ನಾಳೆ ನುಡಿಹಬ್ಬ- ಘಟಿಕೋತ್ಸವದಲ್ಲಿ ಗೌರವ ಪದವಿ ಪ್ರದಾನ । ರಾಜ್ಯಪಾಲರ ಆಗಮನಕನ್ನಡಪ್ರಭ ವಾರ್ತೆ ಹೊಸಪೇಟೆ
ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿಗೆ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ, ಸಾಹಿತಿ ಕುಂ.ವೀರಭದ್ರಪ್ಪ(ಕುಂ.ವೀ) ಮತ್ತು ಹಿಂದೂಸ್ತಾನಿ ಗಾಯಕ ಎಂ.ವೆಂಕಟೇಶ್‌ಕುಮಾರ್ ಭಾಜನರಾಗಿದ್ದಾರೆ ಎಂದು ವಿವಿ ಕುಲಪತಿ ಡಾ. ಡಾ. ಡಿ.ವಿ. ಪರಮಶಿವಮೂರ್ತಿ ಪ್ರಕಟಿಸಿದರು.ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ವಿವಿಯ 33ನೇ ಘಟಿಕೋತ್ಸವ-ನುಡಿಹಬ್ಬದ ನಿಮಿತ್ತ ರಾಯಚೂರು ಮೂಲದ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ, ವಿಜಯನಗರ ಜಿಲ್ಲೆ ಕೊಟ್ಟೂರಿನ ಸಾಹಿತಿ ಕುಂ.ವೀರಭದ್ರಪ್ಪ(ಕುಂ.ವೀ) ಬಳ್ಳಾರಿ ಮೂಲದ ಧಾರವಾಡದ ಹಿಂದೂಸ್ತಾನಿ ಗಾಯಕ ಎಂ.ವೆಂಕಟೇಶ್‌ಕುಮಾರ್ ಅವರಿಗೆ ಏ. 4ರಂದು ಸಂಜೆ 6:30ಕ್ಕೆ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಡಿ.ಲಿಟ್ ಹಾಗೂ ಪಿಎಚ್.ಡಿ. ಪದವಿ ಪ್ರದಾನ ಮಾಡಲಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಜಾಸಾಬ್ ಎ.ಎಚ್. ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.ಈ ಬಾರಿ 198 ಪಿಎಚ್‌ಡಿ ಮತ್ತು 7 ಡಿ.ಲಿಟ್ ಪದವಿಗಳನ್ನು ಕೂಡ ಪ್ರದಾನ ಮಾಡಲಾಗುತ್ತಿದೆ. ಕನ್ನಡ ವಿವಿ ಭಾಷೆ ಅಭಿವೃದ್ಧಿಗಾಗಿ ಜನ್ಮ ತಳೆದಿದೆ. ವಿವಿ ಆರ್ಥಿಕ ಸಂಕಷ್ಟದ ನಡುವೆಯೂ ಸಂಶೋಧನಾ ಕಾರ್ಯ ನಿಲ್ಲಿಸಲಾಗಿಲ್ಲ. ಅಲಕ್ಷಿತ ವಿಷಯಗಳ ಮೇಲೆ ಹಲವು ಸಂಶೋಧನೆ ನಡೆಸಲಾಗಿದೆ. ದೇಸಿ ಜ್ಞಾನವನ್ನು ಕನ್ನಡ ವಿಶ್ವವಿದ್ಯಾಲಯ ಶೋಧಿಸುತ್ತಿದೆ. ಕನ್ನಡ ವಿವಿ ಇತರೆ ಸಾಂಪ್ರದಾಯಿಕ ವಿವಿಗಳಂತೇ ಕೆಲಸ ಮಾಡದೇ, ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿದೆ. ಇದುವರೆಗೆ ಕನ್ನಡ ವಿವಿ 98 ಜನರಿಗೆ ನಾಡೋಜ ಗೌರವ ಪದವಿ ನೀಡಿದೆ ಎಂದರು.
ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ಹಣಕಾಸು ಅಧಿಕಾರಿ ಡಾ. ಎ. ಶ್ರೀಧರ, ಅಧ್ಯಯನಾಂಗ ನಿರ್ದೇಶಕ ಡಾ. ಅಮರೇಶ ಯತಗಲ್, ಡೀನ್‌ಗಳಾದ ಡಾ. ಎಫ್.ಟಿ. ಹಳ್ಳಿಕೇರಿ, ಡಾ. ಚಲುವರಾಜು, ಡಾ. ಶಿವಾನಂದ ಎಸ್. ವಿರಕ್ತಮಠ, ಡಾ. ಶೈಲಜ ಇಂ. ಹಿರೇಮಠ ಮತ್ತಿತರರಿದ್ದರು.ನಾಡೋಜ ಗೌರವ ಪದವಿಗೆ ಭಾಜನರಾದವರ ಕಿರು ಪರಿಚಯಶಿವರಾಜ ವಿ. ಪಾಟೀಲ
ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರು ಈ ದೇಶ ಕಂಡ ಅಪ್ರತಿಮ ನ್ಯಾಯಾಧೀಶರು. ಬಿಸಿಲನಾಡೆಂದೇ ಹೆಸರಾದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕುಗ್ರಾಮವಾದ ಮಲದಕಲ್‌ನಲ್ಲಿ ಜ. 12, 1940ರಂದು ಜನಿಸಿದರು. ರಾಯಚೂರಿನಲ್ಲಿ ಪದವಿ, ಕಾನೂನು ಪದವಿಯನ್ನು ಕಲಬುರಗಿಯಲ್ಲಿ ಪಡೆದು, ನ್ಯಾಯವಾದಿಯಾಗಿ ತಮ್ಮ ವೃತ್ತಿಯನ್ನು ಕಲಬುರಗಿಯಲ್ಲಿ 1962ರಲ್ಲಿ ಪ್ರಾರಂಭಿಸಿದರು. 1990ರವರೆಗೆ ಕಲಬುರಗಿ ಹಾಗೂ ನಂತರದಲ್ಲಿ ಬೆಂಗಳೂರಿನಲ್ಲಿ ನ್ಯಾಯವಾದಿಗಳಾಗಿ ತಮ್ಮ ಕಾನೂನಿನ ಪಾಂಡಿತ್ಯ ಹಾಗೂ ವಾಕ್‌ಚಾತುರ್ಯದ ಮೂಲಕ ಗಮನ ಸೆಳೆದರು.ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿ, ಮದ್ರಾಸ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿ ಮತ್ತು ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ವಸ್ತುನಿಷ್ಠ ತೀರ್ಪು ನೀಡಿದ್ದಾರೆ. ನಂತರ 2000ರಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಮತ್ತು ಹಂಗಾಮಿ ಅಧ್ಯಕ್ಷರಾಗಿ, 2ಜಿ ಸ್ಪೆಕ್ಟ್ರಂ ತನಿಖೆಯ ಏಕವ್ಯಕ್ತಿ ಸಮಿತಿ ಅಧ್ಯಕ್ಷರಾಗಿ, ಕರ್ನಾಟಕದಲ್ಲಿ ಬಾಲ್ಯವಿವಾಹ ತಡೆಗಟ್ಟುವ ಕೋರ್ ಕಮಿಟಿಯ ಅಧ್ಯಕ್ಷರಾಗಿ, ಕರ್ನಾಟಕ ಲೋಕಾಯುಕ್ತರಾಗಿ ನೇಮಕಗೊಳ್ಳುವ ಮೂಲಕ ತಮ್ಮ ವೃತ್ತಿಪರತೆಯನ್ನು ಇತರರಿಗೆ ಅನುಕರಣೀಯವಾಗುವಂತೆ ಮಾಡಿದ್ದಾರೆ.
ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲೂ ಸಾಹಿತ್ಯ ರಚಿಸುವ ಮೂಲಕ ದ್ವಿಭಾಷಾ ಪ್ರಬುದ್ಧತೆ ಪಡೆದವರಾಗಿದ್ದಾರೆ. ಇವರ ಕೃತಿಗಳು, ಶ್ರೀ ಶರಣ ಬಸವೇಶ್ವರರ ಚರಿತ್ರೆ, ಶಿಕ್ಷಣದ ಮಹತ್ವ, ಮಾನವ ಹಕ್ಕುಗಳು, ಭಾರತ ಸಂವಿಧಾನ ಮತ್ತು ವಿಶ್ವವಿದ್ಯಾಲಯಗಳು, ಅನುಭಾವದ ನುಡಿಗಳು, ಅನುಭಾವದ ನುಡಿಗಳು ಭಾಗ-೨, ಶಿವನುಡಿಗಳು, ಮುಂಜಾವಿಗೊಂದು ನುಡಿಕಿರಣ, ಸಾಧ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಕಳೆದ ಕಾಲ ನಡೆದ ದೂರ(ಆತ್ಮಕಥನ), ಸಂಜೆಗೊಂದು ನುಡಿಚಿಂತನ ಸೇರಿದಂತೆ ಮುಂತಾದ ಕೃತಿ ಬರೆದಿದ್ದಾರೆ.ಎಂ. ವೆಂಕಟೇಶ್‌ಕುಮಾರಪದ್ಮಶ್ರೀ ಎಂ.ವೆಂಕಟೇಶ್‌ಕುಮಾರ ಬಳ್ಳಾರಿ ಜಿಲ್ಲೆಯವರಾಗಿದ್ದು, ಜುಲೈ 1, 1953ರಲ್ಲಿ ಜನಿಸಿದ್ದಾರೆ. ತಂದೆ ಹುಲೇಪ್ಪನವರು ಪ್ರಸಿದ್ಧ ಜಾನಪದ ಕಲಾವಿದರು. ತಾಯಿ ಪಾರ್ವತಮ್ಮನವರ ಸಹೋದರರಾದ ಬಳ್ಳಾರಿ ಮೂಲದ ಬೆಳಗಲ್ಲು ವೀರಣ್ಣರವರು ಶ್ರೇಷ್ಠ ರಂಗ ಕಲಾವಿದರಾಗಿದ್ದರು. ಗದಗಿನ ಪಂಡಿತ ಪುಟ್ಟರಾಜ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮದಲ್ಲಿ ಕಿರಾಣಾ ಮತ್ತು ಗ್ವಾಲಿಯರ್ ಘರಾಣೆ ಸಂಗೀತ ಕಲಿತಿದ್ದಾರೆ. ನಂತರದಲ್ಲಿ ಮುಂಬಯಿ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಧಾರವಾಡದ ಕರ್ನಾಟಕ ಕಾಲೇಜಿನ ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಧಾರವಾಡದ ವಿದ್ಯಾಗಿರಿಯಲ್ಲಿ ವಾಸವಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿಯ ಇವರ ಪಾಂಡಿತ್ಯ ಹಾಗೂ ಪ್ರತಿಭೆಯನ್ನು ಗುರುತಿಸಿದ ಪಂಡಿತ ಭೀಮಸೇನ ಜೋಶಿ ಮೊದಲ ಬಾರಿಗೆ ಪುಣೆಯಲ್ಲಿ ನಡೆದ ಸವಾಯಿ ಗಂಧರ್ವ ಸಂಗೀತ ಮಹೋತ್ಸವದಲ್ಲಿ ಪ್ರದರ್ಶನ ನೀಡಲು ಆಹ್ವಾನ ನೀಡಿದ್ದು, ಇವರ ಸಂಗೀತ ಬದುಕಿಗೆ ಹೊಸ ತಿರುವನ್ನು ನೀಡಿತು.
ಇವರ ಸಂಗೀತದಲ್ಲಿ ವಿಶೇಷವಾಗಿ ಸರ್ಗಮ್ ಮಾದರಿಗಳಲ್ಲಿಯ ಕರ್ನಾಟಕ ಅಂಶಗಳ ಕುರುಹುಗಳಿರುವುದನ್ನು ಕಾಣಬಹುದು. ಜನ್ಮತಃ ಸುಮಧುರವಾದ ಕಂಚಿನ ಕಂಠವನ್ನು ಹೊಂದಿದ್ದಾರೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯಮಟ್ಟದ ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ.ಕುಂ. ವೀರಭದ್ರಪ್ಪಕುಂ. ವೀರಭದ್ರಪ್ಪ ಅಕ್ಟೋಬರ್ 1, 1953ರಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕುಂಬಾರ ಹಾಲಪ್ಪ ಹಾಗೂ ಕೊಟ್ರಮ್ಮರವರ ಪುತ್ರನಾಗಿ ಜನಿಸಿದರು. ಎಂ.ಎ. ಪದವೀಧರರಾದ ಇವರು 1975ರಿಂದ 2010ರವರೆಗೆ ಆಂಧ್ರ ಪ್ರದೇಶದ ಒಂದವಾಗಲಿ, ಗೂಳ್ಯಂ, ಡಿ. ಹಿರೇಹಾಳು ಗ್ರಾಮಗಳ ಪ್ರಾಥಮಿಕ ಶಾಲೆಗಳಲ್ಲಿ ಉಪಾಧ್ಯಾಯರಾಗಿ ಕಾರ್ಯನಿರ್ವಹಿಸಿದ್ದಾರೆ. ಐದು ದಶಕಗಳ ಕಾಲ ತಮ್ಮ ವಿಶಿಷ್ಟವಾದ ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ‘ಕುಂವೀ’ ಎಂಬ ಹೆಸರಿನಿಂದಲೇ ಚಿರಪರಿಚಿತರಾದರು. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದ ಸುಮಾರು ಐವತ್ತಕ್ಕೂ ಹೆಚ್ಚು ಮಹತ್ವದ ಮೌಲಿಕ ಕೃತಿಗಳನ್ನು ಸಾಹಿತ್ಯ ಹಾಗೂ ಸಂಸ್ಕೃತಿ ಲೋಕಕ್ಕೆ ನೀಡಿದ್ದಾರೆ.
ಇವರ ಕಥಾ ಸಂಕಲನಗಳಲ್ಲಿ - ಇನ್ನಾದರು ಸಾಯಬೇಕು, ಡೋಮ ಮತ್ತಿತರ ಕಥೆಗಳು, ಭಗವತಿ ಕಾಡು, ನಿಜಲಿಂಗ, ಕುಂ.ವೀ. ಕಥೆಗಳು, ಎಂಟರ್ ದಿ ಡ್ರಾಗನ್, ಮಣ್ಣೇ ಮೊದಲು, ನಿಗಿ ನಿಗಿ ಹಗಲು, ಅಪೂರ್ವ ಚಿಂತಾಮಣಿ ಕಥೆ, ಸುಶೀಲೆ ಎಂಬ ನಾಯಿಯೂ, ವಾಗಲಿ ಎಂಬ ಗ್ರಾಮವೂ, ಕರಿವೇಮಲ, ಭಳಾರೆ ವಿಚಿತ್ರಂ, ಸೂರ್ಯನ ಕೊಡೆ, ಕೂರ್ಮಾವತಾರ, ಕೊಳೆ, ಮಣ್ಣೇ ಮೊದಲು. ಕಾದಂಬರಿಗಳಲ್ಲಿ ಕಪ್ಪು, ಬೇಲಿ ಮತ್ತು ಹೊಲ, ಆಸ್ತಿ, ಕೆಂಡದ ಮಳೆ, ಮನಮೆಚ್ಚಿದ ಹುಡುಗಿ, ಹನುಮ, ಪ್ರೇಮವೆಂಬ ಹೊನ್ನುಡಿ, ಪ್ರತಿಧ್ವನಿ, ಶಾಮಣ್ಣ, ಕೊಟ್ರ ಹೈಸ್ಕೂಲಿಗೆ ಸೇರಿದ್ದು, ಯಾಪಿಲ್ಲು, ಅರಮನೆ, ಆರೋಹಣ, ಎನ್‌ಕೌಂಟರ್, ಎಲ್ಲೋ ಜೋಗಪ್ಪ ನಿನ್ನರಮನೆ, ಸುಪಾರಿ, ವಿಶ್ವಸುಂದರಿ, ಪಕ್ಷಿಗಳು, ಕಿಲುಬು, ಬೇಲಿಯ ಹೂಗಳು, ಕತ್ತೆಗೊಂದು ಕಾಲ, ಜೈ ಭಜರಂಗಬಲಿ, ಶ್ವಾನಾವಲಂಬನಕರಿ, ಮಾಕನಡಕು, ಏಕಾಂಬರ, ಹೇಮರೆಡ್ಡಿ ಮಲ್ಲಮ್ಮನ ಕಥೆಯು, ಬೇಟೆ, ದಿವಿ ಸೀಮೆಯ ಹಾಡು, ನೀನಿಲ್ಲದ ಮನೆ ಮುಂತಾದವುಗಳಾಗಿವೆ. ಜೀವನ ಚರಿತ್ರೆಗಳಲ್ಲಿ - ರಾಹುಲ ಸಾಂಕೃತ್ಯಾಯನ, ಸುಭದ್ರಮ್ಮ ಮನ್ಸೂರು, ನೇತಾಜಿ ಸುಭಾಸ್ ಚಂದ್ರಬೋಸ್, ಚಾರ್ಲಿ ಚಾಪ್ಲಿನ್, ಶ್ರೀಕೃಷ್ಣದೇವರಾಯ, ಅನುವಾದಗಳಲ್ಲಿ - ತೆಲುಗು ಕಥೆ, ಒಂದು ಪೀಳಿಗೆಯ ತೆಲುಗು ಕಥೆ, ತನ್ನ ಮಾರ್ಗ, ರಾಯಲ ಸೀಮೆಯ ಕಥೆಗಳು, ದಮ್ಮುಲಾಲ್ ಛೋಪ್ರ, ತೆಲುಗು ಸಾಹಿತ್ಯ ಲೋಕದ ಧ್ರುವತಾರೆ ಗುರುಜಾಡ ಅಪ್ಪಾರಾವ್ ಪ್ರಮುಖವಾಗಿವೆ. ಜಮೀನ್ದಾರಿ ವ್ಯವಸ್ಥೆ ಮತ್ತು ತೆಲುಗು ಸಾಹಿತ್ಯವೆಂಬ ವಿಮರ್ಶೆ, ರಾಯಲ ಸೀಮ ಎಂಬ ಅಂಕಣ ಬರಹ, ಗಾಂಧಿ ಕ್ಲಾಸು ಎಂಬ ಆತ್ಮಕಥೆ ಮುಂತಾದ ಕೃತಿಗಳು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಹೆಜ್ಜೆಗುರುತುಗಳನ್ನು ಮೂಡಿಸಿವೆ.ಕುಂವೀ ಅವರ ಅನೇಕ ಕಾದಂಬರಿಗಳು ಜನಪ್ರಿಯ ಚಲನಚಿತ್ರಗಳಾಗಿರುವುದೇ ಇವರು ಜನಪರ ಲೇಖಕರು ಎಂಬುದಕ್ಕೆ ಸಾಕ್ಷಿ. ಇವರ ಬರಹಗಳು ನಮ್ಮ ಗ್ರಾಮೀಣ ಭಾಗದ ಸೊಗಡನ್ನು ಹಾಗೂ ಜೀವಪರ ವಾಸ್ತವವಾದಗಳನ್ನು ಒಳಗೊಂಡಿವೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಅನುವಾದ ಅಕಾಡೆಮಿ, ಕರ್ನಾಟಕ ಚಲನಚಿತ್ರ ಸಮಿತಿಯ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ವಿಸಿಟಿಂಗ್ ಫೆಲೋ, ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ರೆಸಿಡೆಂಟ್ ರೈಟರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.