ಕೆಡಿಪಿ ಸಭೆಯಲ್ಲಿ ಬಿಸಿಯಾದ ಜೆಜೆಎಂ ನೀರು

KannadaprabhaNewsNetwork | Published : Aug 24, 2024 1:20 AM

ಸಾರಾಂಶ

ಕೆಡಿಪಿ ಸಭೆಯಲ್ಲಿ ಬಿಸಿಯಾದ ಜೆಜೆಎಂ ನೀರು

ಕನ್ನಡಪ್ರಭ ವಾರ್ತೆ ರಾಮನಗರ

ಗ್ರಾಮೀಣ ಪ್ರದೇಶಗಳ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಈ ಯೋಜನೆಯ ಸಂಪೂರ್ಣ ಮಾಹಿತಿ ಒದಗಿಸುವಂತೆ ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅವರಿಗೆ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಶಾಸಕರು ಜೆಜೆಎಂ ಯೋಜನೆಯಲ್ಲಿ ಓವರ್ ಹೆಡ್ ಟ್ಯಾಂಕ್ , ಪೈಪ್ ಲೈನ್ ಅಳವಡಿಕೆ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಇದರಲ್ಲಿ ಕೋಟ್ಯಂತರ ರುಪಾಯಿ ‍‍ಅವ್ಯವಹಾರ ನಡೆದಿದ್ದು, ತನಿಖೆಗೆ ತಂಡ ರಚಿಸುವಂತೆ ಒತ್ತಾಯಿಸಿದರು. ಆಗ ಸಚಿವರು ಮುಂದಿನ ಕೆಡಿಪಿ ಸಭೆಯಲ್ಲಿ ಜೆಜೆಎಂ ಯೋಜನೆ ಪ್ರಗತಿಯ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿದರು. ಶಾಸಕ ಇಕ್ಬಾಲ್ ಹುಸೇನ್, ಎಷ್ಟು ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾರ್ಯ ಬಾಕಿ ಉಳಿದಿದೆ. ಬಹುತೇಕ ಕಡೆಗಳಲ್ಲಿ ಕೇವಲ ಪಿಲ್ಲರ್ ಗಳವರೆಗೆ ಮಾತ್ರ ಕಾಮಗಾರಿ ನಡೆದಿದೆ. ಪೈಪ್ ಅಳವಡಿಸಲು ಎಲ್ಲ ಗ್ರಾಮಗಳಲ್ಲಿ ರಸ್ತೆಗಳನ್ನು ಬಗೆದು ಹಾಳು ಮಾಡಿದ್ದಿರಲ್ಲ. ಒಂದೇ ಒಂದು ರಸ್ತೆ ದುರಸ್ತಿ ಪಡಿಸಿಲ್ಲ. ಇದಕ್ಕೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಸಹಾಯಕ ಎಂಜಿನಿಯರ್ ನನ್ನು ತರಾಟೆ ತೆಗೆದುಕೊಂಡರು. ಜೆಜೆಎಂನಲ್ಲಿ ಜಿಲ್ಲೆಯಲ್ಲಿ 1528 ಕಾಮಗಾರಿಗಳು ಪ್ರಾರಂಭಗೊಂಡಿದ್ದು, 879 ಕಾಮಗಾರಿ ಪೂರ್ಣಗೊಂಡಿದೆ. 597 ಕಾಮಗಾರಿ ಪ್ರಗತಿಯಲ್ಲಿದ್ದು, 52 ಕಾಮಗಾರಿ ಬಾಕಿ ಉಳಿದಿವೆ. ಟ್ಯಾಂಕ್ ಗಳ ನಿರ್ಮಾಣ ಕಾರ್ಯ ಅಪೂರ್ಣಗೊಂಡಿದ್ದರೆ, ಆ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಎಂಜಿನಿಯರ್ ಉತ್ತರಿಸಿದರು. ಈ ವೇಳೆ ಶಾಸಕ ಬಾಲಕೃಷ್ಣ, ಜೆಜೆಎಂನಲ್ಲಿ ಪೈಪ್ ಲೈನ್ ಕೆಲಸ ಸುಲಭ, ಮೊದಲು ಹಣ ಕೊಡುತ್ತೀರಾ. ಆ ಹಣ ಪಡೆದು ಹೋದ ಗುತ್ತಿಗೆದಾರ ಮತ್ತೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಬರುವುದಿಲ್ಲ. ಕೆಲವೆಡೆ ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಹಸ್ತಾಂತರ ಆಗಿಲ್ಲ. ಪಿಡಿಒಗಳಿಗೆ ಜಾಗ ಬೇಕೆಂದು ಕೇಳಿದರೆ ಏನು ಪ್ರಯೋಜನ. ನೀವೇಕೆ ಶಾಸಕರ ಗಮನಕ್ಕೆ ತಂದಿಲ್ಲ. ಎಷ್ಟು ಟ್ಯಾಂಕ್ ಗಳ ನಿರ್ಮಾಣ ಕಾರ್ಯ ಬಾಕಿ ಉಳಿದಿವೆ ಎಂದು ಪ್ರಶ್ನಿಸಿದರು. 2021ರಲ್ಲಿ ಆರಂಭಗೊಂಡಿರುವ ಜೆಜೆಎಂನ ಫೇಸ್ 1ರಲ್ಲಿ 658 ಕಾಮಗಾರಿ ಕೈಗೆತ್ತಿಕೊಂಡಿದ್ದು, ಅವುಗಳು ಪೂರ್ಣಗೊಂಡಿಲ್ಲ. ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಎಂಜಿನಿಯರ್ ಸಮಾಜಾಯಿಷಿ ನೀಡಿದರು. ಇದನ್ನು ಒಪ್ಪದ ಬಾಲಕೃಷ್ಣ, ಈ ಯೋಜನೆಯೇ ಮುಕ್ತಾಯಗೊಂಡಿದ್ದು, 1ನೇ ಫೇಸ್ ನ ಕಾಮಗಾರಿಗಳೇ ಪೂರ್ಣಗೊಂಡಿಲ್ಲ. ಇನ್ನೊಂದು ವರ್ಷದಲ್ಲಿ ಕೇಂದ್ರ ಸರ್ಕಾರ ಅನುದಾನ ಸ್ಥಗಿತಗೊಳಿಸುತ್ತದೆ. ಆಗ ಕಾಮಗಾರಿ ಹೇಗೆ ಪೂರ್ಣಗೊಳಿಸುತ್ತೀರಿ. ಸಿಇಒರವರೇ ಜೆಜೆಎಂ ಅನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಇಡೀ ಯೋಜನೆಯೇ ಸಂಪೂರ್ಣ ವಿಫಲಗೊಳ್ಳಲಿದೆ ಎಂದು ಸೂಚಿಸಿದರು. ನೆಲಮಂಗಲ ಶಾಸಕ ಶ್ರೀನಿವಾಸಯ್ಯ ಸೋಲೂರು ಹೋಬಳಿಯಲ್ಲಿ ಜೆಜೆಎಂ ಕಾಮಗಾರಿ ಎಷ್ಟಾಗಿದೆ ಎಂದು ಕೇಳಿದಾಗ ಎಂಜಿನಿಯರ್ ಉತ್ತರಿಸಲು ತಡವರಿಸಿದರು. ಇದರಿಂದ ಆಕ್ರೋಶಗೊಂಡ ಶಾಸಕರು, ಮಾಹಿತಿ ಇಲ್ಲವೆಂದು ಹೇಳುವುದು ನಿಮ್ಮ ಬೇಜವಾಬ್ದಾರಿ ಅಲ್ಲವೇ. ನನ್ನನ್ನು ಸಭೆಗೆ ಏಕೆ ಕರೆಸಿದ್ದೀರಿ ಎಂದು ತರಾಟೆ ತೆಗೆದುಕೊಂಡರು. ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಎಸ್ .ರವಿ, ಜಲ ಜೀವನ್ ಮಿಷನ್ ಉದ್ದೇಶ ಈಡೇರಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಒಂದಿಷ್ಟು ಅನುಕೂಲ ಆಗಿರಬಹುದೇ ಹೊರತು ಗ್ರಾಮೀಣ ಜನರಿಗೆ ಸದುಪಯೋಗ ಆಗಿಲ್ಲ ಎಂದರು.

ಸಬ್ಸಿಡಿಗಾಗಿ ಪ್ರಸ್ತಾವನೆ ಸಿದ್ದಪಡಿಸಿ ಸಲ್ಲಿಸಿ

ರೇಷ್ಮೆ ಮಾರುಕಟ್ಟೆ ಅಧಿಕಾರಿ ಮಾತನಾಡಿ, ನಮ್ಮಲ್ಲಿ 1600 ರೀಲರ್ಸ್ ಗಳಿದ್ದು, ಎಷ್ಟೇ ಗೂಡು ಬಂದರು ಅದನ್ನು ಖರೀದಿ ಮಾಡುತ್ತಿದ್ದಾರೆ. ಹಳೇಯ ಮಾದರಿಯಲ್ಲಿ ರೀಲ್ ಮಾಡುತ್ತಿದ್ದು, ಅವರಿಗೆ ಅಟೋಮಿಟಿಕ್ ರೀಲಿಂಗ್ ಮಿಷನ್ 120 ಕೊಡಿಸಿದರೆ ಅನುಕೂಲವಾಗಲಿದೆ ಎಂದು ತಿಳಿಸಿದಾಗ ಶಾಸಕ ಇಕ್ಬಾಲ್ ರವರು, ಚೀನಾದಿಂದ ಆ ಮಿಷನ್ ರೀಲರ್ಸ್ ಗಳಿಗೆ ಸಿಗುತ್ತಿದ್ದು, ಅದಕ್ಕೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತಿಲ್ಲ. ನೀವು ಪ್ರಸ್ತಾವನೆಯೊಂದನ್ನು ಸಿದ್ದಪಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುತ್ತೇನೆ ಎಂದರು.ವಿಧಾನ ಪರಿಷತ್ ಸದಸ್ಯ ಎಸ್ .ರವಿ, ರೇಷ್ಮೆಗೆ ಎಲೆ ಸುರುಳಿ ರೋಗ, ನುಸಿರೋಗ ಹೆಚ್ಚಾಗಿದ್ದು, ಇದರಿಂದ ರೇಷ್ಮೆ ಗೂಡಿನ ಉತ್ಪಾದನೆಯೂ ಕುಸಿಯುತ್ತಿದೆ. ಇದರಿಂದ ಬೇಸತ್ತಿರುವ ರೈತರು ರೇಷ್ಮೆ ಬೆಳೆ ಬಗ್ಗೆಯೇ ನಿರಾಸಕ್ತಿ ಹೊಂದುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ರೇಷ್ಮೆ ನಶಿಸುವುದರಲ್ಲಿ ಅನುಮಾನ ಇಲ್ಲ. ನಿಮ್ಮ ಇಲಾಖೆಯಿಂದ ರೋಗಗಳ ನಿಯಂತ್ರಣಕ್ಕೆ ಏನು ಕ್ರಮ ವಹಿಸಿದ್ದೀರಿ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ರೇಷ್ಮೆ ಇಲಾಖೆ ಅಧಿಕಾರಿ, ಕಳೆ ಹೆಚ್ಚಾಗಿರುವ ರೇಷ್ಮೆ ತೋಟಗಳಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಇದಕ್ಕೆ ರೈತರ ನಿರ್ಲಕ್ಷ್ಯವೂ ಕಾರಣ. ನುಸಿ ರೋಗ ನಿಯಂತ್ರಣಕ್ಕೆ ಕೆಮಿಕಲ್ ಸ್ಪ್ರೇ ಮಾಡುವುದರಿಂದ ರೇಷ್ಮೆ ಹುಳುವಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಬೇವಿನ ಎಣ್ಣೆ ಸಿಂಪಡಣೆ ಮಾಡುವಂತೆ ಮಾರ್ಗದರ್ಶನ ಮಾಡುತ್ತಿದ್ದೇವೆ. 10-15 ದಿನಗಳಲ್ಲಿ ಮಳೆಯಾದಲ್ಲಿ ಎಲೆ ಸುರುಳಿ ಮತ್ತು ನುಸಿರೋಗ ನಿಯಂತ್ರಣಕ್ಕೆ ಬರಲಿದೆ ಎಂದು ತಿಳಿಸಿದರು.ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುದಾಂ ದಾಸ್ , ರಾಮೋಜಿಗೌಡ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಸೂರಜ್ , ಜಿಲ್ಲಾಧ್ಯಕ್ಷ ಕೆ.ರಾಜು, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಉಪಸ್ಥಿತರಿದ್ದರು.

Share this article