವಾರವನ್ನು ಕತ್ತರಿಸುವ ಘೋರ ಅಪರಾಧ ನಡೆದಿದೆ. ಈ ಪ್ರತಿಭಟನೆಯು ಅಧಿಕಾರದ ತೆವಲಿಗಾಗಿ ನಡೆಯುವ ರಾಜಕೀಯ ಪ್ರತಿಭಟನೆಯಲ್ಲ. ಬ್ರಾಹ್ಮಣರ ಅಸ್ತಿತ್ವ, ಸಂಸ್ಕಾರ, ಅಸ್ಮಿತೆಯ ಪ್ರತೀಕವನ್ನು ಉಳಿಸಕೊಳ್ಳುವ ಹಾಗೂ ಅದಕ್ಕೆ ಗೌರವ ನೀಡುವುದಕ್ಕಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬ್ರಾಹ್ಮಣ ಸಮಾಜಕ್ಕೆ ಧಕ್ಕೆ ಸಂಭವಿಸಿದರೆ ಕೈಕಟ್ಟಿ ಕುಳಿತುಕೊಳ್ಳುವ ಜಾಯಮಾನ ನಮ್ಮದಲ್ಲ. ಈ ಸಮಾಜದ ಮೇಲೆ ಏನೂ ಮಾಡಬಹುದು ಎಂಬ ಯೋಚನೆ ಬೇಡ. ಬ್ರಾಹ್ಮಣ ಹಾಗೂ ಗೋವಿನ ಮೇಲೆ ದಾಳಿ ನಡೆಸಿದರೆ ಇಡೀ ಭೂಮಿ ನಾಶವಾಗುತ್ತದೆ. ಇದೀಗ ಜನಿವಾರ ಕತ್ತರಿಸಿ ವಿದ್ಯಾರ್ಥಿಯ ಭವಿಷ್ಯದ ಜೊತೆ ಆಟ ಆಡಿದ್ದಾರೆ. ಮೊನ್ನೆಯ ಘಟನೆಯ ಹಿಂದೆ ಯಾರೆಲ್ಲ ಇದ್ದಾರೆ ಎಂಬ ತನಿಖೆ ನಡೆಯಬೇಕು. ಇದರ ಹಿಂದಿನ ಹುನ್ನಾರ ಬೆಳಕಿಗೆ ಬರಬೇಕು ಎಂದು ಅವರು ಆಗ್ರಹಿಸಿದರು.ಮತ್ತೆ ಕೊಡಲಿ ಹಿಡಿಯುವ ಸಂದರ್ಭ ಬರಹುದು: ಪುತ್ತಿಲ

ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಬ್ರಾಹ್ಮಣ ಸಮಾಜವು ಧಾರ್ಮಿಕ ಪರಂಪರೆಯನ್ನು ಉಳಿಸುವ ಕೆಲಸ ಮಾಡಿದೆ. ಇದೀಗ ವಿದ್ಯಾರ್ಥಿಯ ಜನಿವಾರ ಕತ್ತರಿಸಿ ತೆಗೆಯುವ ಮೂಲಕ ಇಡೀ ಹಿಂದೂ ಸಮಾಜಕ್ಕೆ ಅಪಮಾನ ಮಾಡಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆದಲ್ಲಿ ಮತ್ತೆ ಕೊಡಲಿ ಹಿಡಿಯುವ ಸಂದರ್ಭ ಬರಬಹುದು. ಈ ನಿಟ್ಟಿನಲ್ಲಿ ಬ್ರಾಹ್ಮಣ ಸಮಾವೇಶ ಮಾಡುವ ಅಗತ್ಯವಿದೆ. ಈ ಮೂಲಕ ಸಂಘರ್ಷ ಮಾಡಲೂ ನಾವು ಸಿದ್ಧ ಎಂದರು.ಪ್ರತಿಭಟನೆಯಲ್ಲಿ ವಿಶ್ವೇಶ್ವರ ಭಟ್ ಬಂಗಾರಡ್ಕ, ಜಿ.ಎಲ್.ಬಲರಾಮ ಆಚಾರ್ಯ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಡಾ.ಸುರೇಶ್ ಪುತ್ತೂರಾಯ, ನ್ಯಾಯವಾದಿ ಎನ್.ಕೆ. ಜಗನ್ನಿವಾಸ ರಾವ್, ಗೋಪಾಲಕೃಷ್ಣ ಹೇರಳೆ, ಮುಳಿಯ ಕೇಶವ ಪ್ರಸಾದ್, ವಿದ್ಯಾ ಆರ್. ಗೌರಿ ಮತ್ತಿತರರು ಮಾತನಾಡಿದರು.

ಉದ್ಯಮಿ ಸತ್ಯಶಂಕರ ಭಟ್,ಶಿವಶಂಕರ ಭಟ್‌, ಮಾಜಿ ಶಾಸಕ ಸಂಜೀವ ಮಠಂದೂರು ಮತ್ತಿತರರು ಉಪಸ್ಥಿತರಿದ್ದರು.ಶಾಂತಿ ಮಂತ್ರದೊಂದಿಗೆ ಪ್ರತಿಭಟನೆ ಆರಂಭಗೊಂಡಿತು. ಪ್ರತಿಭಟನಾ ಸಭೆಯ ಬಳಿಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಕೆ ಮಾಡಲಾಯಿತು.

Share this article