ಕನ್ನಡಪ್ರಭ ವಾರ್ತೆ ಮೈಸೂರುಮಹಿಳೆಯರು ಕೀಳರಿಮೆ ತೊರೆದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂದು ಸರಗೂರಿನ ಸ್ನೇಹ ಸ್ತ್ರೀ ಸಮಾಜದ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ ಹೇಳಿದರು.ನಗರದ ನಾಚನಹಳ್ಳಿ ಪಾಳ್ಯದ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರ ಸಾಧನೆಗಳನ್ನು ಗುರುತಿಸಿ ಗೌರವಿಸುವ ಜೊತೆಗೆ ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಲು ಹಾಗೂ ಲಿಂಗ ಸಮಾನತೆಯನ್ನು ಪ್ರತಿಪಾದಿಸಲು ಆಚರಿಸಲಾಗುವ ಮಹಿಳಾ ದಿನಾಚರಣೆ ಮಹಿಳೆಯರ ಪಾಲಿಗೆ ವಿಶೇಷ ದಿನವಾಗಿದೆ ಎಂದು ಅವರು ತಿಳಿಸಿದರು.ವಿಶ್ವಾದ್ಯಂತ ಆಚರಿಸಲ್ಪಡುವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮೂಲಕ ಮಹಿಳೆಯರ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇನ್ನು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವ ಜೊತೆಗೆ ಮಹಿಳೆಯರ ಹಕ್ಕುಗಳ ಬಗ್ಗೆ ಅರಿವನ್ನು ಹೊಂದಿರಬೇಕು ಇದರಿಂದ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ ಎಂದು ಹೇಳಿದರು.ಬೇರೆ ಬೇರೆ ವೃತ್ತಿ ತರಬೇತಿ ಪಡೆದುಕೊಂಡಿರುವ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜೆಎಸ್ಎಸ್ ಮಹಾವಿದ್ಯಾಪೀಠದ ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕರಾದ ಬಿ.ಎ. ರಾಜಶೇಖರ, ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಲೀಲಾವತಿ ಶಿವಕುಮಾರ್, ಸದಸ್ಯರಾದ ಹೇಮಾವತಿ, ಶಶಿಕಲಾ ನಾಗರಾಜ್, ಸತೀಶ್, ಮಲ್ಲೇಶಪ್ಪ ಐಸಿಎಆರ್ ಜೆಎಸ್ಎಸ್ ಆಸ್ಪತ್ರೆ ಯ ಜಿರಿಯಾಟ್ರಿಕ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಶಿಲ್ಪ ಅವರೇಬಿಳ್, ಜನಶಿಕ್ಷಣ ಸಂಸ್ಥೆಯ ನಿರ್ದೇಶಕ ಸಿ. ರಮೇಶ್, ಸೌಭಾಗ್ಯ, ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಮತ್ತು 400ಕ್ಕೂ ಹೆಚ್ಚು ಮಂದಿ ಮಹಿಳೆಯರು ಭಾಗವಹಿಸಿದ್ದರು.