ಚಾಮರಾಜನಗರದಲ್ಲಿ ರೋಟರಿ ಕಣ್ಣಾಸ್ಪತ್ರೆಗೆ ಕಾಳನಹುಂಡಿ ಗುರುಸ್ವಾಮಿಯಿಂದ ₹1 ಕೋಟಿ ಮೌಲ್ಯದ ನಿವೇಶನ ದಾನ

KannadaprabhaNewsNetwork | Published : Nov 28, 2024 12:36 AM

ಸಾರಾಂಶ

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ರೋಟರಿ ಕಣ್ಣಾಸ್ಪತ್ರೆಯನ್ನು ತೆರೆಯಲು ಅನುಕೂಲವಾಗುವಂತೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರುವಾರಿ ಹಾಗೂ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಬಿ.ರಾಚಯ್ಯ ಜೋಡಿ ರಸ್ತೆಯ ಬದಿಯಲ್ಲಿರುವ ಸುಮಾರು ಒಂದು ಕೋಟಿ ರು. ಮೌಲ್ಯದ ನಿವೇಶವನ್ನು ದಾನವಾಗಿ ನೀಡಿದ್ದಾರೆ. ಚಾಮರಾಜನಗರದಲ್ಲಿ ಮಂಗಳವಾರದ ಸಭೆಯಲ್ಲಿ ಮಾತನಾಡಿದರು.

ರೋಟರಿ ಭವನದ ಸಭೆಯಲ್ಲಿ ಘೋಷಣೆ । ಗುರುಸ್ವಾಮಿಗೆ ಸುಗಮ ಗೆಳೆಯರ ಬಳಗ ಸನ್ಮಾನ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ರೋಟರಿ ಕಣ್ಣಾಸ್ಪತ್ರೆಯನ್ನು ತೆರೆಯಲು ಅನುಕೂಲವಾಗುವಂತೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರುವಾರಿ ಹಾಗೂ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಬಿ.ರಾಚಯ್ಯ ಜೋಡಿ ರಸ್ತೆಯ ಬದಿಯಲ್ಲಿರುವ ಸುಮಾರು ಒಂದು ಕೋಟಿ ರು. ಮೌಲ್ಯದ ನಿವೇಶವನ್ನು ದಾನವಾಗಿ ನೀಡಿದ್ದಾರೆ.

ಈ ಸಂಬಂಧ ರೋಟರಿ ಭವನದಲ್ಲಿ ನಡೆದ ಮಂಗಳವಾರದ ಸಭೆಯಲ್ಲಿ ಘೋಷಣೆ ಮಾಡಿದ ಅವರು, ರೋಟರಿ ಸಂಸ್ಥೆಯು ಪ್ರತಿ ತಿಂಗಳ ಮೊದಲ ಭಾನುವಾರ ಕೊಯಮತ್ತೂರು ಕಣ್ಣಾಸ್ಪತ್ರೆಯ ವೈದ್ಯರ ತಂಡವನ್ನು ಕರೆಸಿ ಉಚಿತವಾಗಿ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ಮಾಡಿಸುತ್ತಾ ಬಂದಿದೆ. ಬಹಳ ವರ್ಷಗಳಿಂದ ಈ ಪವಿತ್ರ ಕಾರ್ಯ ನಡೆಯುತ್ತಿದೆ. ಲಕ್ಷಾಂತರ ಮಂದಿ ಬಡವರು, ವೃದ್ದರು, ಮಕ್ಕಳು ದೃಷ್ಟಿ ದೋಷವನ್ನು ಪರಿಹರಿಸುವಕೊಳ್ಳುವ ಜತೆಗೆ ದೃಷ್ಟಿಯನ್ನು ಮತ್ತೆ ಪಡೆದುಕೊಂಡಿದ್ದಾರೆ. ಇಂತ ಸಾರ್ಥಕವಾದ ಸೇವೆ ಸಲ್ಲಿಸುತ್ತಿರುವ ರೋಟರಿಯ ಸಂಸ್ಥೆಯ ನೇತೃತ್ವದಲ್ಲಿ ಒಂದು ಸುಸಜ್ಜಿತ ಕಣ್ಣಾಸ್ಪತ್ರೆ ನಿರ್ಮಾಣವಾಗಬೇಕು ಎಂಬುದು ನನ್ನ ಕನಸು, ಇದಕ್ಕಾಗಿ ಸುಮಾರು ಒಂದು ಕೋಟಿ ರು. ಮೌಲ್ಯದ ೬೦*೪೦ ಅಡಿ ನಿವೇಶವನ್ನು ದಾನವಾಗಿ ನೀಡುದ್ದೇನೆ. ರೋಟರಿ ಜಿಲ್ಲಾ ಗೌರ್‍ನರ್ ಬಂದಾಗಲೇ ನಾನು ಅವರೊಂದಿಗೆ ಚರ್ಚೆ ಮಾಡಿ, ಈ ನಿರ್ಧಾರವನ್ನು ಪ್ರಕಟಿಸಿದ್ದೇನೆ ಎಂದು ಹೇಳಿದರು.

ರೋಟರಿ ಸೇವೆ ಹಾಗೂ ಬಸವ ಧರ್ಮದ ತತ್ವಗಳು ವಿವೇಕಾನಂದರ ಸಂದೇಶಗಳೂ ಒಂದಾಗಿದೆ. ರೋಟರಿ ಸಮಾಜ ಸೇವೆಯನ್ನು ವಿಶ್ವಕ್ಕೆ ಪ್ರಚುರಪಡಿಸಿದೆ. ಅದೇ ರೀತಿ ೧೨ನೇ ಶತಮಾನದಲ್ಲಿ ಬಸವಣ್ಣ ಹಾಗೂ ಶರಣರು ವಿಶ್ವ ಶೇಷ್ಠವಾದ ಬಸವ ಧರ್ಮವನ್ನು ಸ್ಥಾಪನೆ ಮಾಡಿ, ಜಗತ್ತಿಗೆ ಬೆಳಕು ಕೊಟ್ಟರು. ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಅಧ್ಯಾತ್ಮಿಕತೆಯನ್ನು ತೋರಿಸಿಕೊಟ್ಟರು. ರೋಟರಿ ಸಂಸ್ಥಾಪಕರಾದ ಪೌಲ್ ಹ್ಯಾರೀಸ್ ಹಾಗೂ ಸ್ವಾಮಿ ವಿವೇಕಾನಂದರ ಸೇವೆಗೆ ಸ್ವಾಮ್ಯತೆ ಇದೆ. ಹೀಗಾಗಿ ಈ ಇಬ್ಬರು ಮಹಾಪುರುಷರು ಪ್ರಪಂಚಕ್ಕೆ ಬೆಳಕು ನೀಡಲೆಂದು ಜನಿಸಿದರು. ಇವರ ಪ್ರೇರಣೆಯಿಂದ ನಾನು ಈ ಮಾದರಿಯಲ್ಲಿ ಅಳಿಲು ಸೇವೆ ಮಾಡಲು ಹೊರಟಿದ್ದೇನೆ. ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲ ಬಹು ಮುಖ್ಯವಾಗಿದೆ ಎಂದರು.

ಸನ್ಮಾನ:

ರೋಟರಿ ಸಂಸ್ಥೆಗೆ ನಿವೇಶನ ದಾನ ನೀಡಿದ ಕಾಳನಹುಂಡಿ ಗುರುಸ್ವಾಮಿ ಅವರನ್ನು ರೋಟರಿ ಸಂಸ್ಥೆ, ಸಂಗಮ ಗೆಳೆಯರ ಬಳಗ ಸೇರಿದಂತೆ ಅನೇಕರು ಶಾಲು ಹೊದಿಸಿ, ಮೈಸೂರು ಪೇಟಾ ತೊಡಿಸಿ, ಸನ್ಮಾನಿಸುವ ಜತೆಗೆ ಅವರ ಸೇವಾ ಕಾರ್ಯಗಳ ಗುಣಗಾನ ಮಾಡಿದರು.

ರೋಟರಿ ಅಧ್ಯಕ್ಷ ರಾಮಸಮುದ್ರ ನಾಗರಾಜು, ಕಾರ್ಯದರ್ಶಿ ಎಚ್.ಎಂ.ಗುರುಸ್ವಾಮಿ, ಹಿರಿಯ ರೋಟರಿನ್‌ಗಳಾದ ಜಿ.ಆರ್. ಆಶ್ವಥ್ ನಾರಾಯಣ್, ಶ್ರೀನಿವಾಸಶೆಟ್ಟಿ, ಡಾ.ನಾಗಾರ್ಜುನ್, ಆರ್.ಎಂ.ಸ್ವಾಮಿ, ಕೆ.ಎಂ. ಮಹದೇವಸ್ವಾಮಿ, ಆರ್.ಪುಟ್ಟಮಲ್ಲಪ್ಪ, ಅಂಕಶೆಟ್ಟಿ, ಶ್ರೀನಿವಾಸ್, ನಾರಾಯಣ್, ಸುರೇಶ್, ರತ್ನಮ್ಮ, ಕಮಲ್, ರಾಜುವರ್ಗಿಸ್, ಸಂಗಮ ಗೆಳೆಯರ ಬಳಗದ ವೇದಿಕೆಯ ಕಲ್ಮಳ್ಳಿ ನಟರಾಜು, ಹೆಗ್ಗವಾಡಿಪುರ ಎನ್‌ರಿಚ್ ಮಹದೇವಸ್ವಾಮಿ, ವೇದಮೂರ್ತಿ, ಸಿದ್ದಮಲ್ಲಪ್ಪ, ಮಹದೇವಸ್ವಾಮಿ, ಸಿದ್ದರಾಜು, ಟಿ. ಗುರು, ತೊರವಳ್ಳಿ ಕುಮಾರ್, ಮೋಹನ್, ಯೋಗಾನಂದ, ಪ್ರಕಾಶ್, ಮೂಡ್ನಾಕೂಡು ನಿಂಗಣ್ಣ, ಜೆ.ಎಲ್.ಶಿವಪ್ರಸಾದ್, ಮೊದಲಾದವರು ಇದ್ದರು.

Share this article