ಕನ್ನಡಪ್ರಭ ವಾರ್ತೆ ಮೈಸೂರು
ಎಂಡಿಎಯಿಂದ 50:50 ಅನುಪಾತದ ನಿವೇಶನ ಹಂಚಿಕೆಯಲ್ಲಿ ಸಿಎಂ ಪಾತ್ರವಿಲ್ಲ. ಅನಗತ್ಯವಾಗಿ ಅವರ ಹೆಸರನ್ನು ಎಳೆದು ತರುತ್ತಿದ್ದಾರೆ. ತನಿಖೆಯಾಗಿ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಎಂಡಿಎ ಅಧ್ಯಕ್ಷ ಕೆ. ಮರೀಗೌಡ ತಿಳಿಸಿದರು.ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50:50 ಅನುಪಾತದಲ್ಲಿ ನಿವೇಶನ ಕೊಡುವುದಕ್ಕೆ ಗೆಜೆಟ್ ನೋಟಿಫಿಕೇಷನ್ ಆಗಿದೆ. 50:50 ಅನುಪಾತದಲ್ಲಿ ಪರಿಹಾರ ನೀಡುವುದಕ್ಕೂ ಆದೇಶ ಆಗಿದೆ ಎಂದರು.
ಸಿಎಂಗೆ ಕಡಿಮೆ ಪರಿಹಾರ ನೀಡಲಾಗಿದೆ:ಇಡೀ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಕಾನೂನಾತ್ಮಕವಾಗಿ ಇದೆ. ಎಂಡಿಎ ವತಿಯಿಂದ ಸಿಎಂ ಕುಟುಂಬಕ್ಕೆ 75 ಸಾವಿರ ಚದರ ಅಡಿ ಜಾಗ ಕೊಡಬೇಕಿತ್ತು. ಆದರೆ ಕೊಟ್ಟಿರುವುದು ಕೇವಲ 38 ಸಾವಿರ ಚದರ ಅಡಿಯಾದರೂ ನಮ್ಮ ನಾಯಕರು ಅಷ್ಟಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಹಿನಕಲ್ ಸರ್ವೆ ನಂ. 211ರಲ್ಲಿ 3.05 ಗುಂಟೆ ಜಮೀನು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 1981ರಲ್ಲಿ ಭೂ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ 1984ರಲ್ಲಿ ಕೈ ಬಿಡಲಾಯಿತು. ಅದಕ್ಕೆ 2024ರ ಜೂ. 12 ರಂದು ಪರಿಹಾರ ಕೊಟ್ಟಿದ್ದರು. ಒಟ್ಟು 36,753 ಚದರ ಅಡಿಗೆ ಪರಿಹಾರ ಕೊಡಲಾಗಿತ್ತು. ಇದಕ್ಕಾಗಿ ವಿಜಯನಗರದ ವಿವಿಧ ಬಡಾವಣೆಗಳಲ್ಲಿ 20 ನಿವೇಶನ ಕೊಟ್ಟು ಆದೇಶಿಸಲಾಗಿತ್ತು. ಈಗ ಆ ಆದೇಶಕ್ಕೂ ತಡೆ ಬಿದ್ದಿದೆ ಎಂದು ಅವರು ಹೇಳಿದರು.2015ರಲ್ಲಿ ಗೆಜೆಟ್ ನೋಟಿಫಿಕೇಷನ್ ಆಗಿ, 60:40 ಅನುಪಾತದಲ್ಲಿ ನೀಡಬೇಕು ಎಂದು ಆದೇಶ ಆಗಿತ್ತು. ಇದಾದ ಬಳಿಕ 2020ರಲ್ಲಿ 50:50 ಅನುಪಾತದಲ್ಲಿ ನಿವೇಶನ ನೀಡುವುದಕ್ಕೆ ಪ್ರಾಧಿಕಾರ ನಿರ್ಣಯವಾಗಿದೆ ಎಂದು ಅವರು ತಿಳಿಸಿದರು.
ಬದಲಿ ನಿವೇಶನ ಪಡೆದವರಲ್ಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕೂಡ ಒಬ್ಬರು. ಅವರ ಪತ್ನಿ ಶಾಂತಮ್ಮ ಹೆಸರಿನಲ್ಲಿ 2017ರಲ್ಲಿ 60x40 ಅಳತೆಯ ಬದಲಿ ನಿವೇಶನ ಪಡೆದಿದ್ದಾರೆ ಎಂದರು.ದೇವನೂರು 3ನೇ ಹಂತದ ಬದಲು ಮುಖ್ಯರಸ್ತೆಯಲ್ಲಿ ನಿವೇಶನ ಪಡೆದಿದ್ದಾರೆ. ನಿವೇಶನ ಸಂಖ್ಯೆ 2,525ರ ಬದಲಾಗಿ ಹೈವೆ ಬಳಿಯ ನಿವೇಶನ ಸಂಖ್ಯೆ 307 ರನ್ನು ಪಡೆದಿದ್ದಾರೆ. ವಿಶ್ವನಾಥ್ ಅವರು ರಾಜಕೀಯವಾಗಿ ದಿವಾಳಿಯಾಗಿ, ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಸಿಎಂ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಎಚ್. ವಿಶ್ವನಾಥ್ ಕೀಳುಮಟ್ಟದ ರಾಜಕಾರಣ ಮಾಡುವುದನ್ನು ಬಿಡಬೇಕು. ಅಂತಹವರ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅಂತಹವರ ಬಗ್ಗೆ ಮಾತನಾಡುವಾಗ ಸರಿಯಾಗಿ ಮಾತನಾಡಬೇಕು. ವಿಶ್ವನಾಥ್ ಅವರಂಥ ದಿವಾಳಿ ರಾಜಕಾರಣಿ ಇನ್ನೊಬ್ಬ ಇಲ್ಲ. ಇಡೀ ಪ್ರಕರಣದಲ್ಲಿ ಅಕ್ರಮ ಎಸಗಿರುವ ಎಲ್ಲರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸದ್ಯದಲ್ಲೇ ಸತ್ಯಾಸತ್ಯತೆ ಹೊರ ಬರಲಿದೆ ಎಂದರು.ಸಿಎಂ ಸಿದ್ದರಾಮಯ್ಯ ಆಪ್ತ ಹಿನಕಲ್ ಪಾಪಣ್ಣಗೆ ಎಂಡಿಎ ನಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಆರೋಪವಿದೆ. ಇದನ್ನೂ ತಡೆ ಹಿಡಿಯಲಾಗಿದೆ. ಈ ಮೊದಲು ನ್ಯಾಯಾಲಯದ ಆದೇಶದಂತೆ ಬದಲಿ ನಿವೇಶನ ಹಂಚಿಕೆ ಆಗಿತ್ತು. ಹಂಚಿಕೆ ವೇಳೆ ತಪ್ಪಾಗಿದೆ ಎಂದು ಗೊತ್ತಾಗಿ, ಈಗ ಅದನ್ನೂ ತಡೆ ಹಿಡಿಯಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಕೆ. ಹರೀಶ್ ಗೌಡ, ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಸೇರಿದಂತೆ ಹಲವರು ಇದ್ದರು.---
ಕೋಟ್ಎಂಡಿಎಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ಸಚಿವ ಭೈರತಿ ಸುರೇಶ್ ಸೂಚನೆ ಮೇರೆಗೆ ಕೂಲಂಕುಷವಾಗಿ ತನಿಖೆ ನಡೆಯಲಿದೆ. ಈ ಹಂತದಲ್ಲಿ ಹೆಚ್ಚು ಮಾತನಾಡುವುದಿಲ್ಲ.
- ಕೆ. ಮರೀಗೌಡ, ಎಂಡಿಎ ಅಧ್ಯಕ್ಷ