ಜುವೆಲರಿ ಗುಂಡಿನ ದಾಳಿ ಪ್ರಕರಣ: ಮಧ್ಯಪ್ರದೇಶದಲ್ಲಿ ನಾಲ್ವರು ವಶಕ್ಕೆ

KannadaprabhaNewsNetwork | Published : Mar 18, 2024 1:49 AM

ಸಾರಾಂಶ

ಇತ್ತೀಚೆಗೆ ಲೊಟ್ಟೆಗೊಲ್ಲಹಳ್ಳಿ ಸಮೀಪದ ದೇವಿನಗರದ ‘ಲಕ್ಷ್ಮೀ ಬ್ಯಾಂಕರ್ಸ್‌ ಆ್ಯಂಡ್‌ ಜುವೆಲರ್ಸ್‌’ ಅಂಗಡಿಗೆ ಹಾಡಹಗಲೇ ನುಗ್ಗಿ ಗುಂಡಿನ ದಾಳಿ ನಡೆಸಿ ದರೋಡೆಗೆ ಯತ್ನಿಸಿದ್ದ ಪ್ರಕರಣ ಸಂಬಂಧ ಮಧ್ಯಪ್ರದೇಶದಲ್ಲಿ ನಾಲ್ವರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಲೊಟ್ಟೆಗೊಲ್ಲಹಳ್ಳಿ ಸಮೀಪದ ದೇವಿನಗರದ ‘ಲಕ್ಷ್ಮೀ ಬ್ಯಾಂಕರ್ಸ್‌ ಆ್ಯಂಡ್‌ ಜುವೆಲರ್ಸ್‌’ ಅಂಗಡಿಗೆ ಹಾಡಹಗಲೇ ನುಗ್ಗಿ ಗುಂಡಿನ ದಾಳಿ ನಡೆಸಿ ದರೋಡೆಗೆ ಯತ್ನಿಸಿದ್ದ ಪ್ರಕರಣ ಸಂಬಂಧ ಮಧ್ಯಪ್ರದೇಶದಲ್ಲಿ ನಾಲ್ವರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಧ್ಯಪ್ರದೇಶದ ಖಾನಾ ಪಂಡಿತ್, ಮೋಸೆ ಅಲಿಯಾಸ್ ಬಂಟಿ, ಆಶು ಪಂಡಿತ್ ಹಾಗೂ ಸೂರಜ್ ಎಂಬುವವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಮಾ.14ರಂದು ಬೆಳಿಗ್ಗೆ 11 ಗಂಟೆಗೆ ಜುವೆಲರಿ ಮಳಿಗೆಗೆ ನುಗ್ಗಿದ್ದ ನಾಲ್ವರು ಮುಸುಕುಧಾರಿಗಳು ನಾಲ್ಕು ಸುತ್ತು ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ್ದರು. ಹೆಚ್ಚಿನ ಜನ ಜಮಾಯಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ನಾಡ ಪಿಸ್ತೂಲ್‌ ಬಿಟ್ಟು ಪರಾರಿಯಾಗಿದ್ದರು. ಗುಂಡಿನ ದಾಳಿ ವೇಳೆ ಮಾಲೀಕ ಅಪುರಾಮ್ (38) ಹಾಗೂ ಕೆಲಸಗಾರ ಅನಂತರಾಮ್ (21) ಗಾಯಗೊಂಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ದುಷ್ಕರ್ಮಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿತ್ತು.

ಘಟನಾ ಸ್ಥಳದ ಸಿಸಿಟಿವಿ ಕ್ಯಾಮರಾ ದಶ್ಯಾವಳಿ ಹಾಗೂ ಕೆಲ ಮಾಹಿತಿಗಳನ್ನು ಆಧರಿಸಿದ ಪೊಲೀಸರ ತಂಡ, ದುಷ್ಕರ್ಮಿಗಳು ಮಧ್ಯಪ್ರದೇಶಕ್ಕೆ ಪರಾರಿಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಇದೀಗ ಅಲ್ಲಿಗೇ ತೆರಳಿ ಸ್ಥಳೀಯ ಪೊಲೀಸರ ನೆರವು ಪಡೆದು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ನಗರಕ್ಕೆ ಕರೆತರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಪೊಲೀಸರು ವಶಕ್ಕೆ ಪಡೆದಿರುವ ಈ ನಾಲ್ವರು ಆರೋಪಿಗಳು ಈ ಹಿಂದೆ ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದರೋಡೆ ಮಾಡಿರುವ ಬಗ್ಗೆ ತಿಳಿದು ಬಂದಿದೆ. ನಗರದ ದೇವಿನಗರದಲ್ಲಿ ನಡೆದ ಜುವೆಲರಿ ಅಂಗಡಿ ದರೋಡೆ ಯತ್ನ ಪ್ರಕರಣದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬ ಸಹಾಯ ಮಾಡಿರುವ ಬಗ್ಗೆ ಸುಳಿವು ದೊರೆತಿದೆ. ಆತನ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Share this article