ಜಾತ್ಯತೀತ ಪದ ಬಳಸುವ ನೈತಿಕತೆ ಜೆಡಿಎಸ್‌ಗಿಲ್ಲ: ಸಿಎಂ

KannadaprabhaNewsNetwork | Published : Feb 19, 2024 1:35 AM

ಸಾರಾಂಶ

ಜೆಡಿಎಸ್ ಪಕ್ಷ ಜಾತ್ಯತೀತ ಪದವನ್ನು ಬಳಸುವ ಅರ್ಹತೆಯನ್ನೇ ಕಳೆದುಕೊಂಡಿದೆ. ಪಕ್ಷದಿಂದ ಆ ಪದವನ್ನು ಕೈಬಿಡಬೇಕು. ಜಾತ್ಯತೀತ ಎಂಬ ಪದವನ್ನು ಬಳಸುವ ನೈತಿಕತೆಯೇ ಜೆಡಿಎಸ್‌ಗೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

- ಶಾಸಕರನ್ನು ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ಜೊತೆ ನಂಟು

- ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 20 ಸ್ಥಾನ ಖಚಿತಕನ್ನಡಪ್ರಭ ವಾರ್ತೆ ಮಳವಳ್ಳಿ

ಜೆಡಿಎಸ್ ಪಕ್ಷ ಜಾತ್ಯತೀತ ಪದವನ್ನು ಬಳಸುವ ಅರ್ಹತೆಯನ್ನೇ ಕಳೆದುಕೊಂಡಿದೆ. ಪಕ್ಷದಿಂದ ಆ ಪದವನ್ನು ಕೈಬಿಡಬೇಕು. ಜಾತ್ಯತೀತ ಎಂಬ ಪದವನ್ನು ಬಳಸುವ ನೈತಿಕತೆಯೇ ಜೆಡಿಎಸ್‌ಗೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಮೈದಾನದಲ್ಲಿ ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಜೆಡಿಎಸ್, ಬಿಜೆಪಿ ಈಗ ಒಂದಾಗಿವೆ. ಮುಂದಿನ ಜನ್ಮದಲ್ಲಿ ನಾನು ಮುಸಲ್ಮಾನನಾಗಿ ಹುಟ್ಟುತ್ತೇನೆಂದು ದೇವೇಗೌಡರು ಹೇಳಿದ್ದರು. ಆದರೆ ಈಗ ಕೋಮುವಾದಿ ಪಕ್ಷ ಬಿಜೆಪಿ ಜೊತೆ ಸೇರಿದ್ದಾರೆ. ಮಿಸ್ಟರ್ ದೇವೇಗೌಡರೇ ನೀವೇ ನಿಮ್ಮ ಮಗನನ್ನು ಬಿಜೆಪಿ ಜೊತೆ ಕಳಿಸಿದ್ದೇನೆ ಅಂತೀರಿ. ಹಾಗಿದ್ದ ಮೇಲೆ ಜಾತ್ಯತೀತ ಎಂಬ ಪದ ಇಟ್ಟುಕೊಳ್ಳುವುದಕ್ಕೆ ನಿಮಗೆ ಯಾವ ನೈತಿಕತೆ ಇದೆ. ಈಗಲೇ ಜಾತ್ಯತೀತ ಪದವನ್ನು ಕೈಬಿಟ್ಟು ಬಿಡಿ ಎಂದು ಆಗ್ರಹಿಸಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸೋಲಿಸಲು ಶ್ರಮಿಸಿದ್ದೆವು. ಅದಕ್ಕೆ 136 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ಈಗ ಬಿಜೆಪಿ ಮತ್ತು ಜೆಡಿಎಸ್ ಡೋಂಗಿಗಳ ರೀತಿ ಹೇಳಿಕೆ ನೀಡುತ್ತಿವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಈ ಬಾರಿ ಕನಿಷ್ಠ 20 ಸ್ಥಾನ ಗೆದ್ದು ಲೋಕಸಭೆಗೆ ಕಳಿಸುತ್ತೇವೆ. ಉಪಕಾರ ಮಾಡಿದವರನ್ನು ಎಂದಿಗೂ ಜನರು ಮರೆಯುವುದಿಲ್ಲ. ಈವರೆಗೂ 155 ಕೋಟಿ ಹೆಣ್ಣು ಮಕ್ಕಳು ಉಚಿತವಾಗಿ ಬಸ್ಸಿನಲ್ಲಿ ಓಡಾಡುತ್ತಿದ್ದಾರೆ. ಬಿಜೆಪಿ ದೇವೇಗೌಡರು, ಕುಮಾರಸ್ವಾಮಿ ಈ ಅವಕಾಶ ಮಾಡಿಕೊಟ್ಟಿದ್ದಾರಾ? ಅದನ್ನು ಮಾಡಿಕೊಟ್ಟಿದ್ದು ಸಿದ್ದರಾಮಯ್ಯ ಸರ್ಕಾರ ಎನ್ನುವುದನ್ನು ಮರೆಯಬೇಡಿ ಎಂದರು.

2018ರ ಚುನಾವಣೆಯಲ್ಲಿ ಜೆಡಿಎಸ್‌ನವರು 37 ಸ್ಥಾನಗಳಲ್ಲಿ ಗೆದ್ದಿದ್ದರು. 2023ರಲ್ಲಿ 19 ಸ್ಥಾನ ಗೆದ್ದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅದು ಶೂನ್ಯ ಆಗಲಿದೆ. ಜೆಡಿಎಸ್ ಶಾಸಕರು ಎಲ್ಲಿ ಪಕ್ಷ ಬಿಟ್ಟು ಹೋಗುವರೋ ಎಂಬ ಭಯದಿಂದ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹಿಂದೆ ನಮ್ಮ ಜೊತೆ ಇದ್ದವರು ಇಂದು ಕೋಮುವಾದಿಗಳ ಜೊತೆ ಸೇರಿದ್ದಾರೆ. ಇಂಥವರನ್ನು ನಂಬಿ ಮತ ಹಾಕುವಿರಾ ಎಂದು ಪ್ರಶ್ನಿಸಿದರು.

Share this article