ಕನ್ನಡಪ್ರಭವಾರ್ತೆ ಹಿರಿಯೂರು
ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ತಾಲೂಕಿನ ಮರಡಿದೇವಿಗೆರೆ ಕೋಡಿ ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದ ಅನುಭಾವ ಶ್ರಾವಣ ಸರಣಿ ಚಿಂತನ ಮಾಲೆಯ ಕಾರ್ಯಕ್ರಮದಲ್ಲಿ ಸರ್ಪಭೂಷಣ ಶಿವಯೋಗಿಗಳು ಕುರಿತು ಮಾತನಾಡಿದ ಅವರು, ಶಿವಯೋಗಿಗಳು ರಚಿಸಿದ ಸಾತ್ವಿಕ -ತಾತ್ವಿಕ ವೈಚಾರಿಕ ದೈವಿಕ ತತ್ವಪದಗಳು, ಇಂದಿನ ಪದವಿಗೆ ಸಮಾನ. ಎಂಥದ್ದೇ ಕಷ್ಟ ಬಂದರೂ ಕೂಡ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಒಂದು ನಾಯಿ ಮನೆಯಿಂದ ಮನೆಗೆ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಅಲೆದಾಡುತ್ತದೆ. ಆದರೆ ಅದು ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ. ಬೇರೊಂದು ಮನೆಯಲ್ಲಿ ಅದಕ್ಕೆ ಊಟ ಸಿಕ್ಕೇ ಸಿಗುತ್ತದೆ. ಮಾನವರಾದ ನಾವು ಕೂಡ ಅದರಂತೆ ಆತ್ಮವಿಶ್ವಾಸ ಕಳೆದುಕೊಳ್ಳದೇ ದೃಢವಾದ ವಿಶ್ವಾಸ ಹೊಂದಬೇಕು ಎಂದರು.
ನಿಜಗುಣ ಶಿವಯೋಗಿಗಳ ಕೈವಲ್ಯವನ್ನ ತಮ್ಮ ತತ್ವ ಪದಗಳಿಗೆ ಅಳವಡಿಸಿಕೊಂಡು ಅದನ್ನು ಮುಂದುವರಿಸಿದ ಕೀರ್ತಿ ನಮ್ಮ ಸರ್ಪಭೂಷಣ ಶಿವಯೋಗಿಗಳಿಗೆ ಸಲ್ಲಬೇಕು. ಬೆಂಗಳೂರಿನ ಬಾಣಾವರದಲ್ಲಿ ಹುಟ್ಟಿ ಸಮಾಜಕ್ಕೆ ಅತ್ಯದ್ಭುತವಾದ ತತ್ವಪದಗಳನ್ನು ನೀಡಿದವರು. ಅನೇಕ ವರ್ಷಗಳ ಕಾಲ ಸಂಚಾರ ಮಾಡಿ ಗುರುಸಿದ್ದ ಎಂಬ ಅಂಕಿತದೊಂದಿಗೆ ಪದಗಳನ್ನು ರಚಿಸಿದರು. ನಮ್ಮ ಈಗಿನ ಮಕ್ಕಳಿಗೆ ಇಂತಹ ವೇದಿಕೆಗಳ ಮೂಲಕ ಸಂಸ್ಕಾರ ಕೊಟ್ಟರೆ ಗುರು ಪರಂಪರೆ ಮತ್ತು ಆಧ್ಯಾತ್ಮ ಚಿಂತನೆ ಉಳಿಯುತ್ತದೆ ಎಂದು ಹೇಳಿದರು.ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಶಿವಯೋಗಿ ನಡೆಸುವ ಪೂಜೆ ಶಿವಯೋಗ. ಆ ಪೂಜೆ ನಿಲ್ಲುವುದೇ ಇಲ್ಲ ಅದು ನಿರಂತರ. ಯಾವುದು ನಿರಂತರ ಅದೇ ಶಿವಯೋಗ. ನಮ್ಮ ನಾಡಿನಲ್ಲಿ ಯೋಗಿತ್ರಯರೆಂದು ಪ್ರಸಿದ್ಧರಾಗಿದ್ದವರು ಶಿವಯೋಗಿ ಸಿದ್ದರಾಮೇಶ್ವರರು, ಯಡಿಯೂರು ಸಿದ್ದಲಿಂಗೇಶ್ವರರು ಹಾಗೂ ಸರ್ಪಭೂಷಣ ಶಿವಯೋಗಿಗಳು ಎಂದರು.
ಈ ವೇಳೆ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯ ಡಾ. ಬಸವ ಕುಮಾರ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ, ಗ್ರಾಮದ ಶಂಭುಲಿಂಗಪ್ಪ, ಶಿವಣ್ಣ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ದೇವಾಲಯದ ಸುತ್ತಮುತ್ತ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ತಜ್ಞರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.