ಭೀಮಣ್ಣ ಗಜಾಪುರ
ಕೂಡ್ಲಿಗಿ: ಅನಂತನ ಹುಣ್ಣಿಮೆ ಬಂದರೆ ಉತ್ತರ ಕರ್ನಾಟಕದ ಜನತೆಗೆ ಜೋಕುಮಾರಸ್ವಾಮಿಯ ಹಬ್ಬದ ಸಂಭ್ರಮವೋ ಸಂಭ್ರಮ.ಗಣೇಶ ಹುಟ್ಟಿ ಮೂರು ದಿನಗಳ ಆನಂತರ ಜೋಕುಮಾರ ಹುಟ್ಟುತ್ತಾನೆ. ಉತ್ತರ ಕರ್ನಾಟಕದಲ್ಲಿ ಗಂಗಾಮತಸ್ಥ (ಅಂಬಿಗ) ಮಹಿಳೆಯರು ಬುಟ್ಟಿಯಲ್ಲಿ ಜೋಕುಮಾರನ ಮೂರ್ತಿಯನ್ನು ಹೊತ್ತು ಮನೆ ಮನೆಗೆ, ಊರೂರುಗೆ ಹೋಗಿ ಜೋಕುಮಾರಸ್ವಾಮಿಯ ಹಾಡು ಹೇಳುವ ಪರಿ ಸೋಜಿಗ ಮೂಡಿಸುತ್ತದೆ.
ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ ನಮ್ಮ ಗೊಡ್ಡುಗಳೆಲ್ಲಾ ಹೈನಾಗಿ ನನ್ನ ಕೊಮರ ನಿನ್ನ ಶೆಡ್ಡಿಯ ಮ್ಯಾಲ ಸಿರಿ ಬಂದು... ಮಳೆಯಿಂದ ರೈತರ ಬಾಳು ಹಸನಾಗುವ ಪರಿಯನ್ನು ಮಹಿಳೆಯರು ಈ ರೀತಿ ವರ್ಣಿಸುತ್ತಾರೆ.ಬೆಣ್ಣೆಯ ತಾ ನನ್ನ ಕಂದಾಗ, ಹೊನ್ನು ಮಾಳೀಗಿ ಮನೆಯವ್ವ, ಹೊನ್ನು ಮಾಳಿಗೆ ಮನೆಯವ್ವ ಮಲ್ಲವ್ವ, ನೀ ಬೆಣ್ಣೆಯ ತಾ ನನ್ನ ಕೊಮರಾಗ... ಎಂದು ಹಳ್ಳಿಗಾಡಿನ ರೈತ ಮಹಿಳೆಯರನ್ನು ವರ್ಣಿಸುವ ಜೋಕುಮಾರ ಪದಗಳ ಝಲಕ್ ಗಳೇ ಹಾಗೆ... ಮತ್ತೆ ಮುಂದುವರಿದು, ಶೆಟ್ಟು, ಶೆಟ್ಟುರೆಲ್ಲಾ ಕಟ್ಟಿ ಮ್ಯಾಲ ಕುಂತೆ, ನಿದ್ರೆ ಕಂದಾನ ಕರಿಸ್ಯಾರ, ನಿದ್ರೆ ಕಂದಾನ ಕರೆಸ್ಯಾರೆ ಕೇಳಿರವ್ವ, ಒಂದು ಉತ್ತರಿ ಮಳೆ ಗನುವಾಗಿ ಎಂದು ಜೋಕಪ್ಪನ ಮಹಿಳೆ ಸಾರುತ್ತಾರೆ.
ಜೋಕುಮಾರಸ್ವಾಮಿಗೆ ರೈತರು ಕಾಳು-ಕಡಿ, ಬೆಣ್ಣೆ, ಮೆಣಸಿನಕಾಯಿ, ಉಪ್ಪು ಮುಂತಾದ ವಸ್ತುಗಳನ್ನು ಜೋಕಪ್ಪನಿಗೆ ಅರ್ಪಿಸಿ, ಭಕ್ತಿ ಮೆರೆಯುತ್ತಾರೆ.ಮಳೆ ತರಿಸುವ ದೇವ: ಗಣೇಶನ ಹಬ್ಬದಲ್ಲಿ ಮಳೆ ಇಲ್ಲದೇ ಮುಗಿಲು ನೋಡುತ್ತಿರುವ ರೈತರು ಜೋಕುಮಾರಸ್ವಾಮಿ ಹಬ್ಬ ಬಂತೆಂದರೆ ಹರ್ಷಪಡುತ್ತಾರೆ. ಜೋಕಪ್ಪ ಮಳೆ ತರಿಸುತ್ತಾನೆ ಎಂಬ ಬಲವಾದ ನಂಬಿಕೆ ಈಗಲೂ ಉತ್ತರ ಕರ್ನಾಟಕದ ರೈತರಲ್ಲಿದೆ. ಜೋಕುಮಾರಸ್ವಾಮಿ ಕಾಮಚೇಷ್ಟೆಯಿಂದ ಮಹಿಳೆಯರನ್ನು ಕಾಡುತ್ತಿದ್ದ ಎಂದು ಜೋಕಪ್ಪನ ಜಾನಪದ ಹಾಡುಗಳಲ್ಲಿ ಗೊತ್ತಾಗುತ್ತದೆ. ಈತ ಹುಟ್ಟಿ ಏಳುದಿನ ಹಾಗೂ ಸತ್ತು ಏಳು ದಿನಗಳ ಸಮಯವನ್ನು ಜೋಕಪ್ಪನ ಅಳಲು ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಹೊಸದಾಗಿ ಮದುವೆಯಾದ ಮಹಿಳೆಯರು ಈಗಲೂ ಗಂಡನ ಮನೆಯಲ್ಲಿ ಇರುವುದಿಲ್ಲ.
ಭಾದ್ರಪದ ಶುದ್ಧ ಅಷ್ಟಮಿಯಂದು ಜೋಕಪ್ಪನ ಜನನ. ಅಂದಿನಿಂದ 1 ವಾರ ಜೋಕಪ್ಪನ ಹಬ್ಬ ನಡೆಯುತ್ತದೆ. ಹುಟ್ಟಿ ವಾರದ ಆನಂತರ ಜೋಕಪ್ಪ ಸಾಯುತ್ತಾನೆ. ಅಂದು ಕಡುಬು, ಸಿಹಿ ಅಡುಗೆ ಮಾಡಿ ಹಳ್ಳಿಗಾಡಿನ ಎಲ್ಲ ಜನತೆ ಹಬ್ಬ ಆಚರಿಸುತ್ತಾರೆ. ಅನಂತನ ಹುಣ್ಣಿಮೆಯನ್ನು ಗ್ರಾಮೀಣ ಭಾಗದಲ್ಲಿ ಈಗಲೂ ಜೋಕಪ್ಪನ ಹುಣ್ಣಿಮೆಯೆಂದೇ ಕರೆಯುತ್ತಾರೆ. ಹಿಂದೆ ಜೋಕುಮಾರಸ್ವಾಮಿ ಆಚರಣೆ ವೈಭವದಿಂದ ನಡೆಯುತ್ತಿತ್ತು, ಈಗ ನೇಪಥ್ಯಕ್ಕೆ ಸರಿಯುತ್ತಿದೆ. ಗಂಗಾಮತ ಸಮಾಜದ ಮಹಿಳೆಯರ ತುದಿನಾಲಗೆಯ ಮೇಲಿರುವ ಜೋಕಪ್ಪನ ಹಾಡುಗಳು ಮುಂದಿನ ಪೀಳಿಗೆಗೆ ಒಯ್ಯುಬೇಕಾಗಿದೆ. ಜಾನಪದ ಅಕಾಡೆಮಿಗಳು, ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಿದೆ.ಜೋಕಪ್ಪ ನಮ್ಮ ಮನೇಲಿ ಹುಟ್ತಾನೆ, ನಾವೇ ಮಣ್ಣಿನ ಮೂರ್ತಿಯನ್ನು ಬುಟ್ಟಿಯಲ್ಲಿ ಹೊತ್ತು ಊರೂರು, ಮನೆ ಮನೆ ತಿರುಗ್ತೀವಿ, ನಮ್ಮ ವಂಶಸ್ಥರು, ಅಣ್ಣತಮ್ಮಂದಿರು ಪ್ರತಿವರ್ಷ ಸರತಿಯಂತೆ ಹಂಚಿಕೊಂಡು ಒಂದೊಂದು ವರ್ಷ ಒಬ್ಬೊಬ್ಬರು ಜೋಕುಮಾರನ ಬುಟ್ಟಿಯಲ್ಲಿ ಹೊತ್ತು ತಿರುಗ್ತೀವಿ. ನೂರಾರು ಜಾನಪದ ಹಾಡು ಹಾಡ್ತೀವಿ. ಆದ್ರೆ ಇದೂವರೆಗೂ ನಮ್ಗೆ ಸರ್ಕಾರ ಕಲಾವಿದರೆಯರ ಮಾಸಾಶಾನ ನೀಡ್ತಿಲ್ಲ ಎಂದು ಜೋಕುಮಾರನ ಪದಗಳನ್ನು ಹಾಡುವ ಮಹಿಳೆ ಸುನಂದಮ್ಮ ಹೇಳಿದರು.ಜೋಕುಮಾರನು ಹುಣ್ಣಿಮೆಯ ವಾರದ ಮೊದಲು ಹುಟ್ಟಿ ಅನಂತನ ಹುಣ್ಣಿಮೆಯಂದು ಸಾಯುತ್ತಾನೆ. ಜೋಕುಮಾರ ಸ್ವಾಮಿಯ ಪ್ರಸಾದವನ್ನು (ಚರಗ) ತೆಗೆದುಕೊಂಡು ಹೋಗಿ ಸೂರ್ಯ ಹುಟ್ಟೋ ಮುಂಚೆಯೇ ನಮ್ಮ ಹೊಲಗಳಲ್ಲಿ ಚೆಲ್ಲುತ್ತೇವೆ. ಚರಗ ಚೆಲ್ಲಿದರೆ ಬೆಳೆಗಳು ಹುಲುಸಾಗಿ ಬೆಳೀತಾವೆ ಎಂಬ ನಂಬಿಕೆ ನಮ್ಮಲ್ಲಿದೆ ಎಂದು ಕೂಡ್ಲಿಗಿಯ ರೈತ ಚೌಡಪ್ಪ ಹೇಳುತ್ತಾರೆ.