ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಕೈ ಜೋಡಿಸಿ

KannadaprabhaNewsNetwork |  
Published : Dec 03, 2024, 12:31 AM IST
ಹೊಸದುರ್ಗದ ತಾಪಂ ಸಭಾಂಗಣದಲ್ಲಿ ಹೆದ್ದಾರಿ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಹೊಸದುರ್ಗ: ಕಂದಾಯ, ಭೂ ಮಾಪನ ಇಲಾಖೆ, ನೀರು ನೈರ್ಮಲ್ಯ ಇಲಾಖೆ, ಪುರಸಭೆ ಕೆಇಬಿ ಅಧಿಕಾರಿಗಳು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಕೈ ಜೋಡಿಸಿ ಪಟ್ಟಣದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಸಹಕರಿಸಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ಹೊಸದುರ್ಗ: ಕಂದಾಯ, ಭೂ ಮಾಪನ ಇಲಾಖೆ, ನೀರು ನೈರ್ಮಲ್ಯ ಇಲಾಖೆ, ಪುರಸಭೆ ಕೆಇಬಿ ಅಧಿಕಾರಿಗಳು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಕೈ ಜೋಡಿಸಿ ಪಟ್ಟಣದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಸಹಕರಿಸಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ಹೆದ್ದಾರಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆದ್ದಾರಿಯು ತರೀಕೆರೆ ರಸ್ತೆಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದ ಮೂಲಕ ಹೊಳಲ್ಕೆರೆಗೆ ಹಾದು ಹೋಗುತ್ತದೆ. ಈ ಭಾಗದಲ್ಲಿ ಪೈಪ್‌ಲೈನ್ ಅಳವಡಿಸುವುದಿದ್ದರೆ ಈಗಲೇ ಅಳವಡಿಸಿ, ರಸ್ತೆ ಪೂರ್ಣಗೊಂಡ ನಂತರ ರಸ್ತೆ ಅಗೆಯಬೇಡಿ ಎಂದು ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಅನಿಲ್ ಕುಮಾರ್ ಗೆ ಸೂಚಿಸಿದರು.ಯಾಲಕಪ್ಪನಹಟ್ಟಿ ಬಳಿ ರಸ್ತೆ ಅಗಲ ಮಾಡಲು ವಿದ್ಯುತ್ ಲೈನ್ ತೆಗೆಯಬೇಕಿದೆ. ಶೀಘ್ರ ತೆಗೆಸಿ ಕೊಡುವಂತೆ ಹೆದ್ದಾರಿ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದಾಗ, ಬೆಸ್ಕಾಂ ಅಧಿಕಾರಿಗೆ ಕ್ರಮ ವಹಿಸುವಂತೆ ಸೂಚಿಸಿ, ಅಭಿವೃದ್ಧಿ ಹೆಸರಲ್ಲಿ ದಿನಾ ವಿದ್ಯುತ್ ತೆಗೆಯಬೇಡಿ. ಇದರಿಂದ ಸಾರ್ವಜನಿಕರು ನಮ್ಮನ್ನು ಬೈಯುತ್ತಿದ್ದಾರೆ. ಒಂದೇ ದಿನ ಹೆಚ್ಚು ಕೆಲಸದವರನ್ನು ಪಡೆದು ಬೇಗ ಪೂರ್ಣಗೊಳಿಸಿ ಎಂದು ತಿಳಿಸಿದರು.ತರೀಕೆರೆ ರಸ್ತೆಯಲ್ಲಿ ಪುರಸಭೆಯ ಮಾಜಿ ಅಧ್ಯಕ್ಷರ ಮನೆಯಿದ್ದು, ಅವರು ತಮ್ಮ ಮನೆಯನ್ನು ರಸ್ತೆಗೆ ಹೊಂದಿಕೊಂಡಂತೆ ಕಟ್ಟಿದ್ದಾರೆ. ಇದರಿಂದ ಅವರ ಮನೆ ಮುಂದೆ ಚರಂಡಿ ಮಾಡಲು ಬಿಡುತ್ತಿಲ್ಲ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ರಸ್ತೆ ಮಾಡುತ್ತಿರುವುದು ಸಾರ್ವಜನಿಕರ ಅನುಕೂಲಕ್ಕೆ. ಯಾರೊಬ್ಬರ ಅನುಕೂಲಕ್ಕಲ್ಲ. ಹಾಗಾಗಿ ಪೊಲೀಸ್ ಸಹಕಾರ ಪಡೆದು ಒತ್ತುವರಿ ಜಾಗವನ್ನು ತೆರೆವುಗೊಳಿಸಿ ಕಾಮಗಾರಿ ನಡೆಸಲು ಅನುಕೂಲ ಮಾಡಿಕೊಡಿ ಎಂದು ಸಭೆಯಲ್ಲಿದ್ದ ಮುಖ್ಯಾಧಿಕಾರಿಗೆ ಸೂಚಿಸಿದರು. ಟೋಲ್ ಬದಲಾವಣೆ : ಹೇರೂರ್ ಗೇಟ್ ಬಳಿ ನಿರ್ಮಿಸಲು ಉದ್ದೇಶಿದ್ದ ಟೋಲ್ ಪ್ಲಾಜಾವನ್ನು ಮಾವಿನಕಟ್ಟೆ ಗ್ರಾಮದ ಬಳಿ ನಿರ್ಮಿಸಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಇಇ ನರೇಂದ್ರ ಸಭೆಗೆ ತಿಳಿಸಿದರು.ಹೊಸದುರ್ಗ ವಲಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ರಸ್ತೆ ಬದಿಯ ಮರ ತೆಗೆಯಲು ಅರಣ್ಯ ಇಲಾಖೆಗೆ ಹೆದ್ದಾರಿ ಪ್ರಾಧಿಕಾರ 1.37 ಕೋಟಿ ರು. ಹಣ ಕೊಟ್ಟಿದೆ. ಮರ ತೆಗೆದು ಈವರೆಗೂ ನೀವು ರಸ್ತೆ ಬದಿ ಸಸಿ ನೆಡುವ ಕೆಲಸ ಮಾಡಿಲ್ಲ ಯಾಕೆ ? ಎಂದು ವಲಯ ಅರಣ್ಯಾಧಿಕಾರಿ ಸುನಿಲ್‌ ಅವರನ್ನು ಪ್ರಶ್ನಿಸಿದ ಶಾಸಕರು, ಶೀಘ್ರವಾಗಿ ಎರೆಡು ಬದಿಯಲ್ಲಿ ಸಸಿ ನೆಡುವ ಮೂಲಕ ಅವುಗಳ ಸಂರಕ್ಷಣೆ ಮಾಡಿ ಎಂದು ಹೇಳಿದರು.

ಸಭೆಯಲ್ಲಿ ತಹಸೀಲ್ದಾರ್‌ ತಿರುಪತಿ ಪಾಟೀಲ್‌, ತಾಪಂ ಇಒ ಸುನಿಲ್‌ಕುಮಾರ್‌, ಪಿಐ ಮಧು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ