ಕನ್ನಡಪ್ರಭ ವಾರ್ತೆ ಮಳವಳ್ಳಿ
ಅಕ್ಷರ ಜ್ಞಾನ ಇಲ್ಲದವರಿಗೆ ಶಿಕ್ಷಣ ನೀಡಿದ ಜ್ಯೋತಿ ಸಾವಿತ್ರಿಬಾಯಿ ಫುಲೆ ಮಹಾನ್ ಸಾಧಕಿ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಸುಶೀಲಾ ತಿಳಿಸಿದರು.ತಾಲೂಕಿನ ನೆಲಮಾಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಜ್ಯೋತಿ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಣದಿಂದಲೇ ಸಮಾಜ ಅಭಿವೃದ್ಧಿ ಎಂದು ನಂಬಿದ್ದ ಜ್ಯೋತಿ ಸಾವಿತ್ರಿಬಾಯಿ ಫುಲೆ ಅವರು ದಲಿತ ಹಾಗೂ ಶ್ರೂದ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವ ನಿಟ್ಟಿನಲ್ಲಿ ಪೋಷಕರನ್ನು ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆ ತಂದು ಶಿಕ್ಷಣ ನೀಡಿದ್ದರು ಎಂದರು.
ದಲಿತರು ಹಾಗೂ ಶೂದ್ರ ಕುಟುಂಬದ ಹೆಣ್ಣು ಮಕ್ಕಳಿಗೆ ಹೋರಾಟದ ಮೂಲಕ ಶಿಕ್ಷಣ ಕಲಿಸುವುದರಲ್ಲಿ ಯಶಸ್ವಿಯಾಗಿ ದೇಶದ ಮೊದಲ ಶಿಕ್ಷಕಿ ಎಂದರು.ಪತಿ ಸಹಕಾರದಿಂದ ದಲಿತ ಮಕ್ಕಳಿಗೆ ಶಿಕ್ಷಣ ನೀಡಲು ಮೊಟ್ಟ ಮೊದಲಿಗೆ ಆರಂಭಿಸಿದರು. ಮೇಲ್ವರ್ಗದ ಜನರು ದಲಿತ ಮಕ್ಕಳಿಗೆ ಶಿಕ್ಷಣ ಕೊಡಿಸಬಾರದೆಂಬ ಉದ್ದೇಶದಿಂದ ಎಷ್ಟೆ ಅವಮಾನಿಸಿದರೂ ಯಾವುದಕ್ಕೂ ಹೆದರದೇ ದಲಿತರು ಶಿಕ್ಷಣದಲ್ಲಿ ಸಾಧನೆ ಮಾಡಲು ಬುನಾದಿ ಹಾಕಿದ್ದರು ಎಂದು ಸ್ಮರಿಸಿದರು.
ಸಮಾನ ಶಿಕ್ಷಣ ನೀಡಲು ಸತ್ಯ, ನ್ಯಾಯಯುತವಾಗಿ ಹೋರಾಡಿದ ಸಾವಿತ್ರಿ ಬಾಯಿ ಪುಲೆ ಅವರ ಆಶಯದಂತೆ ತಳ ಸಮುದಾಯ, ಹಳ್ಳಿಗಳಲ್ಲಿ, ಕೆಳಹಂತದ ಜನರಲ್ಲಿ ಶಿಕ್ಷಣದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗದ ಜನರಿಗೆ, ಹೆಣ್ಣು ಮಕ್ಕಳಿಗೆ ಮೂಲ ಶಿಕ್ಷಣ ನೀಡುವಂತೆ ಮಾಡುವಲ್ಲಿ ನಮ್ಮ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿದೆ ಎಂದರು.ಶಿಕ್ಷಕ ಬಿ.ಟಿ.ರಾಮಲಿಂಗಯ್ಯ ಮಾತನಾಡಿ, ಮಾನವೀಯತೆಯ ಆಧಾರದ ಮೇಲೆ ಸಮಾಜ ನಿರ್ಮಾಣವಾಗಬೇಕು. ಧರ್ಮ, ಮತ, ಜಾತಿ ಬೇಧಗಳನ್ನು ಮರೆತು ಶಿಕ್ಷಣ ಪಡೆದು ಉತ್ತಮ ಪ್ರಜೆಯಾಗಬೇಕು ಎಂದರು.
ಇದೇ ವೇಳೆ ಮುಖ್ಯಶಿಕ್ಷಕ ಬಿ.ಮಹದೇವು, ಗೋವಿಂದ್, ಸುಧಾ ಹೆಗಡೆ, ಪಾಯಿಮ ಬೇಗಂ, ನಾಗರಾಜು, ದಿವ್ಯಶ್ರೀ, ಸಂಘಟನೆಯ ಜೈಶೀಲಾ, ಸುವರ್ಣ, ನಾಗರತ್ನ, ರತ್ನಮ್ಮ ಇದ್ದರು.ಹಲಗೂರಲ್ಲಿ ‘ಅಕ್ಷರದ ಅವ್ವ’ನ ಭಾವಚಿತ್ರಕ್ಕೆ ಪೂಜೆ ಸಲ್ಲಿಕೆ
ಹಲಗೂರು:ಅಕ್ಷರದ ಅವ್ವ ಎನಿಸಿರುವ ಸಾವಿತ್ರಿಬಾಯಿ ಫುಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನದಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿ ನಿಂತ ದಿಟ್ಟ ಮಹಿಳೆ ಎಂದು ಬೆನಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ.ಟಿ.ಶಂಕರೇಗೌಡ ತಿಳಿಸಿದರು.ಬೆನಮನಹಳ್ಳಿ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ 193 ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಭಾರತದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದ ಅವ್ವ,ಆಧುನಿಕ ಶಿಕ್ಷಣದ ತಾಯಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಎಂಬ ಹಲವು ರೀತಿಯಲ್ಲಿ ಕರೆಯುತ್ತಾರೆ ಎಂದರು.ಅನುಮಾನಗಳನ್ನು ಮೆಟ್ಟಿ ನಿಂತು ಮಹಿಳೆಯರ ಸಮಾಜದ ಸಮಾಜದ ಎಲ್ಲ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣರಾದರು. ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ, ಕೇಶ ಮುಂಡನೆ ವಿರುದ್ಧ ಹೋರಾಟ ಮಾಡಿ ಮಹಿಳೆಯರಿಗೋಸ್ಕರ ಪ್ರಥಮವಾಗಿ ಶಾಲೆಗಳು ಅಬಲಾಶ್ರಮ ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಸೇವೆಯನ್ನು ಗಮನಿಸಿದ ಬ್ರಿಟಿಷ್ ಸರ್ಕಾರ ಇವರಿಗೆ ‘ಇಂಡಿಯಾಸ್ ಫಸ್ಟ್ ಲೇಡಿ ಟೀಚರ್’ ಎಂದು ಬಿರುದು ಕೂಡ ಕೊಟ್ಟಿದೆ ಎಂದು ತಿಳಿಸಿದರು. ಈ ವೇಳೆ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಶಿಕ್ಷಕರಾದ ಮುತ್ತುರಾಜ್, ಹರೀಶ್ , ಸಹ ಶಿಕ್ಷಕರಾದ ಆಶಾ, ಜ್ಯೋತಿ ಮತ್ತು ಉಮಾ ಹಾಜರಿದ್ದರು.