ಕನ್ನಡಪ್ರಭ ವಾರ್ತೆ ಮಂಡ್ಯ
ಹಬ್ಬದ ಮುನ್ನಾ ದಿನವಾದ ಸೋಮವಾರ ನಗರದ ಪೇಟೆಬೀದಿ ಸೇರಿದಂತೆ ಪ್ರಮುಖ ರಸ್ತೆಗಳೆಲ್ಲವೂ ಜನಜಂಗುಳಿಯಿಂದ ತುಂಬಿತ್ತು. ನಗರ ಮತ್ತು ಗ್ರಾಮೀಣ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮಾರುಕಟ್ಟೆಯ ಇಕ್ಕೆಲಗಳಲ್ಲಿ ಹಣ್ಣು, ಹೂವು, ತರಕಾರಿ ಮಾರಾಟ ಜೋರಾಗಿಯೇ ನಡೆದಿತ್ತು.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳು ಜನರಿಂದ ತುಂಬಿಹೋಗಿದ್ದವು. ಮಹಿಳೆಯರು, ಮಕ್ಕಳೊಂದಿಗೆ ಅಂಗಡಿಗಳಿಗೆ ಬಂದು ಹೊಸ ಬಟ್ಟೆ ಖರೀದಿಯಲ್ಲಿ ತೊಡಗಿದ್ದರು. ಇಷ್ಟವಾದ ಬಟ್ಟೆಗಳನ್ನು ಖರೀದಿಸಿದ ಖುಷಿ ಮಕ್ಕಳಲ್ಲಿದ್ದರೆ, ಮಹಿಳೆಯರು ಹೊಸ ಸೀರೆಗಳನ್ನು ಖರೀದಿಸಿದ ಸಂಭ್ರಮದಲ್ಲಿದ್ದರು. ಜನರನ್ನು ಸೆಳೆಯಲು ಬಟ್ಟೆ ಅಂಗಡಿಯವರು ಹಬ್ಬದ ಪ್ರಯುಕ್ತ ರಿಯಾಯಿತಿ ದರದಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವ ಬ್ಯುಸಿಯಲ್ಲಿದ್ದರು.ನಗರದ ಪೇಟೆ ಬೀದಿ, ಮಾರುಕಟ್ಟೆಗೆ ತೆರಳುವ ರಸ್ತೆ, ವಿ.ವಿ.ರಸ್ತೆಗಳಲ್ಲಿ ಮಾವಿನ ಸೊಪ್ಪನ್ನು ರಾಶಿ ಹಾಕಿಕೊಂಡು ಮಾರಾಟದಲ್ಲಿ ನಿರತರಾಗಿದ್ದರು. ಯುಗಾದಿಯ ದಿನ ಮನೆಯ ಬಾಗಿಲಿಗೆ ತೋರಣವಾಗಿ ಅಲಂಕರಿಸಲ್ಪಡುವ ಮಾವಿನಸೊಪ್ಪಿಗೆ ಎಲ್ಲೆಡೆ ಭರ್ಜರಿ ಬೇಡಿಕೆ ಇತ್ತು. ಮಾವಿನ ಸೊಪ್ಪು ಪ್ರತಿ ಕಟ್ಟಿಗೆ-೧೦ ರು., ಬೇವಿನಸೊಪ್ಪು-೧೦ ರು.ಗೆ ಮಾರಾಟವಾಗುತ್ತಿತ್ತು.
ನಿರೀಕ್ಷೆಯಂತೆ ಯುಗಾದಿಗೂ ಮುನ್ನ ಮಳೆಯಾಗಿದ್ದರೆ ಬೆಲೆ ಇಷ್ಟೊಂದು ಹೆಚ್ಚಾಗುತ್ತಿರಲಿಲ್ಲ. ಕಳೆದ ವರ್ಷದ ಮಳೆ ಕೊರತೆಯಿಂದ ಜನರ ಜೀವನ ಸಂಕಷ್ಟದಲ್ಲಿದೆ. ಈ ವರ್ಷ ಇನ್ನೂ ಜಿಲ್ಲೆಗೆ ಮಳೆಯ ದರ್ಶನವೇ ಆಗಿಲ್ಲ. ಬೆಳೆಗಳು ನೀರಿಲ್ಲದೆ ಒಣಗಿವೆ. ತರಕಾರಿ, ಹಣ್ಣು, ಹೂವು ಬೇಡಿಕೆಯಷ್ಟು ಪೂರೈಕೆಯಾಗದಿರುವುದರಿಂದ ಬೆಲೆಗಳೆಲ್ಲಾ ಹೆಚ್ಚಳವಾಗಿ ಗ್ರಾಹಕರ ಜೇಬನ್ನು ಸುಡುತ್ತಿವೆ.
ಮಳೆಯ ಕೊರತೆಯಿಂದಾಗಿ ಹೂವು, ಹಣ್ಣು ಮತ್ತು ತರಕಾರಿ ಬೆಲೆ ದುಪ್ಪಟ್ಟು ಹೆಚ್ಚಾಗಿದೆ. ಯುಗಾದಿಗೂ ಮುನ್ನ ಮಳೆಯಾಗಿದ್ದರೆ ಬೆಲೆಗಳು ನಿಯಂತ್ರಣದಲ್ಲಿರುತ್ತಿದ್ದವು. ನಿರೀಕ್ಷೆಯಂತೆ ಮಳೆಯಾಗದಿರುವುದರಿಂದ ಹೂವು, ಹಣ್ಣು, ತರಕಾರಿ ಬೆಲೆಗಳನ್ನು ಕೇಳಿದರೆ ಜನರು ಬೆಚ್ಚಿಬೀಳುವಂತಾಗಿದೆ.
ತರಕಾರಿ ಬೆಲೆಗಳು ಏರುಗತಿಯಲ್ಲಿತ್ತು. ಸಾಮಾನ್ಯ ದಿನಗಳಲ್ಲಿ ೫೦ ರು. ಇದ್ದ ಮಿಕ್ಸ್ ತರಕಾರಿ ಬೆಲೆ ೮೦ ರು.ಗೆ ಏರಿಕೆಯಾಗಿದೆ, ಸೌತೆಕಾಯಿ ೧ ಕ್ಕೆ ೧೫ ರು., ೧ ನಿಂಬೆಹಣ್ಣು-೧೫ ರು., ಕೊತ್ತಂಬರಿ ಸೊಪ್ಪು-೨೦ ರು. ಟಮೋಟೋ-೪೦ ರು.,ಅವರೆಕಾಯಿ-೬೦ ರು., ಚಪ್ಪರದವರೆಕಾಯಿ-೮೦ ರು., ಹೂಕೋಸು-೫೦ ರು., ಕ್ಯಾರೆಟ್-೬೦ ರು., ಬೀನ್ಸ್-೮೦ ರು., ಗೆಡ್ಡೆಕೋಸು-೫೦ ರು., ದಪ್ಪಮೆಣಸಿನಕಾಯಿ-೮೦ ರು., ಪಡವಲಕಾಯಿ-೪೦ ರು., ಹೀರೇಕಾಯಿ-೫೦ ರು., ಸೀಮೆ ಬದನೆಕಾಯಿ-೪೦ ರು., ಬಜ್ಜಿ ಮೆಣಸಿನಕಾಯಿ-೮೦ ರು., ಬೀಟ್‌ರೂಟ್-೬೦ ರು., ಮೆಣಸಿನಕಾಯಿ ಕೆಜಿ೧೨೦ ರು., ಇತ್ತು.