ಧಾರವಾಡ:
ಸತತವಾಗಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿ ಇದೀಗ 5ನೇ ಬಾರಿಗೆ ಸಂಸದರಾಗಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೋಮವಾರ ಪಕ್ಷದ ಹಿರಿಯ ಮುಖಂಡರು, ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.ಇದಕ್ಕೂ ಮೊದಲು ಇಲ್ಲಿಯ ಪ್ರತಿಷ್ಠಿತ ಮುರುಘಾಮಠ, ಅಂಬಾಭವಾನಿ ದೇವಸ್ಥಾನ, ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಹ ಸಲ್ಲಿಸಿದರು. ಮುರುಘಾಮಠದ ಮೃತ್ಯುಂಜಯಪ್ಪಗಳ, ಮಹಾಂತಪ್ಪಗಳ ಕರ್ತೃಗದ್ದುಗೆಗೆ ನಮನ ಸಲ್ಲಿಸಿ ಶ್ರೀಮಠದ ಪೀಠಾಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಾದ ಪಡೆದರು. ಜೋಶಿ ಅವರು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಕಾಲಿಗೂ ಎರಗಿ ಆಶೀರ್ವಾದ ಕೋರಿದರು. ಜಗಜ್ಯೋತಿ ಬಸವೇಶ್ವರ ಮೂರ್ತಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮೂರ್ತಿ, ವರಕವಿ ದ.ರಾ.ಬೇಂದ್ರೆ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ಟೆಂಪೆಲ್ ರನ್:ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಹ್ಲಾದ ಜೋಶಿ ಹುಬ್ಬಳ್ಳಿ ಹುಬ್ಬಳ್ಳಿ-ಧಾರವಾಡದ ವಿವಿಧ ಮಠ- ಮಾನ್ಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ, ಶ್ರೀಗಳ ಆಶೀರ್ವಾದ ಪಡೆದರು. ಹುಬ್ಬಳ್ಳಿ ಸಿದ್ಧಾರೂಢ ಮಠ, ಮುರುಸಾವಿರ ಮಠ, ಧಾರವಾಡ ಮುರುಘಾ ಮಠ, ಭವಾನಿ ನಗರ ಮತ್ತು ನವನಗರದ ರಾಘವೇಂದ್ರ ಸ್ವಾಮಿ ಮಠಗಳಿಗೆ ತೆರಳಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಅಲ್ಲದೇ, ನಾಗಶೆಟ್ಟಿಕೊಪ್ಪದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಧಾರವಾಡ ಲಕ್ಷ್ಮಿನರಸಿಂಹ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಬೃಹತ್ ಮೆರವಣಿಗೆ:ದೇವಸ್ಥಾನ-ಮಠಗಳ ಭೇಟಿ ಬಳಿಕ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಪಕ್ಷದ ವರಿಷ್ಟರೊಂದಿಗೆ ಧಾರವಾಡದ ಶಿವಾಜಿ ವೃತ್ತದಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಪಾರ ಬೆಂಬಲಿಗರೊಂದಿಗೆ ಶಿವಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು. ಎಲ್ಲೆಡೆಯು ಕೇಸರಿ ಧ್ವಜ, ಭರಾಟೆ ಬಿಜೆಪಿ ನಾಯಕರ ವಿಶ್ವಾಸ ಇಮ್ಮಡಿಗೊಳಿಸಿದಂತಿತ್ತು.ನೂರಾರು ಕಲಾವಿದರು ನೃತ್ಯ, ವಾದ್ಯಮೇಳ ಮುಖಾಂತರ ಮೆರವಣಿಗೆಗೆ ಮೆರಗು ನೀಡಿದರು. ಮೆರವಣಿಗೆಯಲ್ಲಿ ಹುಬ್ಬಳ್ಳಿ-ಧಾರವಾಡ, ಶಿಗ್ಗಾವಿ- ಸವಣೂರು ಸೇರಿದಂತೆ ಕ್ಷೇತ್ರದ ವಿವಿಧೆಡೆಯಿಂದ ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು. ಜೆಡಿಎಸ್ ಪ್ರಮುಖರು, ಕಾರ್ಯಕರ್ತರು ಸಹ ಪಾಲ್ಗೊಂಡು ಮೈತ್ರಿಕೂಟದ ಬಲಪ್ರದರ್ಶಿಸಿದರು.ಯಾರ್‍ಯಾರು ಸಾಥ್:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ, ಸಿ.ಟಿ. ರವಿ, ಮಾಜಿ ಸಂಸದರಾದ ವಿಜಯ ಸಂಕೇಶ್ವರ, ಪ್ರಭಾಕರ ಕೋರೆ, ವಿಪ ಸದಸ್ಯ ಎಸ್.ವಿ. ಸಂಕನೂರ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಸಚಿವ ಅಮೃತ ದೇಸಾಯಿ, ಸೀಮಾ ಮಸೂತಿ, ಶಿವು ಹಿರೇಮಠ, ಈರೇಶ ಅಂಚಟಗೇರಿ, ನಾಗರಾಜ ಛಬ್ಬಿ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಇದ್ದರು.ಮೆರವಣಿಗೆ ಮಧ್ಯದಲ್ಲಿ ಸೇರ್ಪಡೆಯಾದ ಜಗದೀಶ ಶೆಟ್ಟರ್ ಸಹ ಜೋಶಿಗೆ ಸಾಥ್ ನೀಡಿದರು. ಮೆರವಣಿಗೆಯುದ್ದಕ್ಕೂ ಕೇಸರಿ, ಬಿಜೆಪಿ ಧ್ವಜಗಳು, ನರೇಂದ್ರ ಮೋದಿ, ಜೋಶಿ, ಯಡಿಯೂರಪ್ಪ ಭಾವಚಿತ್ರಗಳು ರಾರಾಜಿಸಿದವು. ಬಿಜೆಪಿ, ನರೇಂದ್ರ ಮೋದಿ, ಜೋಶಿ ಪರ ಜಯಘೋಷಣೆ ಮೊಳಗಿದವು. ಮೆರವಣಿಗೆಯು ಸಂಪೂರ್ಣ ಮಾರುಕಟ್ಟೆ ಪ್ರದೇಶದಲ್ಲಿಯೇ ಹಾದು ಹೋದ ಕಾರಣ ಮೆರವಣಿಗೆ ಸಂಚರಿಸುವ ಮಾರ್ಗ ಬದಲಾವಣೆ ಮಾಡಲಾಗಿತ್ತು. ಜೊತೆಗೆ ನಗರದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ಮಾಜಿ ಸಂಸದರಾ ವಿಜಯ ಸಂಕೇಶ್ವರ, ಪ್ರಭಾಕರ ಕೋರೆ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪತ್ನಿ ಜ್ಯೋತಿ ಜೋಶಿ ಸಮ್ಮುಖದಲ್ಲಿ ನಾಲ್ಕು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಾಹ್ನ 3ರ ನಂತರ ಆಗಮಿಸಿದ್ದು ಅಷ್ಟರಲ್ಲಿ ನಾಮಪತ್ರ ಸಲ್ಲಿಕೆಯ ಸಮಯ ಮುಗಿದಿತ್ತು. ಕಾರಣ ಅವರಿಗೆ ನಾಮಪತ್ರ ಸಲ್ಲಿಸುವಾಗ ಭಾಗವಹಿಸಲು ಸಾಧ್ಯವಾಗಲಿಲ್ಲ.ಪಕ್ಷದ ಹಿರಿಯ ಮುಖಂಡರು, ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷದ ಮುಖಂಡರು ಸಾಥ್ ನೀಡಿದ್ದು ಕ್ಷೇತ್ರದ ಮತದಾರರ ಆಶೀರ್ವಾದದಿಂದ ಗೆಲವು ಸಾಧಿಸುತ್ತೇನೆ ಎಂಬ ವಿಶ್ವಾಸವಿದೆ ಎಂದು ಪ್ರಹ್ಲಾದ ಜೋಶಿ ಹೇಳಿದರು.