ಮಾದಕ ವಸ್ತು ಮಟ್ಟಹಾಕಲು ಕೈ ಜೋಡಿಸಿ

KannadaprabhaNewsNetwork |  
Published : Mar 11, 2024, 01:17 AM IST
ಅಅಅಅ | Kannada Prabha

ಸಾರಾಂಶ

ಸ್ವಾಸ್ಥ್ಯ ಹಾಗೂ ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಸಮಾಜಕ್ಕೆ ಮಾರಕವಾಗಿರುವ ಮಾದಕ ವಸ್ತು ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ಮಟ್ಟಹಾಕಬೇಕು. ಈ ಕಾರ್ಯ ಪೊಲೀಸರಿಂದಷ್ಟೇ ಕಷ್ಟಸಾಧ್ಯ. ಆದ್ದರಿಂದ ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಬೇಕು ಎಂದು ಉತ್ತರ ವಲಯ ಐಜಿಪಿ ಹಾಗೂ ಪ್ರಭಾರ ನಗರ ಪೊಲೀಸ್ ಆಯುಕ್ತ ವಿಕಾಸಕುಮಾರ ವಿಕಾಸ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸ್ವಾಸ್ಥ್ಯ ಹಾಗೂ ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಸಮಾಜಕ್ಕೆ ಮಾರಕವಾಗಿರುವ ಮಾದಕ ವಸ್ತು ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ಮಟ್ಟಹಾಕಬೇಕು. ಈ ಕಾರ್ಯ ಪೊಲೀಸರಿಂದಷ್ಟೇ ಕಷ್ಟಸಾಧ್ಯ. ಆದ್ದರಿಂದ ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಬೇಕು ಎಂದು ಉತ್ತರ ವಲಯ ಐಜಿಪಿ ಹಾಗೂ ಪ್ರಭಾರ ನಗರ ಪೊಲೀಸ್‌ ಆಯುಕ್ತ ವಿಕಾಸಕುಮಾರ ವಿಕಾಸ್‌ ಹೇಳಿದರು.

ನಗರದ ಪೊಲೀಸ್‌ ಆಯುಕ್ತರ ಕಚೇರಿ ಆವರಣದಲ್ಲಿ ಭಾನುವಾರ ಡ್ರಗ್ಸ್‌ ಮುಕ್ತ ಬೆಳಗಾವಿ ನಗರ ಹಿನ್ನೆಯಲ್ಲಿ ನಡಿಗೆ ಹಾಗೂ ಓಟದ ಮೂಲಕ ಜಾಗೃತಿ ಜಾಥಾಗೆ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ಸಮಾಜ ನಿರ್ಮಾಣದಲ್ಲಿ ಯುವ ಸಮುದಾಯ ಮಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಚಲನ ವಲನಗಳ ಕುರಿತು ಜಾಗೃತಾಗಿರಬೇಕು. ಜೊತೆಗೆ ಮಾದಕ ವಸ್ತುಗಳಿಂದಾಗುವ ಹಾನಿಯ ಕುರಿತು ತಿಳಿ ಹೇಳಿದ್ದಲ್ಲಿ ಮಾತ್ರ ಯುವ ಸಮುದಾಯ ದುಶ್ಚಟಗಳಿಂದ ದೂರವಿರಲು ಸಾಧ್ಯವಾಗುತ್ತದೆ. ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಕಾರ್ಯವನ್ನು ಪೊಲೀಸ್‌ ಇಲಾಖೆ ಸದಾಕಾಲವೂ ಮಾಡುತ್ತಿದೆ. ಹೆಚ್ಚು ಪರಿಣಾಮಕಾರಿ ಆಗಬೇಕಾದರೆ ಸಮಾಜದಲ್ಲಿರುವ ಪ್ರತಿಯೊಬ್ಬರು ಅಕ್ರಮ ಚಟಿವಟಿಕೆ ಹಾಗೂ ದಂಧೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲಿ ಮುಲಾಜಿಲ್ಲದೇ ಮಟ್ಟಹಾಕಲು ಸಾಧ್ಯವಾಗಲಿದೆ ಎಂದರು.

ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್‌ ಮಾತನಾಡಿ, ಬೆಳಗಾವಿಯನ್ನು ಕುಂದಾನಗರಿ ಎಂದು ಕರೆಯಲಾಗುತ್ತದೆ. ಈ ನಗರದ ಮಾಧಕ ವಸ್ತು ಸೇರಿದಂತೆ ಅಕ್ರಮ ಚಟುವಟಿಕೆಗಳು ಹೃದಯವೈಶಾಲ್ಯ ಹೊಂದಿರುವ ನಗರಕ್ಕೆ ಕಳಂಕ ತರುತ್ತವೆ. ಆದ್ದರಿಂದ ಬೆಳಗಾವಿ ನಗರವನ್ನು ಮಾದಕ ಮುಕ್ತವನ್ನಾಗಿಸಲು ಸದಾಕಾಲವೂ ಪ್ರಾಮಾಣಿಕವಾಗಿ ಕಾರ್ಯ ಮಾಡಲು ನಾನು ಹಾಗೂ ನಗರ ಪೊಲೀಸ್‌ ಸನ್ನದ್ಧವಾಗಿದೆ. ನಗರದ ಪೊಲೀಸ್‌ ವ್ಯಾಪ್ತಿಯಲ್ಲಿ ಡ್ರಗ್ಸ್‌, ಗಾಂಜಾ ಸೇರಿದಂತೆ ಅಕ್ರಮ ಚಟುವಟಿಕೆಗಳ ಕುರಿತು ಗಮನಕ್ಕೆ ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ನಗರ ಪೊಲೀಸ್‌ ಆಯುಕ್ತರ ಕಚೇರಿಯಿಂದ ಆರಂಭವಾದ ನಡಿಗೆ ಹಾಗೂ ಓಟದ ಮೂಲಕ ಜಾಗೃತಿ ಜಾಥಾವು ಕಾಲೇಜು ರಸ್ತೆ ಮೂಲಕ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಶೋಕ ವೃತ್ತ, ಖಡೇಬಜಾರ ರಸ್ತೆ, ಯಂಡೆ ಖೂಟ, ರಾಮಲಿಂಗಖಿಂಡ ಗಲ್ಲಿ, ಧರ್ಮವೀರ ಸಂಭಾಜಿ ವೃತ್ತದ ಮೂಲಕ ಮರಳಿ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಬಂದು ತಲುಪಿತು. ಈ ಜಾಗೃತಿ ಜಾಥಾದಲ್ಲಿ ಸುಮಾರು 500 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ವಿವಿಧ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌, ಎಸಿಪಿಗಳು, ಪಿಎಸ್‌ಐ, ಪೇದೆಗಳು ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ