ಸಂಸದ ಯದುವೀರ್ ಅಧಿಕೃತ ಕಚೇರಿ ಉದ್ಘಾಟನೆ

KannadaprabhaNewsNetwork | Published : Aug 15, 2024 1:48 AM

ಸಾರಾಂಶ

ಮೈಸೂರಿನಲ್ಲಿ ಇದ್ದಾಗ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಚೇರಿಯಲ್ಲಿ ಇರುತ್ತೇನೆ. ಕಾರ್ಯಕ್ರಮಗಳು ಇದ್ದಾಗ ಇರುವುದಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು- ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಕಚೇರಿ ಬುಧವಾರ ಕಾರ್ಯಾರಂಭ ಮಾಡಿತು.

ನಗರದ ಕಾಡಾ ಆವರಣದಲ್ಲಿ ಆರಂಭಿಸಲಾದ ಕಚೇರಿಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಹೋಮ ನಡೆಯಿತು. ಬಳಿಕ ಮೂರು ಗಂಟೆಗೆ ನಗರದ ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಕೆ.ಪಿ. ವೀರಪ್ಪ ಅವರ ಜತೆಗೂಡಿ ಸಂಸದ ಯದುವೀರ್ ಅವರ ಟೇಪು ಕತ್ತರಿಸಿ ಕಚೇರಿ ಉದ್ಘಾಟಿಸಿದರು.

ನಂತರ ಚಾಮುಂಡೇಶ್ವರಿ, ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ತಮ್ಮ ಆಸನದಲ್ಲಿ ಕುಳಿತರು. ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಸಚಿವರಾದ ಎಸ್.ಎ. ರಾಮದಾಸ್, ಸಾ.ರಾ. ಮಹೇಶ್, ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮೊದಲಾದವರು ಇದ್ದರು.

ಮಧ್ಯಾಹ್ನದ ತನಕ ಕಚೇರಿ

ಕಚೇರಿ ಉದ್ಘಾಟಿಸಿದ ಬಳಿಕ ಮಾಧ್ಯಮಗಳೊಡನೆ ಮಾತನಾಡಿದ ಯದುವೀರ್ ಅವರು, ಮೈಸೂರಿನಲ್ಲಿ ಇದ್ದಾಗ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಚೇರಿಯಲ್ಲಿ ಇರುತ್ತೇನೆ. ಕಾರ್ಯಕ್ರಮಗಳು ಇದ್ದಾಗ ಇರುವುದಿಲ್ಲ ಅಷ್ಟೆ. ಒಂದು ವೇಳೆ ಸಂಜೆ ಕಾರ್ಯಕ್ರಮ ಇಲ್ಲದಿದ್ದರೆ ಭೇಟಿ ಆಗುತ್ತೇನೆ ಎಂದರು.

ಸಾರ್ವಜನಿಕರು ಯಾವುದೇ ಕೆಲಸ ಕಾರ್ಯಗಳಿಗೆ ಸಂಪರ್ಕಿಸಬಹುದು. ಮೊದಲು ಅರಮನೆ ಕಚೇರಿ ಸಾರ್ವಜನಿಕ ಕಟ್ಟಡದಲ್ಲಿ ಇತ್ತು. ಈಗ ಅದೇ ಕಟ್ಟಡದಲ್ಲಿ ಕಚೇರಿ ತೆರೆಯಲಾಗಿದೆ. ಸಂಸದರ ಕಚೇರಿ ಸಾರ್ವಜನಿಕರ ಕಚೇರಿ ಆಗಿರುತ್ತದೆ. ಇಲ್ಲಿಗೆ ಬರುವುದಕ್ಕೆ ಯಾವುದೇ ಸಮಯ ನಿಗದಿ ಇಲ್ಲ. ಯಾವಾಗ ಬೇಕಾದರೂ ಭೇಟಿ ಆಗಬಹುದು ಎಂದು ಅವರು ತಿಳಿಸಿದರು.

ಮಾಜಿ ಮೇಯರ್ ಸಂದೇಶ್ ಸ್ವಾಮಿ, ಶಿವಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ. ಸತೀಶ್, ಬಿ.ವಿ. ಮಂಜುನಾಥ್, ಪ್ರಶಾಂತ್ ಗೌಡ, ಸೌಮ್ಯಾ ಉಮೇಶ್, ಪ್ರಮೀಳಾ ಭರತ್, ಆರ್. ರವೀಂದ್ರ, ಜಯರಾಮ್, ಜಗದೀಶ್, ವೇದಾವತಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಹೇಮಾ ನಂದೀಶ್, ಬಿಜೆಪಿ ಮುಖಂಡ ನಾಗರಾಜ್ ಮಲ್ಲಾಡಿ, ವಿ. ಸೋಮಸುಂದರ್, ಎಚ್.ಜಿ. ಗಿರಿಧರ್, ಮಹೇಶ್ ರಾಜೇ ಅರಸ್ ಮೊದಲಾದ ಮುಖಂಡರು ಹೂಗುಚ್ಛ ನೀಡಿ ಶುಭ ಕೋರಿದರು.

ಆರ್ಯವೈಶ್ಯ ಕೋ ಆಪರೇಟಿವ್ ಬ್ಯಾಂಕ್ ಪದಾಧಿಕಾರಿಗಳು, ಅರಸು ಸಮಾಜದ ಪ್ರಮುಖರು ಸೇರಿದಂತೆ ನೂರಾರು ಮಂದಿ ಅಗಮಿಸಿ ಸಂಸದರಿಗೆ ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದರು.

Share this article