ಬರ ಹಿನ್ನೆಲೆಯಲ್ಲಿ ಪ್ರತಿ ಕುಟುಂಬಕ್ಕೂ ಉದ್ಯೋಗ ಖಾತ್ರಿ..!

KannadaprabhaNewsNetwork | Updated : Oct 26 2023, 01:01 AM IST

ಸಾರಾಂಶ

ಜಿಲ್ಲೆಯ ಎಂಟೂ ತಾಲೂಕುಗಳಲ್ಲಿ ಬರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬರ ನಿರ್ವಹಣಾ ಚಟುವಟಿಕೆ ಶುರು ಮಾಡಿದೆ. ಈಗಾಗಲೇ ಮಳೆ ಕೊರತೆಯಿಂದ ₹212 ಕೋಟಿ ಹಾನಿಯಾಗಿದೆ ಎಂದು ವರದಿ ನೀಡಿರುವ ಜಿಲ್ಲಾಡಳಿತ ಇದೀಗ ಕೃಷಿ ಚಟುವಟಿಕೆ ಇಲ್ಲದೇ ಕಂಗಾಲಾಗಿರುವ ರೈತ ಕುಟುಂಬಗಳಿಗೆ ಆಸರೆಯಾಗಿ ಉದ್ಯೋಗ ಖಾತ್ರಿಯಲ್ಲಿ ಉದ್ಯೋಗ ಒದಗಿಸಲು ಮುಂದಾಗಿದೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಜಿಲ್ಲೆಯ ಎಂಟೂ ತಾಲೂಕುಗಳಲ್ಲಿ ಬರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬರ ನಿರ್ವಹಣಾ ಚಟುವಟಿಕೆ ಶುರು ಮಾಡಿದೆ. ಈಗಾಗಲೇ ಮಳೆ ಕೊರತೆಯಿಂದ ₹212 ಕೋಟಿ ಹಾನಿಯಾಗಿದೆ ಎಂದು ವರದಿ ನೀಡಿರುವ ಜಿಲ್ಲಾಡಳಿತ ಇದೀಗ ಕೃಷಿ ಚಟುವಟಿಕೆ ಇಲ್ಲದೇ ಕಂಗಾಲಾಗಿರುವ ರೈತ ಕುಟುಂಬಗಳಿಗೆ ಆಸರೆಯಾಗಿ ಉದ್ಯೋಗ ಖಾತ್ರಿಯಲ್ಲಿ ಉದ್ಯೋಗ ಒದಗಿಸಲು ಮುಂದಾಗಿದೆ.

ಜಿಲ್ಲಾ ಪಂಚಾಯ್ತಿ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 1.68 ಲಕ್ಷ ಕುಟುಂಬಗಳು ಉದ್ಯೋಗ ಖಾತ್ರಿ ಯೋಜನೆಗೆ ನೋಂದಣಿ ಮಾಡಿಸಿವೆ. ಪ್ರತಿ ಕುಟುಂಬಕ್ಕೆ ವಾರ್ಷಿಕ 100 ದಿನಗಳನ್ನಾದರೂ ಕೂಲಿ ಕೊಡಬೇಕು ಎಂಬುದು ಯೋಜನೆ ನಿಯಮ. ಬರಗಾಲ ಹಿನ್ನೆಲೆಯಲ್ಲಿ ಹೆಚ್ಚುವರಿ 50 ದಿನಗಳನ್ನು ನೀಡಲಾಗಿದೆ.

ಮಾನವ ದಿನ ಏರಿಕೆ..

ಉದ್ಯೋಗ ಖಾತ್ರಿ ಯೋಜನೆ ಅಡಿ 2023ರ ಏಪ್ರಿಲ್‌ ತಿಂಗಳಿಂದ 2024ರ ಮಾರ್ಚ್‌ ವರೆಗೆ ಧಾರವಾಡ ಜಿಲ್ಲೆಗೆ 26 ಲಕ್ಷ ಮಾನವ ದಿನಗಳ ಗುರಿ ಹೊಂದಲಾಗಿತ್ತು. ಕಳೆದ ಏಳು ತಿಂಗಳಲ್ಲಿ ಅಂದರೆ ಅಕ್ಟೋಬರ್‌ 25ರ ವರೆಗೆ 16,15,357 ಮಾನವ ದಿನಗಳ (ಶೇ.62.13) ಸಾಧನೆ ಮಾಡಿ ₹77 ಕೋಟಿ ಕೂಲಿ ಹಣ ಸಹ ನೀಡಲಾಗಿದೆ. ಈ ಮಧ್ಯೆ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯ ಹಿನ್ನೆಲೆಯಲ್ಲಿ ಬೆಳೆಹಾನಿ ಸೇರಿದಂತೆ ಬರ ಘೋಷಣೆಯ ಹಿನ್ನೆಲೆಯಲ್ಲಿ ವರ್ಷದ 26 ಲಕ್ಷ ಮಾನವ ದಿನಗಳ ಗುರಿಗೆ ಹೆಚ್ಚುವರಿಯಾಗಿ ಮತ್ತೆ ₹10,16,163 ಮಾನವ ದಿನಗಳನ್ನು ಸೃಷ್ಟಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಏನೇನು ಕಾಮಗಾರಿ?

ಸಾಮಾನ್ಯವಾಗಿ ಖಾತ್ರಿ ಯೋಜನೆ ಅಡಿ ರಸ್ತೆ ಕಾಮಗಾರಿ, ಹೊಲಗಳ ರಸ್ತೆ, ಕೆರೆ, ನಾಲಾಗಳ ಹೂಳು ತೆಗೆಯುವ ಕಾಮಗಾರಿಗಳನ್ನು ಮಾಡಲಾಗುತ್ತಿತ್ತು. ಇದೀಗ ಬರಗಾಲ ಘೋಷಣೆ ಹಿನ್ನೆಲೆಯಲ್ಲಿ ಹೆಚ್ಚುವರಿ ಮಾನವ ದಿನ ಸೃಷ್ಟಿ ಮತ್ತು ಪ್ರತಿ ಕುಟುಂಬಕ್ಕೆ 150 ದಿನಗಳ ಕನಿಷ್ಠ ಉದ್ಯೋಗ ನೀಡಬೇಕಾದ ಕಾರಣ ಮೊದಲಿನ ಕಾಮಗಾರಿಗಳೊಂದಿಗೆ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇಂಗುಗುಂಡಿಗಳನ್ನು ತೆರೆಯುವುದು, ದನಗಳಿಗೆ ನೀರಿನ ತೊಟ್ಟಿ ನಿರ್ಮಾಣ, ದ್ರವ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿ, ತೋಟಗಾರಿಕೆ ಇಲಾಖೆ ಮೂಲಕ ಅಡಕೆ, ಮಾವು ಬೆಳೆಗೆ ಗುಂಡಿ ತೆಗೆಯುವುದು, ಸಾಮಾಜಿಕ ಅರಣ್ಯ ಹಾಗೂ ಪ್ರಾದೇಶಿಕ ಅರಣ್ಯದ ಅಡಿ ಗಿಡಗಳನ್ನು ನೆಡುವ ಕಾಮಗಾರಿಗಳನ್ನು ಮಾಡಿಸುವ ಯೋಜನೆ ಹೊಂದಲಾಗಿದೆ.

ಜೀವನಕ್ಕೆ ದಾರಿಯಾದ ಯೋಜನೆ

ನಾವು ಕೃಷಿ ಕೂಲಿ ಕಾರ್ಮಿಕರು. ಇತ್ತೀಚೆಗೆ ವರ್ಷಗಳಲ್ಲಿ ಯಂತ್ರಗಳ ಭರಾಟೆಯಿಂದ ರೈತರು ಸಹ ನಮ್ಮ ಮೇಲೆ ಅಷ್ಟೊಂದು ಅವಲಂಬಿತರಾಗಿಲ್ಲ. ಇಷ್ಟಾಗಿಯೂ ರೈತರ ಹೊಲಗಳಲ್ಲಿ ಕೂಲಿ ಮಾಡಿ, ಅಕ್ಕಡಿ ಕಾಳು ಆರಿಸಿ ಜೀವನ ಮಾಡುತ್ತಿದ್ದೆವು. ಈಗ ಬರಗಾಲವಿದ್ದು ರೈತರ ಹೊಲಗಳಲ್ಲೂ ಯಾವುದೇ ಬೆಳೆ ಇಲ್ಲ. ಖಾಲಿ ಕೂರುವ ಸ್ಥಿತಿ ಬಂದಿತ್ತು. ಖಾತ್ರಿ ಯೋಜನೆ ಅಡಿ ದಿನಕ್ಕೆ ರ₹316 ನೀಡುತ್ತಿದ್ದಾರೆ. ನಸುಕಿನಲ್ಲಿ ಬಂದು ಬಿಸಿಲಾಗುವಷ್ಟರಲ್ಲಿ ಗಿಡ ಹಚ್ಚಲು ತೆಗ್ಗು ತೆಗೆದು ಹೋಗುತ್ತಿದ್ದೇವೆ. ಇದೂ ಇಲ್ಲದೇ ಹೋದಲ್ಲಿ ಧಾರವಾಡಕ್ಕೆ ಕಟ್ಟಡ ಕೂಲಿ ಕೆಲಸಕ್ಕೆ ಹೋಗಬೇಕಾಗಿತ್ತು ಎಂದು ಅಂಬ್ಲಿಕೊಪ್ಪದ ರೈತ ಈರಣ್ಣ ಎಂಬುವರು ಹೇಳಿದರು.

ಯೋಜನೆಗೆ ಅರ್ಥ ಇರಲಿ..

ಖಾತ್ರಿ ಯೋಜನೆ ಬಂದಾಗಿನಿಂದ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಜೀವ ಬಂದಿದೆ. ಆರಂಭದಲ್ಲಿ ಕೆಲವೇ ಕೆಲವು ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದ ಯೋಜನೆ ಇತ್ತೀಚೆಗೆ ಜನರಿಗೆ ಕೂಲಿ ಕಾರ್ಯ ನೀಡುವ ಉದ್ದೇಶದಿಂದ ಕೃಷಿ ಕಾರ್ಯಚಟುವಟಿಕೆ ಸೇರಿದಂತೆ ಹತ್ತಾರು ಕಾರ್ಯಗಳಿಗೂ ಯೋಜನೆ ಅಡಿ ಅವಕಾಶ ಕಲ್ಪಿಸಲಾಗಿದೆ. ಬರಗಾಲದಂತಹ ಸಮಯದಲ್ಲಿ ಉದ್ಯೋಗ ಖಾತ್ರಿ ಮೂಲಕವೇ ಜನರು ಹೊಟ್ಟೆ ತುಂಬಿಸಿಕೊಳ್ಳುವ ಸಾಕಷ್ಟು ಉದಾಹರಣೆಗಳೂ ಇವೆ. ಆದರೆ, ಸಾಕಷ್ಟು ಕಡೆಗಳಲ್ಲಿ ಯಂತ್ರಗಳ ಮೂಲಕ ಕಾಮಗಾರಿ ಮಾಡಿ ಮಾನವ ದಿನ ಸೃಷ್ಟಿ ಮಾಡಿದ್ದೇವೆ ಎಂದು ಹಣ ಪಡೆದಿರುವ ಆರೋಪಗಳೂ ಇವೆ. ಜೊತೆಗೆ ಕೆಲಸ ಮಾಡಿದ ಕೂಲಿಕಾರರಿಗೆ ಸರಿಯಾಗಿ ಸಂಬಳ ಸಿಗದೇ ಪರದಾಡಿದ್ದೂ ಇದೆ. ಸಾಮಾನ್ಯ ದಿನಗಳಲ್ಲಿ ಈ ರೀತಿ ನಡೆದರೂ, ಬರಗಾಲದ ಸಮಯದಲ್ಲಿ ಕೂಲಿಗೆ ತಕ್ಕಂತೆ ಸಂಬಳ ನೀಡಿದರೆ ಮಾತ್ರ ಯೋಜನೆಗೂ ಒಂದು ಅರ್ಥ ಬರಲಿದೆ ಎಂಬುದು ಗ್ರಾಮೀಣಾಭಿವೃದ್ಧಿ ತಜ್ಞರ ಅಭಿಪ್ರಾಯ.

ಧಾರವಾಡ ಜಿಲ್ಲೆಯಲ್ಲಿ 1.68 ಲಕ್ಷ ರೈತ ಕುಟುಂಬಗಳು ಖಾತ್ರಿ ಯೋಜನೆಗೆ ಹೆಸರು ನೋಂದಣಿ ಮಾಡಿಸಿದ್ದು ಸದ್ಯ 85 ಸಾವಿರ ಕುಟುಂಬಗಳು ಕ್ರಿಯಾಶೀಲವಾಗಿ ಯೋಜನೆ ಲಾಭ ಪಡೆಯುತ್ತಿವೆ. ಈಗ ಬರಗಾಲ ಘೋಷಣೆಯಾಗಿದೆ. ಅಳಿದುಳಿದ ಹೊಲಗಳ ಕೆಲಸ ಮುಗಿಸುತ್ತಿರುವ ರೈತರು ಇನ್ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಖಾತ್ರಿ ಯೋಜನೆಗೆ ಬರುವ ಸಾಧ್ಯತೆ ಇದೆ. ಹೊಸ ಹೊಸ ಕಾಮಗಾರಿಗಳನ್ನು ಮಾಡಲು ಯೋಜನೆ ರೂಪಿಸಿದ್ದು ಪ್ರತಿಯೊಬ್ಬರಿಗೂ ಉದ್ಯೋಗ ಕೊಡಲು ಜಿಲ್ಲಾಡಳಿತ ಸಿದ್ಧವಿದೆ ಎನ್ನುತ್ತಾರೆ ಜಿಪಂ ಉಪ ಕಾರದರ್ಶಿ ಬಿ.ಎಸ್‌. ಮೂಗನೂರಮಠ.

Share this article