ಕನ್ನಡಪ್ರಭವಾರ್ತೆ ಪಾವಗಡ
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮಪಡಿಸಲು ತಾಲೂಕಿನಾದ್ಯಂತ ಇನ್ನೂ 10 ಕಲಿಕಾಸರೆ ಕೇಂದ್ರಗಳನ್ನು ತೆರೆಯಲಾಗುವುದೆಂದು ಶಾಸಕರಾದ ಎಚ್.ವಿ.ವೆಂಕಟೇಶ್ ಹೇಳಿದರು.ಶನಿವಾರ ತಾಲೂಕಿನ ಪಳವಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾಸರೆ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕಲಿಕಾಸರೆ ಕೇಂದ್ರವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಸಹಕಾರಿಯಾಗಿದ್ದು ಕೇಂದ್ರದ ಪ್ರಯೋಜನಪಡೆದುಕೊಳ್ಳಬೇಕು. ಆ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕೆಂದು ಕರೆ ನೀಡಿದರು. ತುಮಕೂರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಕಲಿಕಾಸರೆ ಕೇಂದ್ರಗಳಲ್ಲಿ ಅನುಭವಾತ್ಮಕ ಕಲಿಕೆಯ ಮೂಲಕ ಮಕ್ಕಳಿಗೆ ಶಿಕ್ಷಣದ ಜೊತೆ-ಜೊತೆಗೆ ಮಾಹಿತಿ ಮತ್ತು ತಂತ್ರಜ್ಞಾನದ ವೇಗದ ಬದಲಾವಣೆಗಳ ಬಗ್ಗೆ ತಿಳಿಸಲಾಗುವುದು. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುವ ಸಲುವಾಗಿ ಪಾಸಿಂಗ್ ಪ್ಯಾಕೇಜ್, ರಸಪ್ರಶ್ನೆ ಕೋಠಿಯನ್ನು ರೂಪಿಸಲಾಗಿದೆ. ಅಲ್ಲದೇ 6 ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ತಯಾರಿಸಿ ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಒದಗಿಸಲಾಗುವುದು ಎಂದು ತಿಳಿಸಿದರು.
ಇಲ್ಲಿನ ಶ್ರೀ ರಾಮಕೃಷ್ಣಾಶ್ರಮದ ಜಪಾನಂದಜೀ ಮಾತನಾಡಿ, ವಿದ್ಯಾರ್ಥಿಗಳು ಬದ್ಧತೆಯಿಂದ ಅಧ್ಯಯನಶೀಲರಾಗಬೇಕು. ಪಠ್ಯ ವಿಷಯಗಳನ್ನು ಪುನರ್-ಮನನ ಮಾಡುವುದರಿಂದ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಿದೆ ಎಂದು ಸಲಹೆ ನೀಡಿದರು.ಸಮರ್ಪಕ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಸ್. ರಾಜಣ್ಣ ಮಾತನಾಡಿ, ಟ್ರಸ್ಟ್ ವತಿಯಿಂದ ಕಲಿಕಾಸರೆ ಕೇಂದ್ರಗಳ ನಿರ್ವಹಣೆಯನ್ನು ಮಾಡಲಾಗುವುದು. ಕಲಿಕಾಸರೆ ಕೇಂದ್ರದಲ್ಲಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಲಾಗುವುದಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಮಧುಗಿರಿ ಡಯಟ್ ವತಿಯಿಂದ ಸಿದ್ಧಪಡಿಸಲಾದ ಕ್ಷಮತೆ, ಅನುಭವಾತ್ಮಕ ಕಲಿಕೆ,6-8ನೇ ತರಗತಿ ಬೋಧಿಸುತ್ತಿರುವ ವಿಷಯ ಸಂಪದೀಕರಣ ತರಬೇತಿ, ಸಾಹಿತ್ಯ,ತೀವ್ರ ಜ್ಞಾನ ಸಂವರ್ಧನಾ ಕಲಿಕೆ ಅನುಷ್ಟಾನದ ವರದಿ,ದಸರಾಸಿರಿ, ಜ್ಞಾನ ಭಾರತಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಪುರಸಭಾಧ್ಯಕ್ಷ ಪಿಎಚ್ ರಾಜೇಶ್, ಸಮರ್ಪಕ ಸೇವಾ ಟ್ರಸ್ಟ್ ರಾಜಣ್ಣ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಗಿರಿಜಾ, ತಾಪಂ ಇಒ ಜಾನಕಿರಾಮ್, ಬಿಇಒ ಇಂದ್ರಾಣಮ್ಮ, ಗ್ರಾಪಂ ಪಿಡಿಒ ಹನುಮರಾಜ್, ರಾಜ್ಯ ಸಂಪನ್ಮೂಲ ವ್ಯಕ್ತಿ ನವೀನ್ ಕಿಲಾರ್ಲಹಳ್ಳಿ, ಇಸಿಓ ವೇಣುಗೋಪಾಲ್ ರೆಡ್ಡಿ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಯತಿಕುಮಾರ್, ಶಾಲೆಯ ಪ್ರಾಂಶುಪಾಲರಾದ ಲತಾ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.