ಅಂಗೈಯಲ್ಲಿ ಉದ್ಯೋಗ ಖಾತ್ರಿ ಮಾಹಿತಿ:ಕೃಷ್ಣಪ್ಪ

KannadaprabhaNewsNetwork |  
Published : Oct 25, 2024, 01:04 AM IST
ಕ್ಯೂ ಆರ್ ಕೋಡ್ ಒಳಗೊಂಡ ಮಾಹಿತಿ ಪತ್ರ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಊರಿನಲ್ಲಿಯೇ ವರ್ಷದಲ್ಲಿ 100 ದಿನ ಕೆಲಸ ನೀಡಿ ಕುಟುಂಬ ನಿರ್ವಹಣೆಗೆ ಅನುಕೂಲ

ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಗೆ ಕ್ಯೂಆರ್ ಕೋಡ್ ಮೂಲಕ ಅಂಗೈಯಲ್ಲಿ ಉದ್ಯೋಗ ಖಾತ್ರಿ ಮಾಹಿತಿ ನೀಡುವ ಆಧುನಿಕತೆಯ ಟಚ್ ನೀಡಿ ಗ್ರಾಮೀಣ ಜನರಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡಲಾಗಿದೆ ಎಂದು ತಾಪಂ ಇಒ ಕೃಷ್ಣಪ್ಪ ಧರ್ಮರ ಹೇಳಿದರು.

ಇಲ್ಲಿಯ ತಾಪಂ ಸಭಾ ಭವನದಲ್ಲಿ ಹಮ್ಮಿಕೊಂಡ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ ಕಾರ್ಯಕ್ರಮದಲ್ಲಿ ಕ್ಯೂ ಆರ್ ಕೋಡ್ ಒಳಗೊಂಡ ಮಾಹಿತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಊರಿನಲ್ಲಿಯೇ ವರ್ಷದಲ್ಲಿ 100 ದಿನ ಕೆಲಸ ನೀಡಿ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಡುವುದರ ಜತೆಗೆ ಫಲಾನುಭವಿಗಳ ಜೀವನಾಧರಕ್ಕೆ ನೆರವಾಗುವ ವೈಯಕ್ತಿಕ ಕಾಮಗಾರಿಗಳಿಗೂ ಒತ್ತು ನೀಡುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಕ್ಯೂ ಆರ್ ಕೋಡ್ ಒಳಗೊಂಡ ಮಾಹಿತಿ ಪತ್ರ ಪ್ರಚಾರಕ್ಕಾಗಿ ವಿತರಿಸಿದೆ. ಪಂಚಾಯತಿ ವ್ಯಾಪ್ತಿಯ ಗ್ರಾಮೀಣ ಜನರು ತಮ್ಮ ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ವೈಯಕ್ತಿಕ ಕಾಮಗಾರಿಗೆ ಬೇಡಿಕೆ ಸಲ್ಲಿಸಬಹುದಾಗಿದೆ ಎಂದರು.

ಈ ಬಗ್ಗೆ ಗ್ರಾಪಂನ ಜಿಕೆಎಂ ಮತ್ತು ಬಿಎಫ್‌ಟಿ ಸಹಿತ ಎಲ್ಲ ಹಂತದ ಗ್ರಾಪಂ ಸಿಬ್ಬಂದಿ ಗ್ರಾಪಂ ಕಚೇರಿ ಹಾಗೂ ಜನರು ಹೆಚ್ಚಾಗಿ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಲಗತ್ತಿಸಿ ಹೆಚ್ಚು ಹೆಚ್ಚು ಜನರು ಬೇಡಿಕೆ ಸಲ್ಲಿಸುವಂತೆ ನೋಡಿಕೊಂಡು ಅಭಿಯಾನ ಯಶಸ್ವಿಗೊಳಿಸಬೇಕು ಎಂದರು.

ಉದ್ಯೋಗ ಖಾತ್ರಿಯ ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಅರಣ್ಯ, ರೇಷ್ಮೆ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ನಿರಂತರ ಆದಾಯ ನೀಡುವ ಬೆಳೆಗಳನ್ನು ಬೆಳೆಯಬಹುದಾಗಿದೆ. ಬಹುವಾರ್ಷಿಕ ಬೆಳೆಗಳಾದ ಶ್ರೀಗಂಧ, ಹಬ್ಬೆವು, ಹುಣಸೆ, ಮಾವು, ವೀಳೆದೆಲೆ, ಕರಿಬೇವು, ಡ್ರ್ಯಾಗನ್ ಫ್ರೊಟ್, ನುಗ್ಗೆ, ಪೇರಲ, ಸೀತಾಫಲ, ನೆಲ್ಲಿ, ಸೀಬೆ, ಹೂವಿನ ಬೆಳೆಗಳಾದ ಮಲ್ಲಿಗೆ, ಗುಲಾಬಿ, ಹಣ್ಣಿನ ಬೆಳೆಗಳಾದ ಬಾಳೆ, ಪಪ್ಪಾಯಿ, ನಿಂಬೆ ಸೇರಿ ಇತರೆ ಹಲವು ಬೆಳೆ ಬೆಳೆಯಲು ಆರ್ಥಿಕ ನೆರವು ನೀಡಲಾಗುತ್ತದೆ. ಅಲ್ಲದೆ ಕೋಳಿ, ಕುರಿ ಶೆಡ್‌ಗಳ ನಿರ್ಮಾಣಕ್ಕೂ ಸಹಾಯಧನ ನೀಡಲಾಗುತ್ತಿದೆ ಎಂದರು.

ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ದಿನಕ್ಕೆ ₹349 ಕೂಲಿ ಇದೆ. ಮಹಿಳೆಯರು, ಪುರುಷರು ಎಂಬ ತಾರತಮ್ಯವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಲಾಗುತ್ತಿದೆ, ಗ್ರಾಮೀಣ ಪ್ರದೇಶದ ಜನರು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.

ಪಿಡಿಒ ಬಿ.ಬಿ. ತಳವಾರ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯು ಬಡವರ ಕಲ್ಯಾಣಕ್ಕಾಗಿ ಇರುವ ಮಹತ್ವದ ಯೋಜನೆಯಾಗಿದೆ ಎಂದರು.

ತಾಪಂ ಅಧಿಕಾರಿಗಳಾದ ಶ್ರೀಕಾಂತ ಬಾಲೇಹೊಸೂರ, ಸುರೇಶ ಹಡಪದ, ಚಂದ್ರಶೇಖರ ಹಳ್ಳಿ, ಅರುಣ ತಂಬ್ರಳ್ಳಿ, ಎಂ.ಬಿ. ಪಾಟೀಲ, ಮಧುಮತಿ ಪಾಟೀಲ, ಗಣೇಶ ಲಮಾಣಿ, ಗಣೇಶ ಸುಲಾಖೆ, ಸೋಮಶೇಖರ ತಳವಾರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳ ಪ್ರತಿಷ್ಠೆಯಿಂದ ಗ್ರಾಮಗಳು ಸೊರಗುತ್ತಿವೆ: ಶಾಸಕಿ ಶಾರದಾ ಪೂರ್ಯಾನಾಯ್ಕ್
ಬಿಜೆಪಿ ಮಹಿಳಾ ಮೋರ್ಚಾಗೆ ಸ್ತ್ರೀ ಕಾಳಜಿ ಇಲ್ಲ: ದಿನೇಶ್‌ ಶೆಟ್ಟಿ