ಕನ್ನಡಪ್ರಭ ವಾರ್ತೆ ಮಂಗಳೂರು
‘ಮಂಗಳೂರು’ ಎಂಬ ಹೆಸರು ಕಡಲತಡಿಯಾದ ಈ ನಗರಿಗೆ ಬರಲು ಕಾರಣಕರ್ತೆ, ನಾಮಕರ್ತೆಯಾದ ಊರಿನ ಅಧಿನಾಯಕಿ ಮಂಗಳಾಪುರವಾಸಿನಿ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮಾ. 28ರಿಂದ ಆರಂಭಗೊಂಡು ಏ. 3ರ ವರೆಗೆ ನಡೆಯಲಿದೆ.
ಜಾತ್ರಾ ಮಹೋತ್ಸವಕ್ಕೆ ಅನುಮತಿ ಎಂಬಂತೆ ಆಹ್ವಾನ ಪತ್ರಿಕೆಯನ್ನು ದೇವರ ಸನ್ನಿಧಾನದಲ್ಲಿ ಇಡಲಾಯಿತು. ದೇವರ ಸನ್ನಿಧಾನದಲ್ಲಿ ಇರಿಸಲಾದ ಆಹ್ವಾನ ಪತ್ರಿಕೆಯನ್ನು ದೇವಳದ ಆಡಳಿತ ಮೊಕ್ತೇಸರ ಹಾಗೂ ಅನುವಂಶಿಕ ಮೊಕ್ತೇಸರ ಎಂ. ಅರುಣ್ ಕುಮಾರ್ ಅವರಿಗೆ ದೇವಳದ ಹಿರಿಯ ಅರ್ಚಕ ಶ್ರೀನಿವಾಸ ಐತಾಳ್ ಆಹ್ವಾನ ಪತ್ರಿಕೆಯನ್ನು ನೀಡಿ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದೇವಳದ ಅನುವಂಶಿಕ ಮೊಕ್ತೇಸರ ಎಂ. ಹರೀಶ್ ಐತಾಳ್, ಪರ್ಯಾಯ ಪ್ರಧಾನ ಅರ್ಚಕ ಎನ್. ವಾಸುದೇವ ಐತಾಳ್, ದೇವಳದ ಅರ್ಚಕ ಸುಬ್ರಹ್ಮಣ್ಯ ಐತಾಳ್, ಹರೀಶ್ ಐತಾಳ್, ದೇವಳದ ಸಿಬ್ಬಂದಿ ರಂಜಿತ್ ಗುಜರನ್ ಇದ್ದರು.
ಮಾ. 27ರಂದು ಸಂಜೆ 6.00ಕ್ಕೆ ಪ್ರಾರ್ಥನೆ, ಪುಣ್ಯಾಹ, ನಾಂದಿ ಕಂಕಣ ಬಂಧನ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ದಿಕ್ವಾಲ ಬಲಿ, ಶ್ರೀ ದೇವಿಗೆ ರಂಗ ಪೂಜೆ ನಡೆಯಲಿದೆ.
ಮಾ. 28ರಂದು ಬೆಳಗ್ಗೆ ಪ್ರಾತಃ ಕಾಲದ ಪೂಜೆಯ ಬಳಿಕ ಬಿಂಬ ಶುದ್ಧಿ ಕಲಶಾಭಿಷೇಕ, ಗಣಹೋಮ, ಮಧ್ಯಾಹ್ನ ಮಹಾಪೂಜೆ ಬಳಿಕ 12.30ಕ್ಕೆ ಧ್ವಜಾರೋಹಣ ನಡೆಯಲಿದೆ.
ಏ. 1ರಂದು ಮಧ್ಯಾಹ್ನ ರಥಾರೋಹಣ, ರಾತ್ರಿ 7ಕ್ಕೆ ರಥೋತ್ಸವ ನಡೆಯಲಿದೆ. ವಿಶೇಷ ಬಲಿ, ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ, ಶಯನ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಚೆಂಡೆ ಸುತ್ತು ವಿಶೇಷ ಆಕರ್ಷಣೀಯವಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಏ. 2ರಂದು ಸೂರ್ಯೋದಯದ ವೇಳೆ ಕವಾಟೋದ್ಘಾಟನೆ, ಅಭಿಷೇಕ ಪೂಜೆ, ಅಷ್ಟಾವದಾನ, ತೀರ್ಥಪ್ರಸಾದ, ಬಲಿ, ತುಲಾಭಾರ, ಮಧ್ಯಾಹ್ನ ಮಹಾಪೂಜೆ, ಸಂಜೆ 7 ಗಂಟೆಗೆ ಬಲಿ ಹೊರಟು ಅವಭೃತ ಸ್ನಾನ, ಬಟ್ಟಲು ಕಾಣಿಕೆ ಧ್ವಜಾವರೋಹಣ ನಡೆಯಲಿದೆ.
ಏ. 3ರಂದು ರಾತ್ರಿ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಮಾ. 28ರಿಂದ ಏ. 3 ರ ವರೆಗೆ ಪ್ರತಿ ದಿನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಮಾ. 28ರಿಂದ 31ರ ವರೆಗೆ ಪ್ರತಿ ದಿನ ಸಂಜೆ 6.30ಕ್ಕೆ ಬಯನ ಬಲಿ, ಮಹಾಪೂಜೆ, ಭೂತ ಬಲಿ ನಡೆಯಲಿದೆ.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊಕ್ತೇಸರರು ಹಾಗೂ ಅರ್ಚಕರಾದ ರಾಘವೇಂದ್ರ ಶಾಸ್ತ್ರಿ ಅವರು ಮಾ. 28ರಂದು ಸಂಜೆ 6.00 ಗಂಟೆಗೆ ಚಾಲನೆ ನೀಡಲಿದ್ದಾರೆ. ಮಾ. 28ರಿಂದ ಏ. 2ರ ವರೆಗೆ ನಾನಾ ಭಜನಾ ತಂಡದಿಂದ ಭಜನೆ ಸಂಕೀರ್ತನೆ, ನೃತ್ಯ, ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಶ್ರೀ ದೇವಿಯ ಶಯನಕ್ಕೆ ಮಲ್ಲಿಗೆ ಹೂವನ್ನು ತಂದು ಕೊಡುವವರು ಏ. 1ರಂದು ಸಂಜೆಯೊಳಗೆ ದೇವಳದ ಕಚೇರಿಗೆ ತಂದು ಕೊಡಬೇಕು. ಏ. 2ರಂದು ಮಂಗಳವಾರ 9.30ಕ್ಕೆ ಹರಕೆ ತುಲಾಭಾರ ಸೇವೆ ನಡೆಯಲಿದೆ. ಮಾ. 29ರಂದು ಮತ್ತು 30ರಂದು ಬೆಳಗ್ಗೆ 9.30ರಿಂದ 1ರ ವರೆಗೆ ಸೀರೆಗಳ ಹರಾಜು ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.