ಕನ್ನಡಪ್ರಭ ವಾರ್ತೆ ಮೈಸೂರುನಗರದ ಕಲಾಮಂದಿರದಲ್ಲಿ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಶುಕ್ರವಾರ ಆಯೋಜಿಸಿದ್ದ ‘ನಿರ್ಮಲ ನೆನಪು’ ಕಾರ್ಯಕ್ರಮದಲ್ಲಿ ಆರ್. ರಘು ಅವರು ಪತ್ನಿ ನಿರ್ಮಲ ನೆನಪಲ್ಲಿ ರಚಿಸಿರುವ ‘ಭೂಮಿ ಪುತ್ರಿ’ ಕವನ ಸಂಕಲ ಮತ್ತು ‘ಅಂಕಣದ ಬೆಳಕು’ ಅಂಕಣ ಬರಹಗಳ ಸಂಗ್ರಹ ಪುಸ್ತಕಗಳನ್ನು ರಂಗಭೂಮಿ ಕಲಾವಿದೆ ಡಾ.ಬಿ. ಜಯಶ್ರೀ ಮತ್ತು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಬಿಡುಗಡೆಗೊಳಿಸಿದರು.ನಂತರ ಡಾ.ಬಿ. ಜಯಶ್ರೀ ಮಾತನಾಡಿ, ಮಹಿಳೆ ಏನೆಲ್ಲ ಕೆಲಸ ಮಾಡುತ್ತಾಳೆ. ಆದರೆ, ಒಂದು ದಿವಸವೂ ಪ್ರೀತಿಯಾಗಿ ಪುರುಷ ಸಮಾಜ ನೋಡಿಕೊಳ್ಳುವುದಿಲ್ಲ. ಹೊರಗೆ ನಾವು ದುಡಿಯುತ್ತೇವೆ. ಮನೆಯಲ್ಲಿರುವುದಷ್ಟೇ ಅವಳ ಕೆಲಸ ಎಂಬ ಮನಸ್ಥಿತಿ ಇದೆ. ಅವಳ ಕೆಲಸಗಳು ಪುರುಷ ಸಮಾಜಕ್ಕೆ ತಿಳಿಯುತ್ತಿಲ್ಲ. ಪುರುಷ ಎಷ್ಟಾದರೂ ನಿಷ್ಕೃಷ್ಠ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.ಆರ್. ರಘು ಅವರ ಪತ್ನಿ ನಿರ್ಮಲಾ ದೇವಸ್ಥಾನವೊಂದರಲ್ಲಿ ಮಗಳಿಗೆ ಹೇಳಿದಾಗೇ ಇಂದು ಆ ಮಗು ನ್ಯಾಯಾಧೀಶರಾಗಿದ್ದಾಳೆ. ತಾಯಿ ಮಾತನ್ನು ಹಠವಾಗಿ ಸ್ವೀಕರಿಸಿ ನ್ಯಾಯಾಧೀಶರಾಗಿದ್ದಾರೆ. ಇಂದು ನಿರ್ಮಲಾ ಅವರು ಇದ್ದಿದ್ದರೆ ಆ ಮಗುವನ್ನು ತಬ್ಬಿ ಮುದ್ದಾಡುತ್ತಿದ್ದರು. ನಿರ್ಮಲಾ ಬಹಳಷ್ಟು ಕೆಲಸ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದರು.ಭೂಮಿ ಪುತ್ರಿ ಎಂಬ ಅರಿವು ನಿರ್ಮಲಾ ಇದ್ದಾಗಲೇ ರಘು ಅವರಿಗೆ ಬರಬೇಕಿತ್ತು. ಅವರ ಪತ್ನಿ ಬದುಕಿದ್ದಾಗಲೇ ಪುಸ್ತಕ ಬರೆದಿದ್ದರೆ ನಿಮ್ಮನ್ನು ಭುಜ ಎತ್ತು ಕೊಂಡಾಡುತ್ತಿದ್ದರು. ಭೂಮಿ ಪುತ್ರಿ ಕವನ ಸಂಕಲನ ಓದಿದ ನಂತರ ಇತರ ಪುರುಷರಿಗೆ ಪತ್ನಿಯನ್ನು ಗೌರವದಿಂದ ನೋಡಬೇಕು ಎಂಬ ಅರಿವು ಮೂಡಿದರೆ ರಘು ಪುಸ್ತಕ ಬರೆದಿದ್ದಕ್ಕೂ ಸಾರ್ಥಕವಾಗಲಿದೆ ಎಂದು ಅವರು ತಿಳಿಸಿದರು.ಕೃತಿ ಕುರಿತು ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ಪತ್ರಿಕೆಯಲ್ಲಿ ಬರೆದ ಲೇಖನಗಳನ್ನು ಒಟ್ಟುಗೂಡಿಸಿ ಅಂಕಣದ ಬೆಳಕು ಕೃತಿ ಹೊರ ತರಲಾಗಿದೆ. ಆರ್. ರಘು ಅವರಿಗೆ ರಾಜಮನೆತನದ ಮೇಲೆ ಅಪಾರ ಗೌರವ ಹೊಂದಿದ್ದಾರೆ. ಗೋಕಾಕ್ ಚಳವಳಿ ಮತ್ತು ರಾಜಕುಮಾರ್ ಪ್ರಭಾವ ಅವರ ಮೇಲಿದೆ. ಮೈಸೂರಿನ ಮೇಲೆ ಪ್ರೀತಿ, ನೆಲೆ- ಜಲದ ಮೇಲೆ ಕಾಳಜಿ ಇದೆ. ಪತ್ನಿಯ ಮೌಲ್ಯ ಅರಿಯಬೇಕಾದರೆ ಮೊದಲು ಪುಸ್ತಕವನ್ನು ಕೊಂಡು ಓದಿ ಎಂದು ಹೇಳಿದರು. ಯದುವೀರ್ ಶ್ಲಾಘನೆಕಾರ್ಯಕ್ರಮ ಉದ್ಘಾಟಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ರಾಜಕೀಯ ವೃತ್ತಿ ಜೀವನದ ಒತ್ತಡದ ನಡುವೆ ಆರ್. ರಘು ಎರಡು ಪುಸ್ತಕಗಳನ್ನು ಹೊರ ತಂದಿರುವುದು ಶ್ಲಾಘನಿಯ. ಅಂಕಣದ ಬೆಳಕು ಪುಸ್ತಕದಲ್ಲಿ ಮೈಸೂರು ಸಂಸ್ಥಾನದ ಬಗ್ಗೆ ಬರೆದಿರುವುದು ಬಹಳ ಸಂತೋಷವಾಯಿತು. ಶಿಕ್ಷಣ, ರಾಜಕೀಯ ಹಾಗೂ ಸಾಮಾಜಿಕವಾಗಿ ಆರ್. ರಘು ಅಪಾರ ಕೊಡುಗೆ ನೀಡಿದ್ದಾರೆ. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿ ರಘು ಅವರ ಜವಾಬ್ದಾರಿ ದೊಡ್ಡದಿದೆ. ಸಣ್ಣ ಸಮುದಾಯಗಳನ್ನು ಒಗ್ಗೂಡಿ ಒಂದೇ ವೇದಿಕೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.ಕೋಮಲಾ ಹರ್ಷಕುಮಾರಗೌಡ, ಕಲಾವಿದೆ ಡಾ. ಶಾಂಭವಿ ಸ್ವಾಮಿ, ಸಂಗೀತ ಕಟ್ಟಿ ಮೊದಲಾದವರು ಇದ್ದರು. ದಿವ್ಯಾ ಆಲೂರು ನಿರೂಪಿಸಿದರು. ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಲ್. ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮೊದಲಾದವರು ಪಾಲ್ಗೊಂಡಿದ್ದರು.ಇದಕ್ಕೂ ಮುನ್ನ ‘ಪುಣ್ಯಕೋಟಿ (ಗೋವಿನ ಹಾಡು)’ ನೃತ್ಯ ರೂಪಕವು ಡಾ. ಶಾಂಭವಿ ಸ್ವಾಮಿ ನಿರ್ದೇಶನದಲ್ಲಿ ಪ್ರದರ್ಶನವಾಯಿತು. ಇದಾದ ಬಳಿಕ ಆರ್. ರಘು ಅವರು ಪತ್ನಿಗಾಗಿ ಬರೆದ ಗೀತೆಯೊಂದನ್ನು ಪ್ರದರ್ಶಿಸಲಾಯಿತು. ಗಾಯಕಿ ಸಂಗೀತಾ ಕಟ್ಟಿ ಅವರ ಸಾರಥ್ಯದಲ್ಲಿ ಸಂಗೀತ ರಸಸಂಜೆ ಜರುಗಿತು.-----------------eom/mys/shekar/