ಜಾತ್ರಾ ಮಹೋತ್ಸವ ಜನಪದರ ದೂರದೃಷ್ಟಿಯ ಪರಿಕಲ್ಪನೆ: ನಿರ್ಮಲಾನಂದನಾಥ ಶ್ರೀ

KannadaprabhaNewsNetwork | Published : Apr 11, 2025 12:35 AM

ಸಾರಾಂಶ

ಈ ಸುತ್ತಲಿನ ಎಲ್ಲಾ ಗ್ರಾಮಗಳ ಜನರೂ ಅತ್ಯಂತ ಭಕ್ತಿ ಗೌರವಗಳಿಂದ ಇಲ್ಲಿನ ದೇವರಿಗೆ ನಡೆದುಕೊಳ್ಳುವುದನ್ನು ನೋಡಿದರೆ ಈ ಜನರ ಶ್ರದ್ದೆಯ ಮೇಲೆ ಎಂತಹವರಿಗಾದರೂ ಗೌರವ ಹೆಚ್ಚಾಗದೇ ಇರದು. ಕರಡಿಗುಚ್ಚಮ್ಮ ದೇವಿಯನ್ನು ಈ ಭಾಗದ ರಾಜರಾಜೇಶ್ವರಿ ಅಮ್ಮನವರು ಎಂದು ಪರಿಭಾವಿಸಿ ಪೂಜೆ ಮಾಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಕುದೂರು

ಶ್ರದ್ಧೆಯ ನಂಬಿಕೆ ಮತ್ತು ನಡವಳಿಕೆಗಳು ಮನುಷ್ಯನ ವ್ಯಕ್ತಿತ್ವವನ್ನು ಹೆಚ್ಚು ಮಾಡುತ್ತದೆ. ಇಂತಹ ಆಚರಣೆಗಳಲ್ಲಿ ಒಂದಾಗಿರುವುದು ಜಾತ್ರಾ ಮಹೋತ್ಸವ. ಇದು ನಮ್ಮ ಹಿರಿಯ ಜನಪದರ ದೂರದೃಷ್ಟಿಯ ಪರಿಕಲ್ಪನೆಯಿಂದ ಮೂಡಿಬಂದ ಪದ್ಧತಿಯಾಗಿದೆ ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಮಾಗಡಿ ತಾಲೂಕು ಅರೇಪಾಳ್ಯ ಗ್ರಾಮದ ಶ್ರೀ ಕರಡಿಗುಚ್ಚಮ್ಮ ಜಾತ್ರಾ ಮಹೋತ್ಸವ ಮತ್ತು ಮಹಾದ್ವಾರದ ಕಳಸ ಪ್ರತಿಷ್ಟಾಪನೆಯ ಸಾನಿಧ್ಯ ವಹಿಸಿ ಮಾತನಾಡಿದರು.

ಈ ಭೂಮಂಡಲದಲ್ಲಿ ಮನುಷ್ಯನ ಬುದ್ದಿಶಕ್ತಿಯನ್ನು ಮೀರುವಂತಹ ಯಾವುದೇ ಪ್ರಾಣಿಯೂ ಇಲ್ಲ. ಅದರಂತೆ ಈತನಲ್ಲಿರುವ ಹೃದಯ ಶ್ರೀಮಂತ್ರಿಕೆ ಯಾವ ದೇವತೆಗಳಿಗೂ ಕೊರತೆಯಿಲ್ಲ. ಅಂತಹದುರಲ್ಲಿ ಮನುಷ್ಯ ತನ್ನ ಬುದ್ದಿಯ ಇತಿಮಿತಿ ಅರಿತು ವತರ್ಿಸದೇ ಹೋದದ್ದರ ಫಲವಾಗಿ ಸಮಾಜದಲ್ಲಿ ಅನೇಕ ದುರಂತಗಳು ಸಂಭವಿಸುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಈ ಸುತ್ತಲಿನ ಎಲ್ಲಾ ಗ್ರಾಮಗಳ ಜನರೂ ಅತ್ಯಂತ ಭಕ್ತಿ ಗೌರವಗಳಿಂದ ಇಲ್ಲಿನ ದೇವರಿಗೆ ನಡೆದುಕೊಳ್ಳುವುದನ್ನು ನೋಡಿದರೆ ಈ ಜನರ ಶ್ರದ್ದೆಯ ಮೇಲೆ ಎಂತಹವರಿಗಾದರೂ ಗೌರವ ಹೆಚ್ಚಾಗದೇ ಇರದು. ಕರಡಿಗುಚ್ಚಮ್ಮ ದೇವಿಯನ್ನು ಈ ಭಾಗದ ರಾಜರಾಜೇಶ್ವರಿ ಅಮ್ಮನವರು ಎಂದು ಪರಿಭಾವಿಸಿ ಪೂಜೆ ಮಾಡಲಾಗುತ್ತದೆ ಎಂದು ಹೇಳಿದರು.

ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೇಶ್ವರ ಸ್ವಾಮೀಜಿ ಮಾತನಾಡಿ ಮಾಡುವ ಪ್ರತಿ ಕಾರ್ಯದಲ್ಲೂ ಭಗವಂತನನ್ನೇ ಕಾಣುತ್ತಾ ಕೆಲಸ ಮಾಡಿದರೆ ಮಾಡುವ ಕೆಲಸಗಳು ಅಚ್ಚುಕಟ್ಟುತನದಿಂದ ನಡೆಯುವುದರ ಜೊತೆಗೆ ನಮ್ಮಲ್ಲಿ ನಮಗೆ ಬಲವಾದ ನಂಬಿಕೆ ಮನೆಮಾಡಿ ಉನ್ನತ ಕೆಲಸಗಳನ್ನು ಮಾಡಲು ಪ್ರೇರಣೆ ದೊರೆಯುತ್ತದೆ ಎಂದು ತಿಳಿಸಿದರು.

ಈ ಜಾತ್ರೆಯನ್ನು ಬೋಂಡದ ಜಾತ್ರೆ ಎಂದೂ ಕರೆಯುತ್ತಾರೆ. ಇಲ್ಲಿಗೆ ಬಂದ ಜನರು ಕಡ್ಡಾಯವಾಗಿ ಪ್ರತಿ ಅಂಗಡಿಯ ಮುಂದೆಯೂ ರಾಶಿರಾಶಿ ಬೋಂಡ ಮಾಡಿ ಮಾರಾಟ ಮಾಡುವ ಜಾಗದಲ್ಲಿ ನೆರೆದು ಬೋಂಡ ತಿನ್ನುತ್ತಾರೆ. ಅಪ್ಪಟ ಜನಪದ ಪದ್ದತಿಗಳನ್ನು ಈ ಜಾತ್ರೆ ಒಳಗೊಂಡಿದೆ. ಬಾಟಲಿ ಪಾನೀಯಗಳ ಅಂಗಡಿಗಳಿಲ್ಲದೆ ಶರಬತ್ತು, ಕಬ್ಬಿನಹಾಲು, ಎಳನೀರಷ್ಟೇ ಮಾರಾಟವಾಗುತ್ತದೆ. ನಾರಸಂದ್ರ ಸುರೇಶ್ರ ಅಂಗಡಿಯ ವಿವಿಧ ರೀತಿಯ ಮಿಠಾಯಿ, ಜಿಲೇಬಿ ಸವಿಯದೆ ಜಾತ್ರೆಯ ಜನರು ವಾಪಸ್ ಹೋಗುವುದಿಲ್ಲ.

ದಾನಿ ಗಂಗಯ್ಯರವರು ಕರಡಿಗುಚ್ಚುಮ್ಮ ದೇವರ ಉತ್ಸವಮೂರ್ತಿಗೆ ಸಂಪೂರ್ಣ ಚಿನ್ನದ ಲೇಪನ ಮಾಡಿ ಲೊಕಾರ್ಪಣೆ ಮಾಡಿದ್ದಾರೆ.

Share this article