ಅಶೋಕ ಡಿ. ಸೊರಟೂರ ಲಕ್ಷ್ಮೇಶ್ವರ
ಪ್ರತಿ ವರ್ಷ ಗಣೇಶ ಹಬ್ಬದ ಮರುದಿನ ಜೋಕುಮಾರ ಸ್ವಾಮಿಯ ಜನನವಾಗುತ್ತದೆ. ಜೋಕುಮಾರ ಸ್ವಾಮಿ ಶಿವನ ಮಗನೆಂದು ಪ್ರತೀತಿ ಇದೆ. ಉತ್ತರ ಕರ್ನಾಟಕದ ಬಹುತೇಕ ಗ್ರಾಮ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಜೋಕುಮಾರ ಸ್ವಾಮಿಯ ಜನಪದೀಯ ಮತ್ತು ಸಂಸ್ಕೃತಿಯ ವಿಶಿಷ್ಟ ಹಬ್ಬ ಆಚರಣೆ ಮಾಡಲಾಗುತ್ತದೆ.ಜೋಕುಮಾರ ಸ್ವಾಮಿ ಪೂಜೆ ಮಾಡುವುದರಿಂದ ಮಳೆ ಬೆಳೆ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆ ರೈತರಲ್ಲಿ ಬಲವಾಗಿದೆ. ಗಂಗಾಮತಸ್ಥರು ಜೋಕುಮಾರ ಸ್ವಾಮಿಯು ಭಾದ್ರಪದ ಮಾಸದ ಅಷ್ಟಮಿಯಂದು ಹುಟ್ಟುತ್ತಾನೆ. ಗಂಗಾಮತಸ್ಥರು ಮಣ್ಣಿನಿಂದ ತಯಾರಿಸಿದ ಜೋಕುಮಾರ ಸ್ವಾಮಿಯನ್ನು ಬಿದಿರನ ಬುಟ್ಟಿಯಲ್ಲಿ ಇಟ್ಟು ಬೇವಿನ ಸೊಪ್ಪು ಹೂವುಗಳಿಂದ ಅಲಂಕರಿಸಿ ಆತನನ್ನು ಹೊತ್ತುಕೊಂಡು ಮನೆ ಮನೆಗೆ ಹೋಗಿ ಜೋಕುಮಾರ ಸ್ವಾಮಿ ಪವಾಡಗಳನ್ನು ಹಾಡುಗಳ ಮೂಲಕ ಹೇಳಿ ಜನಪದೀಯ ಹಬ್ಬದ ಸೊಗಡು ಹಾಗೂ ಪರಂಪರೆ ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಜೋಕುಮಾರ ಸ್ವಾಮಿಯ ಅತಿಲೋಕ ಸುಂದರನಾಗಿರುವುದರಿಂದ ಹೆಂಗಳೆಯರ ಮನ ಕದಿಯುವ ಚೋರನಾಗಿದ್ದ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಜೋಕುಮಾರ ಸ್ವಾಮಿಯು 7 ದಿನಗಳ ಕಾಲ ಜೀವಂತವಾಗಿ ಭೂಲೋಕದ ಸೌಂದರ್ಯ ಅನುಭವಿಸುತ್ತಾನೆ. ಜೋಕುಮಾರ ಸ್ವಾಮಿಯ ಪೂಜಿಸುವ ಹೆಣ್ಣು ಮಕ್ಕಳು ಆತನ ಬಾಯಿಗೆ ಬೆಣ್ಣೆ ಹಚ್ಚಿ ಪ್ರಾರ್ಥನೆ ಮಾಡುತ್ತಾರೆ. ಇದರಿಂದ ಮಕ್ಕಳಿಲ್ಲದ ಹೆಂಗಳೆಯರಿಗೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತದೆ.
ಈ ವೇಳೆ ಗಂಗಾಮತಸ್ಥರು ನೀಡುವ ಕಪ್ಪನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ. ಅಲ್ಲದೆ ಅವರು ನೀಡುವ ಅಳಲು ಎನ್ನುವ ವಿಶಿಷ್ಟ ಪದಾರ್ಥ ಭೂಮಿಯಲ್ಲಿ ಹಾಕುವುದರಿಂದ ಉತ್ತಮ ಹಾಗೂ ಹೆಚ್ಚಿನ ಫಸಲು ಬರುತ್ತದೆ ಎನ್ನುವ ನಂಬಿಕೆ ರೈತರಲ್ಲಿ ಇದೆ.ಈ ವೇಳೆ ಭೂಲೋಕದಲ್ಲಿ ಬಿರು ಬೇಸಿಗೆಯ ಬಿಸಿಲು ಕಾಡುತ್ತದೆ. ರೈತರು ಮಳೆ ಇಲ್ಲದೆ ವಿಪರೀತ ಕಷ್ಟ ಅನುಭವಿಸುತ್ತಿರುವುದನ್ನು ತನ್ನ ತಂದೆ ಶಿವನಲ್ಲಿ ಅರಹುತ್ತಾನೆ. ಆಗ ಪರಮಾತ್ಮನು ಸಮೃದ್ಧಿಯಾದ ಮಳೆ ಸುರಿಸುವ ಮೂಲಕ ರೈತರ ಸಂಕಷ್ಟ ಪರಿಹರಿಸುವ ಕಾರ್ಯ ಮಾಡುತ್ತಾನೆ ಎನ್ನುವ ನಂಬಿಕೆ ಬಲವಾಗಿದೆ. ಗಂಗಾಮತಸ್ಥರು ಬಿದಿರನ ಬುಟ್ಟಿಯಲ್ಲಿ ಜೋಕುಮಾರ ಸ್ವಾಮಿಯನ್ನು ಹೊತ್ತುಕೊಂಡು ಹಾಡುವ ಜನಪದೀಯ ಹಾಡುಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ.
ಜೋಕುಮಾರ ಸ್ವಾಮಿಯನ್ನು ಜನಪದೀಯ ಶೈಲಿಯಲ್ಲಿ ಹಾಡುತ್ತ ಆತನ ಗುಣಗಾನ ಮಾಡುವ ಹಾಡುಗಳು ಹೀಗೆ ಆರಂಭವಾಗುತ್ತವೆ. ಅಡ್ಡಡ್ಡ ಮಳೆ ಬಂದು...ದೊಡ್ಡ ದೊಡ್ಡ ಕೆರೆಗಳು ತುಂಬಿ...ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ...ಎಂದು ಹಾಡುತ್ತ ಮನೆ ಮನೆಗೆ ತೆರಳಿ ದೈವಾಚರಣೆ ಮಾಡುತ್ತಿರುವುದು ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿದೆ.ಆಧುನಿಕ ಕಾಲದಲ್ಲಿ ನಮ್ಮ ಪರಂಪರೆ, ಸಂಸ್ಕೃತಿ ಆಚರಣೆಗಳು ಕಣ್ಮರೆಯಾಗುತ್ತಿವೆ. ನಿಮ್ಮ ಮುಂದಿನ ಪೀಳಿಗೆಗೆ ಇಂತಹ ಜಾನಪದ ಹಬ್ಬಗಳ ವೈಶಿಷ್ಟ್ಯ ಉಳಿಸಿಕೊಂಡು ಬರುವ ಕಾರ್ಯ ಮಾಡುವುದು ಅವಶ್ಯವಾಗಿದೆ ಎಂದು ರೇಣುಕಾ ಸುಣಗಾರ, ಮಾಳವ್ವ ಸುಣಗಾರ ತಿಳಿಸಿದ್ದಾರೆ.