ಕನ್ನಡಪ್ರಭ ವಾರ್ತೆ ನಾಗಮಂಗಲಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಮಾ.18ರಿಂದ ಮಾ.26ರ ವರೆಗಿನ 9 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ವಿವಿಧ ಪೂಜಾ ಕೈಂಕರ್ಯ ಸೇರಿದಂತೆ ಅರ್ಥಗರ್ಭಿತವಾದ ಹಲವು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ಮಾ.18 ರಂದು ಬೆಳಗ್ಗೆ 6.30ಕ್ಕೆ ಶ್ರೀಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ಮಹಾ ಪೂಜೆ ಬಳಿಕ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ನಾಂದಿ ಪೂಜೆ ಹಾಗೂ ಧರ್ಮ ಧ್ವಜಾರೋಹಣ ಮಾಡುವ ಮೂಲಕ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡುವರು. ಅದೇ ದಿನ ಬೆಳಗ್ಗೆ 10 ಗಂಟೆಗೆಸಭಾ ಕಾರ್ಯಕ್ರಮ ನಡೆಯಲಿದೆ.ಮಾ.19ರ ಬೆಳಗ್ಗೆ 10 ಗಂಟೆಗೆ ದೇಶಿ ಕ್ರೀಡೆಗಳಾದ ಲಗೋರಿ, ರಂಗೋಲಿ ಸ್ಪರ್ಧೆ ಹಾಗೂ ಮ್ಯಾರಥಾನ್ ಉದ್ಘಾಟನೆ. ಸಂಜೆ 6 ಗಂಟೆಗೆ ಸರ್ವಾಲಂಕೃತ ಶ್ರೀ ಚಂದ್ರಮೌಳೇಶ್ವರಸ್ವಾಮಿ ಉತ್ಸವ ನಡೆಯಲಿದೆ. ಮಾ.20ರ ಬೆಳಗ್ಗೆ 10 ಗಂಟೆಗೆ ಕೃಷಿ ಉಪನ್ಯಾಸ ಮಾಲಿಕೆ ಹಾಗೂ ಸಂಜೆ 6 ಗಂಟೆಗೆ ಸರ್ವಾಲಂಕೃತ ಶ್ರೀಮಲ್ಲೇಶ್ವರಸ್ವಾಮಿ ಉತ್ಸವ ನಡೆಯಲಿದೆ.
ಮಾ.21ರ ಬೆಳಗ್ಗೆ 9.30ಕ್ಕೆ ಸರಳ ಸಾಮೂಹಿಕ ವಿವಾಹ ಹಾಗೂ ವಿವಾಹವಾಗಿ ಸುವರ್ಣ ಮಹೋತ್ಸವ ಆಚರಿಸಿಕೊಂಡ ಹಿರಿಯ ದಂಪತಿಗಳಿಂದ ಆಶೀರ್ವಾದದ ವ್ಯವಸ್ಥೆ ಮಾಡಲಾಗಿದೆ. 50 ವರ್ಷಗಳ ಕಾಲ ಜೀವನ ನಡೆಸಿ ಸತಿಪತಿಗಳಾಗಿ ಧನ್ಯೋ ಗೃಹಸ್ಥಾಶ್ರಮಃ ಎಂಬಂತೆ ಬದುಕಿದ ಆ ಎಲ್ಲ ಹಿರಿಯ ದಂಪತಿಗಳನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಗುವುದು.ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 21 ವರ್ಷ ಮೇಲ್ಪಟ್ಟ ವರ ಹಾಗೂ 18 ವರ್ಷ ಮೇಲ್ಪಟ್ಟ ವಧುವಿಗೆ ಉಚಿತವಾಗಿ ತಾಳಿ, ಕಾಲುಂಗುರ, ಬಾಗಿನ ಮತ್ತು ವಧು-ವರರಿಗೆ ವಸ್ತ್ರಗಳನ್ನು ನೀಡುವುದರ ಜೊತೆಗೆ ಸಂಬಂಧಿಕರು ಹಾಗೂ ಹಿತೈಷಿಗಳಿಗೆ ಭೋಜನ ವ್ಯವಸ್ಥೆಯನ್ನೂ ಸಹ ಆಯೋಜಿಸಲಾಗಿದೆ. ಅಂದು ಸಂಜೆ 6 ಗಂಟೆಗೆ ಸರ್ವಾಲಂಕೃತ ಶ್ರೀ ಸಿದ್ದೇಶ್ವರಸ್ವಾಮಿಯ ಉತ್ಸವ ನಡೆಯಲಿದೆ.
ಮಾ.22ರ ಬೆಳಗ್ಗೆ 7.30ಕ್ಕೆ ಶ್ರೀ ಕಾಲಭೈರವೇಶ್ವರಸ್ವಾಮಿಗೆ ಸುವರ್ಣ ಕವಚಾಲಂಕಾರ ಪೂಜೆ ಮತ್ತು ಶ್ರೀ ಗಂಗಾಧರೇಶ್ವರಸ್ವಾಮಿಗೆ ರಜತ ನಾಗಾಭರಣ ಅಲಂಕಾರ ಪೂಜೆ ನಡೆಯಲಿದೆ. ಬೆಳಗ್ಗೆ 10ಗಂಟೆಗೆ ಒಕ್ಕಲಿಗರ ಸಂಘಗಳ ಪದಾಧಿಕಾರಿಗಳ ಸಮ್ಮಿಲನ. ಸಂಜೆ 6ಕ್ಕೆ ಶ್ರೀ ಕಾಲಭೈರವೇಶ್ವರಸ್ವಾಮಿ ಹೂವಿನ ಪಾಲಕಿ ಉತ್ಸವ ಮತ್ತು ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರ ಮುತ್ತಿನ ಪಾಲಕಿ ಉತ್ಸವ ನಡೆಯಲಿದೆ.ಮಾ.23ರ ಬೆಳಗ್ಗೆ 10ಗಂಟೆಗೆ ಬಿಜಿಎಸ್ ಡರ್ಟ್ ಟ್ರ್ಯಾಕ್ ಬೈಕ್ ರೇಸ್ ನಡೆಯಲಿದೆ. ಅಂದು ಸಂಜೆ 6ಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಜ್ವಾಲಾಪೀಠಾರೋಹಣ ಮತ್ತು ಸಿದ್ಧ ಸಿಂಹಾಸನ ಪೂಜೆ ಹಾಗೂ ರಾತ್ರಿ 8 ಗಂಟೆಗೆ ಚಂದ್ರಮಂಡಲೋತ್ಸವ ಪೂಜೆ ನಡೆಯಲಿದೆ.
ಮಾ.24ರ ಬೆಳಗ್ಗೆ ಕ್ಷೇತ್ರಾಧಿದೇವತೆಗಳಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಮಹೋತ್ಸವಗಳು, ಸಂಜೆ 6.30 ಗಂಟೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಬಳಿಕ ಶ್ರೀ ಕಾಲಭೈರವೇಶ್ವರ ಸ್ವಾಮಿಯ ತಿರುಗಣಿ ಉತ್ಸವ, ಪುಷ್ಕರಣಿಯಲ್ಲಿ ತೆಪ್ಪೋತ್ಸವ ಹಾಗೂ ಇಡೀ ರಾತ್ರಿ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಮಾ.25ರ ಮುಂಜಾನೆ 4 ಗಂಟೆಯ ಶ್ರೀಗಂಗಾಧರೇಶ್ವರ ಸ್ವಾಮಿಯ ಮಹಾರಥೋತ್ಸವ ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಅಡ್ಡಪಾಲಕಿ ಉತ್ಸವವು ಬಹಳ ವಿಜೃಂಭಣೆಯಿಂದ ಜರುಗಲಿದೆ. ನಾಡಿನಾದ್ಯಂತ ಸಾವಿರಾರು ಭಕ್ತರು ಈ ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಇದೇ ದಿನ ಸಂಜೆ 6 ಗಂಟೆಗೆ ವಿವಿಧ ಗ್ರಾಮಗಗಳ ನೂರಾರು ಗ್ರಾಮದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ಗಿರಿ ಪ್ರದಕ್ಷಿಣಿ ನಡೆಯಲಿದೆ. ಬಳಿಕ ಶ್ರೀ ಸೋಮೇಶ್ವರ ಸ್ವಾಮಿಯ ಉತ್ಸವ ಜರುಗಲಿದೆ.
ಮಾ.26 ರಂದು ಜಾತ್ರಾ ಮಹೋತ್ಸವದ ಕೊನೆಯ ದಿನ. ಶ್ರೀಕ್ಷೇತ್ರದ ಬಿಂದು ಸರೋವರದಲ್ಲಿ ಗಂಗಾ ಪೂಜೆ, ಅವಭೃತ ಸ್ನಾನ ಇತ್ಯಾದಿ ಪೂಜಾ ಕಾರ್ಯಕ್ರಮಗಳು ನೆರವೇರುವವು. ಕಾರ್ಯಕ್ರಮದ ನಂತರ ಧರ್ಮ ಧ್ವಜಾವರೋಹಣ ಹಾಗೂ ಸಭಾ ಕಾರ್ಯಕ್ರಮದ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ ಎಂದು ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.