ಜೆಜೆಎಂ ಕಾಮಗಾರಿ ವಿಳಂಬ: ಗುತ್ತಿಗೆದಾರರಿಗೆ ದಂಡ ವಿಧಿಸಿ

KannadaprabhaNewsNetwork |  
Published : Sep 03, 2025, 01:00 AM IST
2ಕೆಆರ್ ಎಂಎನ್ 6.ಜೆಪಿಜಿರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ನಡೆಯಿತು. | Kannada Prabha

ಸಾರಾಂಶ

ರಾಮನಗರ: ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಗಳನ್ನು ವಿಳಂಬ ಮಾಡುವ ಗುತ್ತಿಗೆದಾರರಿಗೆ ದಂಡ ವಿಧಿಸುವಂತೆ ಸಂಸದ ಡಾ.ಸಿ.ಎನ್.ಮಂಜುನಾಥ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಾಮನಗರ: ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಗಳನ್ನು ವಿಳಂಬ ಮಾಡುವ ಗುತ್ತಿಗೆದಾರರಿಗೆ ದಂಡ ವಿಧಿಸುವಂತೆ ಸಂಸದ ಡಾ.ಸಿ.ಎನ್.ಮಂಜುನಾಥ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಸಂಸದರು, ಜೆಜೆಎಂ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಜಲ್ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ 984 ಕಾಮಗಾರಿಗಳ ಪೈಕಿ 252 ಯೋಜನೆಗಳು ಹರ್ ಘರ್ ಜಲ್ ಯೋಜನೆಗಳು ಎಂದು ಘೋಷಿಸಲಾಗಿದೆ. 475 ಕಾಮಗಾರಿಗಳು ಪ್ರಕ್ರಿಯೆಯಲ್ಲಿದ್ದು, ಬಾಕಿ ಉಳಿದವುಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು ಇಲ್ಲಿ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಬೇಕು. ತಪ್ಪಿದ್ದಲ್ಲಿ ಅವರ ವಿರುದ್ಧ ದಂಡ ವಿಧಿಸಬೇಕು ಎಂದು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ, 208 ಕಂಟ್ರಾಕ್ಟರ್‌ಗಳಿಗೆ ಈ ಕುರಿತಂತೆ ದಂಡ ವಿಧಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ವೈದ್ಯರ ಹುದ್ದೆಗಳು ಖಾಲಿಯಿದ್ದು ಜಿಲ್ಲೆಯಲ್ಲಿ ಎನ್.ಎಚ್.ಎಂ. ಯೋಜನೆಯಡಿ ಅನಸ್ತೇಶಿಯ, ಆರ್ಥೋಪೆಡಿಕ್ ಇತರೆ ವಿಭಾಗಗಳಲ್ಲಿ ವೈದ್ಯರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ನೇಮಕ ಮಾಡಿಕೊಂಡು ಸಾರ್ವಜನಿಕರ ಸೇವೆಗೆ ನಿಯೋಜಿಸುವಂತೆ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ಜಿಲ್ಲಾಸ್ಪತ್ರೆಗೆ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವನ್ನು ರಾಜ್ಯ ಸರ್ಕಾರ ಪೂರೈಸಲಿದೆ. ಇಕೋ ಹಾಗೂ ಅಲ್ಟ್ರಾ ಸೌಂಡ್ ಯಂತ್ರಗಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಬೇಕು. ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಸ್ಟಾಫ್ ನರ್ಸ್ ಹುದ್ದೆಗಳನ್ನು ಎನ್.ಎಚ್.ಎಂ. ಯೋಜನೆಯಡಿಗೆ ನೇಮಿಸಿಕೊಳ್ಳುವಂತೆ ಸೂಚಿಸಿದರು.

ಕೃಷಿ ಹೊಂಡಗಳು ರೈತರಿಗೆ ಅನುಕೂಲ ಮಾಡಿಕೊಡುವ ಜೊತೆಗೆ ಅಂತರ್ಜಲವನ್ನು ಹಿಡಿದಿಡುತ್ತವೆ. ಇದುವರೆಗೆ ಎಷ್ಟು ಸಂಖ್ಯೆಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಅಂಬಿಕಾ ಅವರಿಗೆ ಸೂಚಿಸಿದ ಸಂಸದರು, ಬೆಂಬಲ ಬೆಲೆಗೆ ಜಿಲ್ಲೆಯ ರಾಗಿ ಖರೀದಿ ಮಾಡಿ ಅದನ್ನು ಆನೇಕಲ್ ನಲ್ಲಿ ಶೇಖರಿಸಿ ಇಡಲಾಗಿದೆ. ಜಿಲ್ಲೆಯಲ್ಲಿಯೇ ಉಗ್ರಾಣವನ್ನು ಸ್ಥಾಪಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಫಸಲ್ ಭೀಮಾ ಅತ್ಯುತ್ತಮ ಯೋಜನೆಯಾಗಿದ್ದು, ಈ ಯೋಜನೆಯಡಿ ಬೆಳೆ ವಿಮೆ ನೋಂದಣಿ ಬಗ್ಗೆ ರೈತರಿಗೆ ವ್ಯಾಪಕ ಪ್ರಚಾರ ಹಾಗೂ ಜಾಗೃತಿ ಮೂಡಿಸಬೇಕು. 2025 ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ರೈತರು ಈ ಯೋಜನೆಯ ಫಲಾನುಭವಿಗಳ ಆಗುವಂತೆ ಕ್ರಮವಹಿಸಬೇಕು. ಮಾವು ಹಾಗೂ ತೆಂಗಿಗೂ ಈ ವಿಮಾ ಯೋಜನೆಯ ಲಾಭ ದೊರೆಯಬೇಕು. ಬೆಳೆ ನಷ್ಟವಾದ ಸಂದರ್ಭದಲ್ಲಿ ಅಥವಾ ಮಾರುಕಟ್ಟೆ ಕುಸಿದಾಗ ಈ ಯೋಜನೆ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮುನೇಗೌಡ ಮಾತನಾಡಿ, 2023-24ನೇ ಸಾಲಿಗೆ 11,524 ರೈತರು ನೋಂದಣಿಯಾಗಿದ್ದು, ವಿಮೆಯ 23.43 ಕೋಟಿ ಅನುದಾನ ನೇರವಾಗಿ ರೈತರ ಖಾತೆಗೆ ಬಿಡುಗಡೆಯಾಗಿದೆ. 2025-26ನೇ ಸಾಲಿನಲ್ಲಿ ಸಾಕಷ್ಟು ರೈತರು ನೋಂದಣಿ ಆಗುತ್ತಿದ್ದಾರೆ ಎಂದರು.

ಜಿಪಂ ಸಿಇಒ ಅನ್ಮೋಲ್ ಜೈನ್, ಎಸ್ಪಿ ಶ್ರೀನಿವಾಸ್ ಗೌಡ, ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಜಿಪಂ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ಉಪಸ್ಥಿತರಿದ್ದರು.

ಬಾಕ್ಸ್...............

ಮಂಚನಾಯಕನಹಳ್ಳಿ ಬಳಿ ಸ್ಕೈ ವಾಕ್ ನಿರ್ಮಿಸಿ

ರಾಮನಗರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬೆಂಗಳೂರು ಮೈಸೂರು ಹೆದ್ದಾರಿಯ ಮಂಚನಾಯಕನಹಳ್ಳಿಯ ಬಳಿ ಸ್ಕೈ ವಾಕ್ ನಿರ್ಮಾಣದ ಅಗತ್ಯವಿದೆ. ಅದನ್ನು ನಿರ್ಮಿಸಲು ಕ್ರಮ ವಹಿಸುವಂತೆ ಎನ್ಎಚ್ಎಐ ಯೋಜನಾ ನಿರ್ದೇಶಕರಿಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯಲ್ಲಿ ಸಂಸದರು, ಟೋಲ್ ಪ್ಲಾಜಾದಲ್ಲಿ ಅಗತ್ಯ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಪ್ರಸಕ್ತ ಆರ್‌ಬಿಐ ಮಾರ್ಗಸೂಚಿಗಳು ಬದಲಾವಣೆಯಾಗಿದ್ದು ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ, 10 ದಿನಗಳೊಳಗೆ ಲೋನ್ ಪ್ರಕ್ರಿಯೆಗೆ ಕ್ರಮ ವಹಿಸಬೇಕು. ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮುದ್ರಾ ಯೋಜನೆಯನ್ನು ಪರಿಚಯಿಸಲಾಗಿದ್ದು ದೇಶಾದ್ಯಂತ 52 ಕೋಟಿ ಫಲಾನುಭವಿಗಳು ಮುದ್ರ ಯೋಜನೆಯಡಿ ಫಲಾನುಭವಿಗಳಾಗಿದ್ದಾರೆ. ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡಿದರೆ ಎಫ್‌ಐಆರ್ ದಾಖಲಿಸುವಂತೆ ಸಂಸದರು ಸೂಚನೆ ನೀಡಿದರು,

35 ಕೋಟಿ ರು.ಗಳ ವೆಚ್ಚದಲ್ಲಿ ರಾಮನಗರ ಹಾಗೂ ಚನ್ನಪಟ್ಟಣದ ರೈಲ್ವೆ ಯೋಜನೆಗಳು ಮೇಲ್ದರ್ಜಗೆ ಏರುತ್ತಿವೆ. ಬಿಡದಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಇತ್ತೀಚಿಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮುಂಬರುವ ಐದು- ಆರು ತಿಂಗಳಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ರೈಲು ನಿಲ್ದಾಣಗಳು ಮೇಲ್ದರ್ಜೆಗೇರಲಿದ್ದು, ಚನ್ನಪಟ್ಟಣದ ಎಲೆಕೆರೆಯಲ್ಲಿ ರೈಲ್ವೆ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ, ಹೆಜ್ಜಾಲದಲ್ಲಿ ರೈಲ್ವೆ ಅಗಲೀಕರಣ ಕಾರ್ಯ ಕೈಗೊಳ್ಳಲು ಚಿಂತಿಸಲಾಗಿದೆ ಎಂದು ಮಂಜುನಾಥ್ ಮಾಹಿತಿ ನೀಡಿದರು.

2ಕೆಆರ್ ಎಂಎನ್ 6.ಜೆಪಿಜಿ

ರಾಮನಗರದ ಜಿಪಂ ಸಭಾಂಗಣದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ನಡೆಯಿತು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ