ಕಾಟನಾಯಕನಹಳ್ಳಿಯಲ್ಲಿ ಕಾಳುಹಬ್ಬ ಮಹೋತ್ಸವ

KannadaprabhaNewsNetwork |  
Published : Mar 04, 2024, 01:17 AM IST
ಚಿತ್ರ 1 | Kannada Prabha

ಸಾರಾಂಶ

ತಾಲೂಕಿನ ಕಾಟನಾಯಕನಹಳ್ಳಿ ಗ್ರಾಮದ ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ಪಾರ್ಥಲಿಂಗೇಶ್ವರ ಸ್ವಾಮಿ ಕಾಳಹಬ್ಬ ಮಹೋತ್ಸವ ಒಂದು ವಾರಗಳ ಕಾಲ ಅದ್ಧೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಟನಾಯಕನಹಳ್ಳಿ ಗ್ರಾಮದ ಕಾಡುಗೊಲ್ಲರ ಆರಾಧ್ಯ ದೈವ ಶ್ರೀಪಾರ್ಥಲಿಂಗೇಶ್ವರ ಸ್ವಾಮಿ ಕಾಳಹಬ್ಬ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.

ಒಂದು ವಾರದಿಂದ ನಡೆಯುತ್ತಿರುವ ಈ ಹಬ್ಬವು ಶ್ರೀರಾಮ ದೇವರಿಗೆ 101 ಎಡೆಗಳ ಪೂಜೆ ಜೊತೆಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಶ್ರೀರಾಮ ದೇವರು ಶ್ರೀ ಪಾರ್ಥಲಿಂಗಸ್ವಾಮಿ ಮತ್ತು ಹಳ್ಳಿಕರಿಯಮ್ಮ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನವನ್ನು ದೀಪಾಲಂಕಾರಗಳಿಂದ ಶೃಂಗರಿಸಲಾಗಿತ್ತು. ಸ್ವಾಮಿಗೆ ಪಟ್ಟಾಭಿಷೇಕ ಮಾಡಿ ದೇವಸ್ಥಾನದಲ್ಲಿ ಬೇಯಿಸಿದ ಕಾಳು ಭಕ್ತರಿಗೆ ವಿತರಿಸಲಾಯಿತು. ಒಂದೊಂದು ದಿನ ಒಂದೊಂದು ಕಾರ್ಯಕ್ರಮದಂತೆ ಅಣ್ಣ ತಮ್ಮಂದಿರಿಂದ ಅಕ್ಕಿ ಮೀಸಲು, ಭಕ್ತಾದಿಗಳಿಗೆ ಹರಿಸೇವೆ, ಹೂವು ಹರಾಜು ದೇವರ ಪಲ್ಲಕ್ಕಿ ಉತ್ಸವ, ಮೆರವಣಿಗೆ, ತಂಬಿಟ್ಟು ತಯಾರು ಮಾಡುವಿಕೆ ಮುಂತಾದ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.

ಅನಾದಿ ಕಾಲದಿಂದಲೂ ನಡೆದು ಬಂದ ಪದ್ಧತಿಯಂತೆ ಭಕ್ತರು ಬೆಳಿಗ್ಗೆ ಮುಡಿ ಸ್ನಾನ ಮುಗಿಸಿ ಊಟ ಸೇವಿಸದೆ ಬೀಸುವ ಕಲ್ಲುಗಳನ್ನು ತೊಳೆದು ಪೂಜೆ ಮಾಡಿ ದೇವಸ್ಥಾನದ ಉಗ್ರಾಣದಲ್ಲಿ ಬೀಸುವ ಕಲ್ಲಿನಿಂದ ಅಕ್ಕಿ ಬೀಸುತ್ತಾರೆ. ಅಕ್ಕಿ ಬೀಸುವಾಗ ಮಾತನಾಡಬಾರದು ಎಂದು ಬಾಯಿಗೆ ಬಟ್ಟೆ ಕಟ್ಟಿಕೊಂಡು ಅಕ್ಕಿ ಬೀಸುವ ವಿಶೇಷ ಪದ್ಧತಿ ಇಲ್ಲಿದೆ. ಬೀಸಲಾದ ಅಕ್ಕಿಯ ಗಂಟನ್ನು ಹೊತ್ತುಕೊಂಡು ದೇವರ ಪಲ್ಲಕ್ಕಿ ಜೊತೆಯಲ್ಲಿ ಬರಿಗಾಲಿನಲ್ಲಿ ಶಿರಾ ತಾಲೂಕಿನ ದಂಡಿಕೆರೆ ಗ್ರಾಮದ ವೀರ ದಂಡನ ದೇವರ ಸನ್ನಿಧಿಗೆ ತೆರಳುತ್ತಾರೆ. ದೇವಸ್ಥಾನದ ಮುಂಭಾಗದಲ್ಲಿರುವ ಸುವರ್ಣಮುಖಿ ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನದಲ್ಲಿ ಅಕ್ಕಿ ಹಿಟ್ಟಿನ ಪಡಿಯಾರತಿ ಮಾಡುತ್ತಾರೆ. ನಂತರ ವೀರದಂಡಣ್ಣ ದೇವರಿಗೆ ವಿಶೇಷ ಪೂಜೆ ಮುಗಿಸುತ್ತಾರೆ. ದೇವಸ್ಥಾನದಲ್ಲಿ ಹುಂಡೆ ಮಂಡೆ ಮುಗಿಸಿ ದೇವರಿಗೆ ಆರತಿ ಬೆಳಗಿ ಕಟ್ಟಿಕೊಂಡ ಬಂದ ಬುತ್ತಿಯನ್ನು ಸ್ವೀಕರಿಸಿದ ನಂತರ ಭಕ್ತರು ಕಾಟನಾಯಕನಹಳ್ಳಿ ಗ್ರಾಮಕ್ಕೆ ಹಿಂದಿರುಗುತ್ತಾರೆ. ಆನಂತರ ಗ್ರಾಮದಲ್ಲಿ ಕುದುರೆ ಹರಿಸೇವೆ ನಡೆಯುತ್ತದೆ. ಶ್ರೀ ಸ್ವಾಮಿಯ ಭಕ್ತರು, ಅಣ್ಣತಮ್ಮಂದಿರರು,ಗುಡಿ ಕಟ್ಟಿನ ಯಜಮಾನರು, ಪೂಜಾರರು ಸೇರಿ ಈ ಹಬ್ಬವನ್ನ ಒಂದು ವಾರಗಳ ಕಾಲ ಆಚರಣೆ ಮಾಡುತ್ತಾರೆ.

ಭಕ್ತ ಸುರೇಶ ಬೆಳೆಗೆರೆ ಮಾತನಾಡಿ, ಕಾಡುಗೊಲ್ಲ ಸಮುದಾಯವು ತಮ್ಮ ಬುಡಕಟ್ಟು ಆಚರಣೆಗೆ ಹೆಸರುವಾಸಿಯಾಗಿದೆ. ಹಿರಿಯರು ನಡೆಸಿಕೊಂಡು ಬಂದ ಪದ್ಧತಿಯನ್ನು ಇಂದಿಗೂ ತಪ್ಪದಂತೆ ಆಚರಣೆ ಮಾಡಲಾಗುತ್ತದೆ. ಹೊರಗಡೆಯಿಂದ ಬರುವ ಭಕ್ತರಿಗೆ ದೇವಸ್ಥಾನದ ಹಿಂಭಾಗದಲ್ಲಿ ಒಂದು ಸಮುದಾಯ ಭವನದ ಅವಶ್ಯಕತೆ ಇದ್ದು, ಸಚಿವರ ಅನುದಾನದಲ್ಲಿ ಒಂದು ಸಮುದಾಯ ಭವನ ನಿರ್ಮಾಣವಾಗಲಿ ಎಂಬುದು ನಮ್ಮ ಬೇಡಿಕೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ