ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಕಳಪೆ ಉದ್ದು ಬೀಜ ಬಿತ್ತನೆ ಮಾಡಿ ಅಪಾರ ನಷ್ಟ ಅನುಭವಿಸಿದ್ದೇವೆಂದು ಪರಿಹಾರ ಕೋರಿ 2011ರಲ್ಲಿ ಗ್ರಾಹಕರ ವೇದಿಕೆ ಮೊರೆ ಹೋಗಿದ್ದ ಜಿಲ್ಲೆಯ ರೈತರ ಪರವಾಗಿ ಬರೋಬ್ಬರಿ 12 ವರ್ಷಗಳ ನಂತರ 2023ರ ಡಿಸೆಂಬರ್ ಕೊನೆಯ ವಾರ ಆದೇಶ ಹೊರಬಿದ್ದಿದೆ.
ನ್ಯಾಯದಾನದಲ್ಲಿನ ಸುದೀರ್ಘ ವಿಳಂಬದಿಂದಾಗಿ ಪರಿಹಾರ ಹಣ ಕೈ ಸೇರುವ ಮುನ್ನವೇ ದಾವೆ ಹೂಡಿದ್ದ ಉದ್ದು ಬೆಳೆಯುವ ರೈತರ ಪೈಕಿ ಮೂವರು ರೈತರು ಸಾವನ್ನಪ್ಪಿದ್ದಾರೆ!ಕಳಪೆ ಉದ್ದು ಬಿತ್ತನೆ ಬೀಜ ಬಳಸಿ ಅಪಾರ ನಷ್ಟ ಹೊಂದಿದ್ದೇವೆಂದು ಜಿಲ್ಲೆಯ ಆಳಂದ ತಾಲೂಕಿನ ಮಾಡಿಯಾಳ ಗ್ರಾಮದ 31 ರೈತರು ನ್ಯಾಯಕ್ಕಾಗಿ ಕೋರಿ ರಾಜ್ಯ ಬೀಜ ನಿಗಮ ಹಾಗೂ ಕೃಷಿ ಇಲಾಖೆ ವಿರುದ್ಧ 2011ರಲ್ಲೇ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದ್ದರು, ರೈತರ ಗೋಳು ಆಲಿಸಿದ್ದ ಜಿಲ್ಲಾ ಗ್ರಾಹಕರ ವೇದಿಕೆ ಪ್ರತಿ ಎಕರೆಗೆ 5 ಸಾವಿರ ರು. ನಂತೆ ಪರಿಹಾರ ನೀಡಬೇಕೆಂದು 2012ರಲ್ಲೇ ಸಂತ್ರಸ್ತ 31 ರೈತರಿಗೆ ಪರವಾಗಿ ಆದೇಶ ನೀಡಿತ್ತು.
ಆದರೆ ಕಲಬುರಗಿ ಜಿಲ್ಲಾ ಗ್ರಾಹಕ ವೇದಿಕೆಯವರ ಈ ರೈತಪರವಾದಂತಹ ಆದೇಶ ಸುತರಾಂ ಒಪ್ಪದ ರಾಜ್ಯ ಬೀಜ ನಿಗಮ ಹಾಗೂ ಕೃಷಿ ಇಲಾಖೆ 2012ರಲ್ಲಿ ಬೆಂಗಳೂರಿನಲ್ಲಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾವೆ ಹೂಡಿ, ಕಲಬುರಗಿ ಜಿಲ್ಲಾ ಗ್ರಾಹಕರ ವೇದಿಕೆಯ 2012ರ ರೈತರ ಪರವಾದಂತಹ ಆದೇಶ ರದ್ದು ಮಾಡುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದರು.ಆದರೆ ಆ ಮೇಲ್ಮನವಿಗಳ ವಿಚಾರಣೆ ಮಾಡಿ ತೀರ್ಪು ನೀಡಲು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸರಿಸುಮಾರು ಒಂದು ದಶಕಕ್ಕೂ ಅಧಿಕ ಸಮಯ ತೆಗೆದುಕೊಂಡಿದ್ದರಿಂದಾಗಿ, ರೈತರ ಪರವಾಗಿ ಆದೇಶ ಬಂದರೂ ಸಹಿತ, ದಾವೆ ಹೂಡಿದ ಒಟ್ಟು 31 ರೈತರಲ್ಲಿ ಮೂವರು ರೈತರು ಅನಾರೋಗ್ಯ, ವಯೋಸಹಜ ಕಾಯಿಲೆಗಳಿಂದಾಗಿ ಸಾವನ್ನಪ್ಪಿದ್ದಾರೆ.
2010ರಲ್ಲಿ ಬೀಜ ಬೀಜ ನಿಗಮ ಪೂರೈಸಿದ್ದ, ಕೃಷಿ ಇಲಾಖೆ ಮಾರಾಟ ಮಾಡಿದ್ದ ಉದ್ದು ಬಿತ್ತನೆ ಬೀಜ ತಂದು ಬಿತ್ತಿದ್ದ ಮಾಡಿಯಾಳದ 31 ರೈತರು ಬೀಜಗಳು ಮೊಳಕೆಯನ್ನೇ ಒಡೆಯದೆ ಹೋದಾಗ ಹೌಹಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ತೀರ್ಪು ಬರೋದ್ರೊಳಗೇ ನ್ಯಾಯಕ್ಕಾಗಿ ದಾವೆ ಹೂಡಿದ ರೈತರ ಪೈಕಿ ವಯೋಸಹಜ ಕಾಯಿಲೆಗಳಿಗೆ ತುತ್ತಾಗಿ ರಾಮಚಂದ್ರ ಮಾಶ್ಯಾಳ, ಕೇಶವರಾಯ, ಈರಣ್ಣ ಕಲಶೆಟ್ಟಿ ಮೃತಪಟ್ಟಿದ್ದಾರೆ.ನಮ್ಮ ತಂದೆ 2015ರಲ್ಲೇ ಸಾವನ್ನಪ್ಪಿದ್ದಾರೆ. ಅದೆಷ್ಟು ಉದ್ದು ಬಿತ್ತಿ ಹಾನಿ ಅನುಭವಿಸಿದ್ದಾರೆಂಬುದು ನಮ್ಮ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಕಳಪೆ ಉದ್ದು ಬಿತ್ತನೆ ಬೀಜದಿಂದಾದ ಹಾನಿಗೆ ಪರಿಹಾರ ನೀಡುಬಕೇಕೆಂಬ ಆದೇಶ ಬಂದಿದೆ ಎಂದು ಗ್ರಾಹಕ ವೇದಿಕೆಯ ವಕೀಲ ವೈಜನಾಥ ಝಳಕಿ ಹೇಳಿದ್ದಾರಷ್ಟೆ ಎಂದು ಮೃತ ರೈತ ರಾಮಚಂದ್ರಪ್ಪರ ಪುತ್ರ ಮಲ್ಲೀನಾಥ ಕನ್ನಡಪ್ರಭ ಜೊತೆ ಮಾತನಾಡುತ್ತ ಹೇಳಿದರು.
3 ತಿಂಗಳಲ್ಲಿ ವಿಲೇವಾರಿ ಆಗಬೇಕಿದ್ದ ಮೇಲ್ಮನವಿಗೆ 10 ವರ್ಷ ತಗುಲಿತ್ತು!ಗ್ರಾಹಕರ ಅಧಿನಿಯಮದ ಪ್ರಕಾರ ಪ್ರಕರಣ ಅಥವಾ ಮೇಲ್ಮನವಿ ದಾವೆ ದಾಖಲಾದ 90 ದಿವಸಗಳ ಒಳಗೇ ಪ್ರಕರಣದ ವಿಲೇವಾರಿ ಆಗಬೇಕು ಎಂಬ ನಿಯಮವೂ ಇದೆ. ಆದರೆ ರಾಜ್ಯ ಗ್ರಾಹಕರ ವಾಜ್ಯ ಪರಿಹಾರ ಆಯೋಗದಲ್ಲಿ ಈ ನಿಯಮ ಪಾಲನೆ ಆಗದ್ದಕ್ಕೇ ರೈತರಿಗೆ ಜಿಲ್ಲಾ ಹಂತದಲ್ಲಿ ನ್ಯಾಯ ದೊರಕಿದ್ದರೂ ಸಹ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯ್ತು, ದಾವೇ ಹೂಡಿದ 31 ಸಂತ್ರಸ್ತ ರೈತರಲ್ಲಿ ಮೂರ್ನಾಲ್ಕು ರೈತರು ಸಾವನ್ನಪ್ಪಿದ್ದಾರೆ, ನ್ಯಾಯದಾನದಲ್ಲಿನ ವಿಳಂಬವೇ ಇಂತಹ ವೈರುಧ್ಯದ ಸಂದರ್ಭ ಸೃಷ್ಟಿಗೆ ಕಾರಣವಾಗಿದೆ ಎಂದು ಗ್ರಾಹಕ ವಾಜ್ಯಗಳ ವಕೀಲ ವೈಜನಾಥ ಝಳಕಿ ವಿಷಾದಿಸಿದ್ದಾರೆ.
ಕನ್ನಡಪ್ರಭ ಜೊತೆ ಮಾತನಾಡಿದ ಅವರು, 90 ದಿನದಲ್ಲಿ ಮೇಲ್ಮನವಿ ವಿಲೇವಾರಿ ಮಾಡಿದ್ದರೆ, ಮೃತರಾಗಿರುವ ಮೂವರು ರೈತರು ಕೂಡ ತಮ್ಮ ಜೀವಿತಾವಧಿಯಲ್ಲಿ ತಮಗೆ ನ್ಯಾಯ ಸಿಕ್ಕಿತೆಂದು ಪರಿಹಾರ ಹಣ ಪಡೆದು ಖುಷಿ ಪಡುತ್ತಿದ್ದರು. ಇಲ್ಲಿ ಪ್ರಕರಣ ವಿಲೇವಾರಿಯಲ್ಲಿನ ವಿಪರೀತ ವಿಲಂಬದಿಂದಲೇ ರೈತರು ಕೆಲವರು ಪರಿಹಾರ ಕಾಣದೆ ಸಾವನ್ನಪ್ಪುವಂತಾಗಿರೋದು ದುರಂತವೇ ಸರಿ.ಕಲಬುರಗಿಯಲ್ಲಿ 2022ರಲ್ಲೇ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪೀಠ ಮಂಜೂರಾದರೂ ಅದಿನ್ನು ಕಾರ್ಯಾರಂಭಿಸಿಲ್ಲ, ಸರಕಾರ ಕೂಡಲೆ ಈ ಪೀಠ ಕಲಬುರಗಿಯಲ್ಲಿ ಕಾರ್ಯಾರಂಭ ಮಾಡುವಂತೆ ಅಗತ್ಯ ಕ್ರಮ ಕೈಗೊಂಡು ಇಂತಹ ವಿಳಂಬ, ಆಭಾಸಗಳಿಗೆ ತೆರೆ ಎಳೆಯಬೇಕು. ನ್ಯಾಯಕ್ಕಾಗಿ ಪರಿತಪಿಸುತ್ತಿರುವ ಸಹಸ್ರಾರು ಗ್ರಾಹಕರಿಗೆ ಆದಷ್ಟು ಬೇಗ ನ್ಯಾಯ ದೊರಕಿಸಲು ಅನುವು ಮಾಡಿಕೊಡಬೇಕು
ವೈಜನಾಥ ಝಳಕಿ, ವಕೀಲರು, ಕಲಬುರಗಿ