ಕಲಬುರಗಿ: ಕೇಂದ್ರ ಸರ್ಕಾರದ ವಿರುದ್ಧ ಸಹಿ ಸಂಗ್ರಹ

KannadaprabhaNewsNetwork | Published : Jan 15, 2024 1:47 AM

ಸಾರಾಂಶ

ಸಮಾನ ವೇತನ ನಿಗದಿಪಡಿಸಿ ಶ್ರಮಿಕರ ಬದುಕನ್ನು ಉಳಿಸುವಂತೆ ಘೋಷಣೆಯಡಿ ಜ.23ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಂಸದರ ಕಚೇರಿ ಚಲೋ ನಿಮಿತ್ತ ಶುಕ್ರವಾರ ಸ್ಕೀಂ ನೌಕರರ ಸಂಘಟನೆಗಳು ಮತ್ತು ಸಿಐಟಿಯು ನೇತೃತ್ವದಲ್ಲಿ ಶ್ರಮಿಕರು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪ್ರಚಾರ ಜಾಥಾ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ಸಹಿ ಸಂಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಆಹಾರ, ಆರೋಗ್ಯ, ಶಿಕ್ಷಣ ಉಳಿಸಿ ದೇಶ ಅಭಿವೃದ್ಧಿಪಡಿಸುವಂತೆ, ಸಮಾನ ವೇತನ ನಿಗದಿಪಡಿಸಿ ಶ್ರಮಿಕರ ಬದುಕನ್ನು ಉಳಿಸುವಂತೆ ಘೋಷಣೆಯಡಿ ಜ.23ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಂಸದರ ಕಚೇರಿ ಚಲೋ ನಿಮಿತ್ತ ಶುಕ್ರವಾರ ಸ್ಕೀಂ ನೌಕರರ ಸಂಘಟನೆಗಳು ಮತ್ತು ಸಿಐಟಿಯು ನೇತೃತ್ವದಲ್ಲಿ ಶ್ರಮಿಕರು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪ್ರಚಾರ ಜಾಥಾ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ಸಹಿ ಸಂಗ್ರಹಿಸಿದರು.

ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿ ಇರುವ ಯೋಜನೆಗಳಾದ ಐಸಿಡಿಎಸ್, ಎಂಡಿಎಂ, ಎನ್‍ಎಚ್‍ಎಂ, ಐಸಿಪಿಎಸ್, ಎಸ್‍ಎಸ್‍ಎ, ಮನರೇಗಾ ಮುಂತಾದ ಯೋಜನೆಗಳನ್ನು ಕಾಯಂ ಮಾಡುವ ಮೂಲಕ ಹಕ್ಕುಗಳನ್ನು ಸಾರ್ವತ್ರಿಕರಣಗೊಳಿಸುವಂತೆ, ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ಸೇರಿ ಒಂದು ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಕೊಟ್ಟು ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿದರು.

3ರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಹೊರಗುತ್ತಿಗೆ ನೌಕರರಿಗೆ ಕಾಯಂ ಮಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡುವಂತೆ, ಅವರನ್ನು ಕಾಯಂಗೊಳಿಸಲು ವಿಶೇಷ ಕಾನೂನು ರಚಿಸುವಂತೆ, 49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು, ಕಳೆದ 21 ವರ್ಷಗಳಿಂದ ದುಡಿಯುತ್ತಿರುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರೆ ಸಿಬ್ಬಂದಿಗೆ 31 ಸಾವಿರ ರು. ಕನಿಷ್ಠ ವೇತನ ಜಾರಿ ಮಾಡುವಂತೆ, ನಿವೃತ್ತಿ ಸೌಲಭ್ಯಗಳನ್ನು ಮಾಸಿಕ ಕನಿಷ್ಠ ಹತ್ತು ಸಾವಿರ ರು.ಗಳ ಪಿಂಚಣಿ ಕೊಡುವಂತೆ ಆಗ್ರಹಿಸಿದರು.

ನಿವೃತ್ತಿ ಹೊಂದಿದ ಎಲ್ಲ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಗೆ ಗ್ರಾಜ್ಯುಟಿ ಹಣ ಬಿಡುಗಡೆ ಮಾಡುವಂತೆ, ಬಿಸಿಯೂಟ ನೌಕರರಿಗೆ ಪರಿಹಾರ ನೀಡದೇ ನಿವೃತ್ತಿ ಮಾಡದಿರುವಂತೆ, ಈಗಾಗಲೇ ನಿವೃತ್ತಿ ಆದವರಿಗೆ, ಆಗುವವರಿಗೆ ಇಡುಗಂಟು ನೀಡುವಂತೆ, ರಾಜ್ಯದಲ್ಲಿ ಇಲಾಖೇತರ ಕೆಲಸಗಳಾದ ಬಿಎಲ್‍ಓ ಸರ್ವೆ, ಐಸಿಡಿಎಸ್ ಯೋಜನೇತರ ಕೆಲಸಗಳಾದ ಭಾಗ್ಯಲಕ್ಷ್ಮೀ, ಮಾತೃವಂದನಾ, ಗೃಹಲಕ್ಷ್ಮೀ ಮುಂತಾದ ಕೆಲಸಗಳಲ್ಲಿ ಅಂಗನವಾಡಿ ನೌಕರರ ಬಳಕೆ ನಿಲ್ಲಿಸುವಂತೆ, ಶಾಲಾ ಪೂರ್ವ ಶಿಕ್ಷಣ ಕಲಿಕೆಗೆ ಸಮಯ ನೀಡುವಂತೆ, ವಿದ್ಯುತ್, ರೈಲ್ವೆ ಸೇರಿದಂತೆ ಯಾವುದೇ ಸಾರ್ವಜನಿಕ ವಲಯಗಳ ಖಾಸಗೀಕರಣ ನಿಲ್ಲಿಸುವಂತೆ ಅವರು ಒತ್ತಾಯಿಸಿದರು.

29 ಕಾರ್ಮಿಕ ಕಾನೂನುಗಳ ಸಂಹಿತೆ ಕೈಬಿಟ್ಟು ಕಾರ್ಮಿಕರ ಪರವಾದ ನೀತಿ ಜಾರಿಗೆ ತರುವಂತೆ ಆಗ್ರಹಿಸಿದರು. ದೇಶದ ಎಲ್ಲ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಚಿಸಲಾಗಿರುವ ಸಾಮಾಜಿಕ ಭದ್ರತಾ ಮಂಡಲಿ ಬಲಪಡಿಸಿ ಕೇಂದ್ರ ಸರ್ಕಾರ ವಾರ್ಷಿಕ ನಿವ್ವಳ ಆದಾಯದ ಶೇಕಡಾ 3ರಷ್ಟು ಅನುದಾನ ಅಂದರೆ ಮೂರು ಲಕ್ಷ ಕೋಟಿ ರು.ಗಳನ್ನು ಅಸಂಘಟಿತ ಕಾರ್ಮಿಕರ ಕಾರ್ಯಕ್ರಮಗಳಿಗೆ ಘೋಷಿಸುವಂತೆ, ಇ-ಶ್ರಮ್ ಯೋಜನೆಯಡಿ ಗುರುತಿನ ಚೀಟಿ ಪಡೆದಿರುವ ಎಲ್ಲ ಅಸಂಘಟಿತ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಸದಸ್ಯರಿಗೆ ಉಚಿತ ಶಿಕ್ಷಣ, ಆರೋಗ್ಯ, ಪಡಿತರ ಹಾಗೂ ವಸತಿ ಯೋಜನೆ ಜಾರಿಗೊಳಿಸುವಂತೆ, ದೇಶದ ಎಲ್ಲ ರಾಜ್ಯಗಳಲ್ಲಿ ಹಾಗೂ ರಾಜ್ಯ ಸರ್ಕಾರಗಳು ಬಜೆಟ್‍ನಲ್ಲಿ ಅನುದಾನ ಘೋಷಿಸುವಂತೆ ಅವರು ಆಗ್ರಹಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಂತೆ, ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ನೀಡುವ ನೀತಿ ಜಾರಿಗೆ ತರುವಂತೆ, ರಾಜ್ಯದಲ್ಲಿ ಕೆಲಸದ ಅವಧಿ ಹೆಚ್ಚಳವನ್ನು ತಂದಿರುವ ಕಾರ್ಖಾನೆ ಕಾಯ್ದೆ ತಿದ್ದುಪಡಿ ಕೈಬಿಡುವಂತೆ, ಕೆಲಸದ ಅವಧಿ ಹೆಚ್ಚಿಸುವ, ಮಹಿಳೆಯರಿಗೆ ರಾತ್ರಿ ಪಾಳೆಯದಲ್ಲಿ ದುಡಿಸಿಕೊಳ್ಳುವ ಅವಕಾಶ ನೀಡುವುದೂ ಸೇರಿದಂತೆ ಎಲ್ಲ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ವಾಪಸ್ ಪಡೆಯುವಂತೆ ಅವರು ಒತ್ತಾಯಿಸಿದರು.

ವೇತನ ಹೆಚ್ಚಳಕ್ಕೆ ಆಗ್ರಹ: ರೈತ ವಿರೋಧಿ ಕೃಷಿ ಕಾನೂನು ಹಿಂಪಡೆಯುವಂತೆ, ಕೃಷಿ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತ್ರಿಗೆ, ಎಪಿಎಂಸಿ ವ್ಯವಸ್ಥೆಯ ಬಲಕ್ಕಾಗಿ, ಗೊಬ್ಬರ ಸೇರಿ ಕೃಷಿ ಹಿಡುವಳಿಗಳಿಗೆ ಸಹಾಯಧನ ಕಡಿತಗೊಳಿಸುವ ನೀತಿ ಕೈಬಿಡುವಂತೆ, ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ ಆರನೇ ಗ್ಯಾರಂಟಿಯಾದ ಅಂಗನವಾಡಿ ನೌಕರರಿಗೆ 15000ರು., ಬಿಸಿಯೂಟದವರಿಗೆ 6000ರು. ವೇತನ ಹಾಗೂ ನಿವೃತ್ತಿ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಂ.ಬಿ. ಸಜ್ಜನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಗಯ್ಯಸ್ವಾಮಿ, ನಾಗಪ್ಪ ರಾಯಚೂರಕರ್, ಯಶವಂತಗೌಡ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ್, ಜಿಲ್ಲಾ ಖಜಾಂಚಿ ಮಹಾದೇವಮ್ಮ, ತಾಲ್ಲೂಕು ಅಧ್ಯಕ್ಷರಾದ ಮಂಜುಳಾ, ರತ್ನಾ, ಪ್ರಭಾವತಿ, ಇಂದುಮತಿ, ಕಾವೇರಿ, ತಾಲ್ಲೂಕು ಕಾರ್ಯದರ್ಶಿ ರಫತ್ ಸುಲ್ತಾನಾ ಮುಂತಾದವರಿದ್ದರು.

Share this article