ನರೇಗಾ ಉದ್ಯೋಗ ಚೀಟಿ ಇದ್ದಲ್ಲಿ ಹೆಕ್ಟೇರ್‌ಗೆ ಲಕ್ಷ ರು. ಸಹಾಯಧನ

KannadaprabhaNewsNetwork | Published : Aug 21, 2024 12:37 AM

ಸಾರಾಂಶ

ರೆಡ್‌ ಲೇಡಿ ಪಪ್ಪಾಯ ತಳಿಗೆ ಬೇಡಿಕೆ ಇದೆ. ಆದರೆ ರಿಂಗ್‌ ಸ್ಪಾಟ್‌ ವೈರಸ್‌ ಹಾವಳಿ ಇದೆ

ಕನ್ನಡಪ್ರಭ ವಾರ್ತೆ ಮೈಸೂರು

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಉದ್ಯೋಗ ಚೀಟಿ ಇದ್ದಲ್ಲಿ ಪಪ್ಪಾಯ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ಒಂದು ಲಕ್ಷ ರೂ. ಸಹಾಯಧನ ಸಿಗಲಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಚ್.ಎಂ. ನಾಗರಾಜ್‌ ಕರೆ ನೀಡಿದರು.

ಬೆಂಗಳೂರು ಕೃಷಿ ವಿವಿಯ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ವಿಸ್ತರಣಾ ಶಿಕ್ಷಣ ಘಟಕವು ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್‌. ಮರೀಗೌಡರ ಜನ್ಮದಿನದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ತೋಟಗಾರಿಕೆ ದಿನಾಚರಣೆ, ಪಪ್ಪಾಯ ಬೆಳೆಯ ಸಮಗ್ರ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ಪಪ್ಪಾಯ ಬೆಳೆಯಲು ಹನಿ ನೀರಾವರಿ ಪದ್ಧತಿ ಅಳವಡಿಕಿಗೆ ಎಕರೆಗೆ 35 ಸಾವಿರ ರೂ. ಸಹಾಯಧನ ಸಿಗಲಿದೆ ಎಂದು ಹೇಳಿದರು.

ರೆಡ್‌ ಲೇಡಿ ಪಪ್ಪಾಯ ತಳಿಗೆ ಬೇಡಿಕೆ ಇದೆ. ಆದರೆ ರಿಂಗ್‌ ಸ್ಪಾಟ್‌ ವೈರಸ್‌ ಹಾವಳಿ ಇದೆ. ಪಾರಂಪರಿಕ್‌ ಕೃಷಿ ವಿಕಾಸ್‌ ಯೋಜನಾ, ನ್ಯಾಷನಲ್‌ ಪ್ರಾಜೆಕ್ಟ್‌ ಫಾರ್‌ ಆರ್ಗಾನಿಕ್‌ ಪ್ರಾಡಕ್ಟ್‌ [ಎನ್‌ಪಿಒಪಿ] ಯೋಜನೆಯ ಲಾಭ ಪಡೆಯಬೇಕು ಎಂದು ಅವರು ಸಲಹೆ ಮಾಡಿದರು.

ಹುಣಸೂರು ತಾ. ಹನಗೂಡು ಮೈಸೂರು ತಾ. ಜಯಪುರದಲ್ಲಿ 20 ರೈತರು ಮುಂದೆ ಬಂದಲ್ಲಿ 500 ಎಕರೆಯಲ್ಲಿ ಕ್ಲಸ್ಟರ್‌ ಮಾಡಲಾಗುವುದು. 50 ರೈತ ಹಿತಾಸಕ್ತಿ ಗುಂಪುಗಳನ್ನು ರಚಿಸಲಾಗುವುದು. ಸಾವಯವ ಪರಿವರ್ತನೆಗೆ ಪಿಜಿಎಸ್‌ ಪ್ರಮಾಣಪತ್ರ ಇದ್ದಲ್ಲಿ ಖರೀದಿದಾರರು ಮುಂದೆ ಬರುತ್ತಾರೆ ಎಂದರು.

ರೈತರು ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಬೇಕು. ಇದಕ್ಕಾಗಿ ಬನ್ನೂರು ರಸ್ತೆಯ ರಂಗಸಮುದ್ರದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ತೆರೆದಿರುವ ಸಮಗ್ರ ಜೈವಿಕ ಕೇಂದ್ರದ ಲಾಭ ಪಡೆಯಬೇಕು. ಅಲ್ಲಿ ಜಿ9 ತಳಿಯ ಬಾಳೆ ಗಿಡಗಳು ಸಹ ಲಭ್ಯವಿರುತ್ತವೆ ಎಂದರು.

ಡಾ.ಎಂ.ಎಚ್‌. ಮರೀಗೌಡರ ಕೊಡುಗೆ ಸ್ಮರಣೆ

ಇಡೀ ದೇಶದಲ್ಲಿಯೇ ತೋಟಗಾರಿಕೆಗೆ ಪ್ರತ್ಯೇಕ ಇಲಾಖೆ ಮೊದಲು ಆರಂಭವಾಗಿದ್ದು ಕರ್ನಾಟಕ ಹಾಗೂ ಹಿಮಾಚಲ ಪ್ರದೇಶದಲ್ಲಿ. ಇದಕ್ಕೆ ಡಾ.ಎಂ.ಎಚ್‌. ಮರೀಗೌಡರು ಕಾರಣ. ಇವತ್ತು ರಾಜ್ಯದಲ್ಲಿ 396 ತೋಟಗಾರಿಕೆ ಕ್ಷೇತ್ರಗಳು 18 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ವ್ಯಾಪಿಸಿವೆ. ಕಂದಾಯ, ಅರಣ್ಯ ಇಲಾಖೆ ಹೊರತುಪಡಿಸಿದರೆ ಅತಿ ಹೆಚ್ಚು ಭೂಮಿ ಇರುವುದು ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ. ಮರೀಗೌಡರು ಕೇವಲ ಸಪೋಟ, ಮಾವು ಮಾತ್ರವಲ್ಲದೇ ಹಣ್ಣು, ಹೂವು ಸೇರಿದಂತೆ ಹೊಸ ಹೊಸ ಬೆಳೆಗಳನ್ನು ಬೆಳೆಸಿದರು.ರೈತರಿಗೆ ಬೀಜ,ಗಿಡ, ಗೊಬ್ಬರ, ತಾಂತ್ರಿಕತೆ, ಮಾರುಕಟ್ಟೆ ಒದಗಿಸಿದರು. ಇದರಿಂದಾಗಿ ಇವತ್ತು ರಾಜ್ಯದಲ್ಲಿ 27 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 240 ಮೆಟ್ರಿಕ್‌ ಟನ್‌ನಷ್ಟು ತೋಟಗಾರಿಕೆ ಬೆಳೆಗಳ ಉತ್ಪಾದನೆಯಾಗುತ್ತಿದೆ ಎಂದು ಅವರು ಹೇಳಿದರು.

ಮೈಸೂರಿನ ಕರ್ಜನ್‌ ಉದ್ಯಾನದಲ್ಲಿ ಡಾ.ಎಂ.ಎಚ್‌. ಮರೀಗೌಡರ ಪ್ರತಿಮೆಯನ್ನು ಮುಖ್ಯಮಂತ್ರಿಗಳು ಕಳೆದ ವರ್ಷ ಅನಾವರಣ ಮಾಡಿದ್ದಾರೆ. ಲಿಂಗಾಂಬುದಿ ಕೆರೆಯ ಬಳಿ 16 ಎಕರೆ ಪ್ರದೇಶದಲ್ಲಿ ಬಟಾನಿಕಲ್‌ ಗಾರ್ಡನ್‌ ಕೂಡ ಇದೆ. ರೈತರು ಎರಡೂ ಕಡೆಗೂ ಭೇಟಿ ನೀಡಬೇಕು ಎಂದು ಅವರು ಮನವಿ ಮಾಡಿದರು.

ಅಡಿಕೆ ವಿಸ್ತೀರ್ಣ ಹೆಚ್ಚಾಗುತ್ತಿದೆ. ಆದರೆ ಇಳುವರಿ, ಕೀಟಬಾಧೆ, ರೋಗದಿಂದಾಗಿ ತೆಂಗು ಬೆಳೆ ಕಡಿಮೆಯಾಗುತ್ತಿದೆ. ತೆಂಗಿನ ಎಣ್ಣೆ ಮೌಲ್ಯವರ್ಧನೆ ಮಾಡಿದರೆ ಹೆಚ್ಚು ಲಾಭ ಮಾಡಬಹುದು. ತೆಂಗಿನೆಣ್ಣೆ ಬಳಸುವುದರಿಂದ ಆರೋಗ್ಯವೂ ವೃದ್ಧಿ, ರೈತರಿಗೂ ಲಾಭ ಎಂಬುದನ್ನು ರೈತರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಪ್ರಾಧ್ಯಾಪಕ ಹಾಗೂ ವಿಸ್ತರಣಾ ಮುಂದಾಳು ಡಾ.ಸಿ. ರಾಮಚಂದ್ರ ಮಾತನಾಡಿ, ರೈತರು ಮಾರುಕಟ್ಟೆ ಆಧಾರಿತ ಕೃಷಿ ಮಾಡಬೇಕು. ಸಾವಯವ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ರೈತರ ಆದಾಯ ದ್ವಿಗುಣವಾಗುತ್ತದೆ. ಉತ್ಪಾದಕತೆ ಹೆಚ್ಚಿಸಿ, ವೆಚ್ಚ ಕಡಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಎಸ್‌.ಬಿ. ಮಮತಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಸ್ವಯಂಸ್ಫೂರ್ತಿಯಿಂದ ತರಬೇತಿಗೆ ಹಾಜರಾಗುತ್ತಿದ್ದಾರೆ. ಇದರ ಲಾಭ ಪಡೆದು ಉತ್ತಮ ಬೆಳೆ ಬೆಳೆದು, ಉತ್ಪಾದಕತೆಗೆ ಹೆಚ್ಚಿಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಸರ್ಕಾರದಿಂದ ಸಿಗುವ ಸವಲತ್ತು, ತರಬೇತಿಯ ಲಾಭ ಪಡೆದು, ರೈತರು ಆರ್ಥಿಕವಾಗಿ ಮುಂದೆ ಬರಬೇಕು ಎಂದರು.

ಕೃಷಿ ವಿಜ್ಞಾನಿ ಡಾ.ವಸಂತಕುಮಾರ್‌ ತಿಮಕಾಪುರ, ಸಾವಯವ ಪಪ್ಪಾಯ ಖರೀದಿದಾರ ಕೆ.ಸಿ. ಸುಹಾಸ್‌ ಇದ್ದರು.

ಸಸ್ಯ ಸಂರಕ್ಷಣಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಆರ್‌.ಎನ್‌. ಪುಷ್ಪಾ ಸ್ವಾಗತಿಸಿದರು. ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ರಾಹುಲ್‌ ದಾಸ್‌ ನಿರೂಪಿಸಿದರು. ತಾಂತ್ರಿಕ ಅಧಿಕಾರಿ ಡಾ.ಜಿ.ವಿ. ಸುಮಂತ್‌ ಕುಮಾರ್‌ ವಂದಿಸಿದರು.

Share this article