ಕನ್ನಡಪ್ರಭ ವಾರ್ತೆ ಧಾರವಾಡ
ಇಲ್ಲಿಯ ಜಿಪಂ ಸಭಾಭನನದಲ್ಲಿ ಶುಕ್ರವಾರ ಸರ್ಕಾರದ ವಿವಿಧ ಇಲಾಖೆಗಳ ಮೇಲಿರುವ ದೂರುಗಳ ಪರಿಶೀಲನಾ ಸಭೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಸುಮಾರು ನಾಲ್ಕು ಗಂಟೆಗಳ ಕಾಲ ಅಧಿಕಾರಿಗಳಿಗೆ ಆಡಳಿತದ ನೀತಿ ಪಾಠ ಮಾಡಿದರು.ತಮ್ಮ ಮೇಲೆ ಸಾರ್ವಜನಿಕರು ತುಂಬ ನಿರೀಕ್ಷೆಗಳನ್ನಿಟ್ಟು ಕಚೇರಿಗಳಿಗೆ ಬಂದಿರುತ್ತಾರೆ. ತಾವು ಅವರನ್ನು ಸತಾಯಿಸುವುದು, ಕಾಯಿಸುವುದು ಹಾಗೂ ಹಣಕ್ಕೆ ಬೇಡಿಕೆ ಇಡುವುದು ಸರಿಯೇ? ಪಾರದರ್ಶಕ ಆಡಳಿತ ಕೊಡದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ನಿಶ್ಚಿತ. ಆದ್ದರಿಂದ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಸಾರ್ವಜನಿಕರ ಬೇಡಿಕೆ, ಮನವಿಗಳಿಗೆ ಕಾನೂನಾತ್ಮಕವಾಗಿ ಸ್ಪಂದಿಸಿ ತಕ್ಷಣ ಕ್ರಮವಹಿಸುವ ಮೂಲಕ ಆಡಳಿತದಲ್ಲಿ ಧಾರವಾಡ ಜಿಲ್ಲೆಯು ಇತರ ಜಿಲ್ಲೆಗಳಿಗೆ ಮಾದರಿ ಆಗುವಂತೆ ಕೆಲಸ ಮಾಡಿ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ದುರಾಡಳಿತ ತೆಗೆದು ಹಾಕುವುದು, ಭ್ರಷ್ಟಾಚಾರಕ್ಕೆ ತಡೆ ನೀಡುವುದು ಲೋಕಾಯುಕ್ತ ಕಾಯ್ದೆಯ ಮುಖ್ಯ ಉದ್ದೇಶ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ಕಾರ್ಯಕ್ರಮ ನಡೆಯುತ್ತಿದೆ. ಬಂದ ದೂರುಗಳನ್ನು ತನಿಖೆ ಸಹ ಮಾಡುತ್ತಿದ್ದೇವೆ. ಕಚೇರಿಗೆ ಬರುವ ಸಾರ್ವಜನಿಕರಿಗೆ ಸಹನೆಯಿಂದ ಉತ್ತರಿಸಿ ಮತ್ತು ಸರಿಯಾದ ಮಾಹಿತಿ ನೀಡುವ ಮೂಲಕ ಆಡಳಿತದಲ್ಲಿ ಜನರ ವಿಶ್ವಾಸ ಗಳಿಸಬೇಕು ಎಂದರು.ಸರ್ಕಾರಿ ಕಚೇರಿಗಳನ್ನು ಇಲಾಖಾ ಅಥವಾ ಜಿಲ್ಲಾ ಮುಖ್ಯಸ್ಥರು ಸಶಕ್ತವಾಗಿ ನಿಭಾಯಿಸಬೇಕು. ಕೆಳ ಹಂತದ ಅಧಿಕಾರಿಗಳ ಕಾರ್ಯವೈಖರಿಗಳನ್ನು ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ಮಾಡುವ ಮೂಲಕ ತಿಳಿದುಕೊಳ್ಳಬೇಕು. ಇತರರಿಗೆ ಮಾದರಿ ಆಗುವಂತೆ ಇಲಾಖೆಗಳನ್ನು ನಿರ್ವಹಣೆ ಮಾಡಬೇಕು. ಸಕಾಲದಲ್ಲಿ ಇಷ್ಟು ದಿನಗಳಿಗೆ ಅರ್ಜಿ ವಿಲೇವಾರಿ ಆಗಬೇಕು. ಆದರೆ, ಕೊನೆ ಕ್ಷಣದಲ್ಲಿ ಕೊರತೆ ಸೃಷ್ಟಿ ಮಾಡಿ ಅರ್ಜಿಗಳನ್ನು ರಿಜಕ್ಟ್ ಮಾಡುವುದರಿಂದ ಅರ್ಜಿದಾರರು ಮತ್ತೊಮ್ಮೆ ಅರ್ಜಿ ಹಾಕಿ ಹೇಗೆ ಕೆಲಸ ಮಾಡಿಸಿಕೊಳ್ಳಬೇಕೆಂದು ವಿಶೇಷವಾಗಿ ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಆಂತರಿಕ ಜಾಗೃತ ದಳಪ್ರತಿ ಇಲಾಖೆಗಳಲ್ಲಿ ಆಂತರಿಕ ಜಾಗೃತ ದಳಗಳನ್ನು ರಚಿಸಿಕೊಳ್ಳಬೇಕು. ಈ ಮೂಲಕ ಸಿಬ್ಬಂದಿ ಕಾರ್ಯಕ್ಷಮತೆ ಪರಿಶೀಲಿಸಬೇಕು. ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿ ಪುರಸ್ಕರಿಸಬೇಕು ಮತ್ತು ಕೆಲಸದಲ್ಲಿ ಉದಾಸೀನತೆ, ನಿರ್ಲಕ್ಷ್ಯ ಮತ್ತು ನಿಧಾನಗತಿ ಅನುಸರಿಸುವವರಿಗೆ ಎಚ್ಚರಿಕೆ ನೀಡಬೇಕು. ಅಗತ್ಯವಿದ್ದರೆ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ಲೋಕಾಯುಕ್ತರು ತಿಳಿಸಿದರು.
ಮಹಾನಗರಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಿಂದ ಅವಳಿ ನಗರದಲ್ಲಿ ಕಸ ಸಂಗ್ರಹ, ಕಸ ವಿಂಗಡನೆ, ತ್ಯಾಜ್ಯ ನಿರ್ವಹಣೆ, ಸಾವಯವ ಗೊಬ್ಬರ ತಯಾರಿಕೆ ಕುರಿತು ಮಾಹಿತಿ ಪಡೆದರು. ತ್ಯಾಜ್ಯ ನಿರ್ವಹಣೆಯಲ್ಲಿ ಇಂದೋರ ಮಾದರಿ ಅಳವಡಿಸಿಕೊಂಡು ದೇಶಕ್ಕೆ ಮಾದರಿ ಆಗಲು ಸೂಚಿಸಿದರು. ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಮೋಹನ ಶಿವಣ್ಣನವರ ಅವರಿಂದ ಜಿಲ್ಲೆಯ ಎಲ್ಲ 1206 ಕೆರೆಗಳ ಸಮೀಕ್ಷೆ ಕುರಿತು ಮಾಹಿತಿ ಪಡೆದ ನ್ಯಾಯಮೂರ್ತಿಗಳು, ಸಭೆ ನಂತರ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಜಿಪಂ ಸಿಇಒ ಸ್ವರೂಪಾ ಟಿ.ಕೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ, ಲೋಕಾಯುಕ್ತ ಕಾರ್ಯದರ್ಶಿ ಶ್ರೀನಿವಾಸ, ಧಾರವಾಡ ಲೋಕಾಯುಕ್ತ ಎಸ್.ಪಿ.ಸತೀಶ ಚಿಟಗುಪ್ಪಿ ಇದ್ದರು.
ಎಜೆಂಟ್ ಹಾವಳಿ ತಪ್ಪಿಸಿಭೂಮಾಪನ ಇಲಾಖೆ, ತಹಸೀಲ್ದಾರ್ ಕಚೇರಿ, ನೋಂದಣಿ ಕಚೇರಿ ಸೇರಿದಂತೆ ಸರ್ಕಾರದ ಹಲವು ಇಲಾಖೆಗಳಲ್ಲಿ ಎಜೆಂಟರ್ ಹಾವಳಿ ಬಗ್ಗೆ ಸಾಕಷ್ಟು ದೂರುಗಳಿವೆ. ಅಧಿಕಾರಿಗಳ ಹೆಸರಿನಲ್ಲಿ ಹಣ ಪಡೆಯುವ ಎಜೆಂಟರಿಂದ ಕೊನೆಗೆ ನೀವು ಸಹ ತೊಂದರೆ ಅನುಭವಿಸಬೇಕಾದೀತು. ನಿಮ್ಮ ಹೆಸರಿನಲ್ಲಿ ಎಷ್ಟು ಹಣ ಹೊಡೀತಾರೆ ನಿಮಗೂ ಗೊತ್ತಾಗೋದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಇಲಾಖೆಗಳಲ್ಲಿ ನೇರವಾಗಿ ಸಾರ್ವಜನಿಕರ ಕೆಲಸಗಳನ್ನು ಮಾಡಿರಿ. ಇಲ್ಲದೇ ಹೋದಲ್ಲಿ ತಾವು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಕ್ಕಳ ಮೇಲೆ ಕಾಳಜಿ ಇರಲಿ..ಡಿಡಿಪಿಐ ಕಚೇರಿಯಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿದೆ ಎಂಬ ದೂರಿದೆ. ಎಲ್ಲ ಸರ್ಕಾರಿ ಅಧಿಕಾರಿಗಳು ನೆಪ ಹೇಳದೆ ಜನರ ಕೆಲಸಗಳನ್ನು ಅವಧಿಯೊಳಗೆ ಮಾಡಿಕೊಡಿ. ಶಾಲೆಗಳಲ್ಲಿ ಮಕ್ಕಳ ಆರೋಗ್ಯ, ಗುಣಮಟ್ಟದ ಶಿಕ್ಷಣದತ್ತ ಕಾಳಜಿ ವಹಿಸದೇ ಇದ್ದಲ್ಲಿ ಉಗ್ರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಜಿಲ್ಲೆಯ ಶಾಲೆಗಳ ಬಗ್ಗೆ ಡಿಡಿಪಿಐ ವರದಿ ನೀಡಲು ನ್ಯಾಯಮೂರ್ತಿಗಳು ಸೂಚಿಸಿದರು.
ಆಸ್ಪತ್ರೆಗಳು ಸ್ವಚ್ಛವಾಗಿರಲಿಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಅಣ್ಣಿಗೇರಿ ಆಸ್ಪತ್ರೆಯ ಉದಾಹರಣೆಯೊಂದಿಗೆ ಹೇಳಿದ ನ್ಯಾಯಮೂರ್ತಿಗಳು, ವೈದ್ಯರು, ಸಿಬ್ಬಂದಿ ಸರಿಯಾದ ಸಮಯಕ್ಕೆ ಬರೋದಿಲ್ಲ, ಮೂವಮೆಂಟ್ ರಿಜಿಸ್ಟ್ರಾರ್ ಸರಿಯಾಗಿ ನಿರ್ವಹಿಸೋದೇ ಕೆಲಸದ ಸಮಯದಲ್ಲಿ ಬೇರೆ ಕೆಲಸಗಳಿಗೆ ಹೋಗುವುದು, ವೈದ್ಯರಂತೂ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆಂಬ ಆರೋಪ ಇದ್ದು, ಅಂತಹವರು ಸರ್ಕಾರಿ ಕೆಲಸ ಬಿಟ್ಟು ಬಿಡಿ ಎಂದು ಕಿಡಿಕಾರಿದರು. ಜಿಲ್ಲಾಸ್ಪತ್ರೆಯಲ್ಲಿ ಔಷಧಿ ವಿತರಣೆ ನಿರ್ವಹಣೆ ಹಾಗೂ ಒಳರಸ್ತೆಗಳ ರಿಪೇರಿ ಬಗ್ಗೆ ಚರ್ಚಿಸಿದರು.
ನರೇಗಾ ಅಕ್ರಮ ತಡೀರಿಗ್ರಾಮೀಣಾಭಿವೃದ್ಧಿ ಇಲಾಖೆಯ ವಿರುದ್ಧ ಹಲವು ದೂರುಗಳಿವೆ. ವಿಶೇಷವಾಗಿ ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡದೇ ಹಣ ಪಡೆಯಲಾದ ಬಗ್ಗೆ ದೂರುಗಳು ಬಂದಿವೆ ಎಂದು ತಡಕೋಡ ಗ್ರಾಮದಲ್ಲಿ ಜೈನರ್ ಕೆರೆಯ ಒಂದೇ ಕಾಮಗಾರಿಯನ್ನು ಐದು ಬಾರಿ ಅನುದಾನ ಬಳಕೆ ಮಾಡಲಾಗಿದೆ. ಖೊಟ್ಟಿ ಖಾತೆಗಳ ಮೂಲಕ ₹11 ಲಕ್ಷ ಹಣ ಹೊಡೆಯಲಾಗಿದೆ ಎಂಬ ದೂರನ್ನು ಜಿಪಂ ಸಿಇಒ ಗಮನಕ್ಕೆ ತಂದರು. ಜೊತೆಗೆ ಈ ಕುರಿತು ತನಿಖೆಗೆ ಮಾಡಲಿದ್ದೇವೆ ಎಂದರು. ಗ್ರಾಪಂಗಳು ಸಹ ಜನರಿಗೆ ಸತಾಯಿಸದೇ ಕೆಲಸಗಳನ್ನು ಮಾಡಿಕೊಡಲು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತಾಪಂ ಇಓಗಳಿಗೆ ಸೂಚಿಸಿದರು.
ಉಳ್ಳಾಗಡ್ಡಿ ಹೆಸರು ಮರೆಯೋದಿಲ್ಲಉಳ್ಳಾಗಡ್ಡಿ ಎಂಬ ನಿಮ್ಮ ಅಡ್ಡಹೆಸರು ನಾನೆಂತೂ ಮರೆಯೋದಿಲ್ಲ. ಹು-ಧಾ ಅವಳಿ ನಗರದಲ್ಲಿ ನಾನು ಪದವಿ, ಕಾನೂನು ಪದವಿ ಪಡೆದಿದ್ದು ಇಲ್ಲಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮೂಲಕ ಜಿಲ್ಲೆಯ ಋಣ ತೀರಿಸುತ್ತೇನೆ. ಅದಕ್ಕೆ ಅಧಿಕಾರಿಗಳು ಸಹಕಾರ ನೀಡಬೇಕು. ಮಹಾಗನರ ಪಾಲಿಕೆ ಸ್ವಚ್ಛತೆ ವಿಷಯದಲ್ಲಿ, ಬಿಡಾಡಿ ದನ, ನಾಯಿಗಳ ವಿಷಯದಲ್ಲಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಂದೋರ ಮಾದರಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಿ ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಅಕ್ರಮ ಮದ್ಯಕ್ಕೆ ಬ್ರೇಕ್ ಹಾಕಿಸಭೆಯಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಕಾರ್ಯವೈಖರಿಯನ್ನು ಸಹ ಪ್ರಶ್ನಿಸಿದ ಲೋಕಾಯುಕ್ತ ನ್ಯಾಯಮೂರ್ತಿಗಳು, ಹಳ್ಳಿ-ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದೇಕೆ. ಅವರ ಜೊತೆಗೆ ನೀವು ಕೈ ಜೋಡಿಸಿದ್ದೀರಾ ಎಂದು ಪ್ರಶ್ನಿಸಿ, ಸಮಾಜದ ಸ್ವಾಸ್ಥ್ಯ ಕಾಪಾಡಲು ಬದ್ಧರಾಗಿ ಕೆಲಸ ಮಾಡಿ. ಪರವಾನಗಿ ಇಲ್ಲದೇ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಅಬಕಾರಿ ಇಲಾಖಾಧಿಕಾರಿ ಮಂಜುನಾಥ ಅವರಿಗೆ ಸೂಚಿಸಿದರು.