ಕನ್ನಡಪ್ರಭ ವಾರ್ತೆ ಕಲಬುರಗಿ
ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ನಾಲ್ಕು ಕಚೇರಿಗಳು ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ಸ್ಥಳಾಂತರ ಮಾಡಲು ಸರ್ಕಾರ ಆದೇಶಿಸಿರುವುದರಿಂದ ಕಲ್ಯಾಣ ಕರ್ನಾಟಕಕ್ಕೆ ನಾಲ್ಕು ಕಚೇರಿಗಳಿಗೆ ಮಂಜೂರಾಗಿರುವ 110 ಹುದ್ದೆಗಳು ಭವಿಷ್ಯದಲ್ಲಿ ಸೃಷ್ಟಿಯಾಗದೇ ಶಾಶ್ವತವಾಗಿ ನಷ್ಟವಾಗುವ ಭೀತಿ, ಆತಂಕ ಎದುರಾಗಿದೆ.ಜಲ ಸಂಪನ್ಮೂಲ ಇಲಾಖೆ ಕಚೇರಿಗಳ ಸ್ಥಳಾಂತರದಿಂದ ಹುದ್ದೆಗಳ ನಷ್ಟದ ಜೊತೆಗೆ ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ಕಾರ್ಯಗಳು ಸ್ಥಗಿತವಾಗುವ ಭಯ ಎದುರಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ದಸ್ತಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆಗೆ ಒಳಪಡುವ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹಸನಾಪೂರ್ ಹೊಲಗಾಲುವೆ ವಿಭಾಗ-2, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜೆಬಿಸಿ ಉಪ ವಿಭಾಗ, ಭಾತಂಬ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಜೆಬಿಬಿ ಉಪ ವಿಭಾಗ, ಗೋಗಿ, ಕ್ಯಾಂಪ್ ಭೀಮರಾಯನ ಗುಡಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಜೆಬಿಸಿ ಉಪ ವಿಭಾಗ, ಭಾಲ್ಕಿ, ಹೀಗೆ ನಾಲ್ಕು ಕಚೇರಿಗಳು ಸೇರಿ ಎಲ್ಲ ಸಿಬ್ಬಂದಿ ಸಮೇತ ವಿಜಯಪುರ ಮತ್ತು ಬಾಗಲಕೋಟೆಗೆ ಸ್ಥಳಾಂತರ ಮಾಡಲು ಜಲ ಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದೆ. ಆದೇಶದನ್ವಯ ಈಗಾಗಲೇ ಹಸನಾಪೂರ್ ವಿಭಾಗ-2 ಹೊರತುಪಡಿಸಿ ಮೂರು ಉಪ ವಿಭಾಗಗಳ ಕಚೇರಿಗಳು ಮತ್ತು ಸಿಬ್ಬಂದಿ ಸ್ಥಳಾಂತರವಾಗಿದ್ದಾರೆ ಎಂದು ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.ಕಿತ್ತೂರು ಕರ್ನಾಟಕದ ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದು ಉಪಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿರುವುದು ಖೇದಕರವಾದ ಸಂಗತಿಯಾಗಿದೆ. ಈ ಕಚೇರಿಗಳಿಂದ ನಮ್ಮ ಭಾಗದಲ್ಲಿ ಆಗಬೇಕಾದ ಬಹಳಷ್ಟು ಕೆಲಸಗಳು ಇದ್ದರೂ ಸಹ ರಾಜಕೀಯ ಒತ್ತಡದಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಲತಾಯಿ ಧೋರಣೆ ಮಾಡಿ ಕಚೇರಿ ಸ್ಥಳಾಂತರ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಸರ್ಕಾರ ಒಂದು ಕಡೆ 371(ಜೆ) ಕಲಂ ನಿಯಮದ ಪ್ರಕಾರ ಕಲ್ಯಾಣಕಾರಿ ದೃಷ್ಟಿಕೋನದಿಂದ ಇಲ್ಲಿಯ ಕಚೇರಿಗಳನ್ನು ಉಳಿಸಲು ಮತ್ತು ಸಿಬ್ಬಂದಿ ರಕ್ಷಿಸಲು ವಿಶೇಷ ಸ್ಥಾನಮಾನದ ನಿಯಮ ಹೇಳಿದರೆ ಮತ್ತೊಂದು ಕಡೆ ಮೊದಲೇ ಕಡಿಮೆ ಹುದ್ದೆ ಇರುವಂತಹ ನಮ್ಮ ಪ್ರದೇಶದಲ್ಲಿನ ಕಚೇರಿಗಳು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಸ್ಥಳಾಂತರ ಮಾಡುತ್ತಿದ್ದಾರೆ. ಪ್ರಸ್ತುತ ನಾಲ್ಕು ಕಚೇರಿಗಳ ಸ್ಥಳಾಂತರದಿಂದ ನಮ್ಮ ಭಾಗದ ಆ ನಾಲ್ಕು ಕಚೇರಿಗಳಿಗೆ ಮಂಜೂರಾಗಿರುವ ಕಾರ್ಯಪಾಲಕ ಇಂಜಿನಿಯರ್ ಸೇರಿ ಇನ್ನಿತರ ಕೆಳದರ್ಜೆಯ ಇಂಜಿನಿಯರಗಳು ಮತ್ತು ಇಂಜಿನಿಯರೇತರ ಸಿಬ್ಬಂದಿ ಸೇರಿ ಮಂಜೂರಾಗಿರುವ 110 ಹುದ್ದೆಗಳು ಭವಿಷ್ಯದಲ್ಲಿ ಸೃಷ್ಟಿಯಾಗದೇ ಶಾಶ್ವತವಾಗಿ ನಷ್ಟವಾಗುತ್ತವೆ. ಇದಕ್ಕೆ ಸರಕಾರವೇ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಹಸನಾಪೂರ್ ವಿಭಾಗ-2ರಲ್ಲಿ ಸೇರಿದಂತೆ ಇನ್ನಿತರ ಮೂರು ಉಪ ವಿಭಾಗಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹೊಲಗಾಲುವೆ ಕಾಮಗಾರಿಗಳ ನಿರ್ಮಾಣ, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಜೌಗು, ಸವಳು, ಜವಳು ಬಾಧಿತ ಪ್ರದೇಶವಾಗುತ್ತಿದ್ದು, ಸದರಿ ಪ್ರದೇಶವನ್ನು ಭೂ ಸುಧಾರಣೆ ಕಾರ್ಯಗಳು ಕೈಗೊಳ್ಳಲು ಕಚೇರಿಗಳು ಮತ್ತು ಸಿಬ್ಬಂದಿ ಅತಿ ಅವಶ್ಯವಾಗಿದೆ. ಅದರಂತೆ 85 ಲಕ್ಷ ಸವಳು, ಜವಳು ಕಾಮಗಾರಿಗಳು ಚಾಲ್ತಿಯಲ್ಲಿರುತ್ತವೆ. ಅಷ್ಟೇ ಅಲ್ಲದೆ ಹಸನಾಪುರ ವಿಭಾಗೀಯ ಕಚೇರಿಯಿಂದ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ನೂರಾರು ಕೋಟಿಗಳ ಕಾಮಗಾರಿಗಳ ಕ್ರಿಯಾ ಯೋಜನೆ ಪ್ರಸ್ತಾವನೆ ಸಹ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಸಲ್ಲಿಸಿರುತ್ತಾರೆ. ಹೀಗಿರುವಾಗ ಕಚೇರಿಗಳ ಸ್ಥಳಾಂತರ ಮಾಡುವುದು ಯಾವ ನ್ಯಾಯ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಕಲ್ಯಾಣ ಕರ್ನಾಟಕದ ಸಚಿವರು, ಶಾಸಕರು, ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಳ್ಳಬೇಕು. ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಆಯಾ ಕಾಮಗಾರಿಗಳಿಗೆ ಹೊಸ ಕಚೇರಿಗಳ ನಿರ್ಮಾಣ ಮಾಡಿಕೊಳ್ಳುವುದರ ಬದಲು ಪದೇ ಪದೇ ಕಲ್ಯಾಣ ಕರ್ನಾಟಕದ ಕಚೇರಿಗಳನ್ನು ಸ್ಥಳಾಂತರ ಮಾಡುವ ನಿರ್ಧಾರ ಕೈಗೊಳ್ಳುತ್ತಿರುವುದು ಅಘಾತಕಾರಿ, ಇದನ್ನು ಸಮಿತಿ ಗಂಭೀರವಾಗಿ ಪರಿಗಣಿಸಿದ್ದು ನಮ್ಮ ಹಕ್ಕಿನ ಹುದ್ದೆಗಳಿಗಾಗಿ ಹೋರಾಟ ನಡೆಸುವುದಾಗಿ ಲಕ್ಷ್ಮಣ ದಸ್ತಿ ಹೇಳಿದ್ದಾರೆ.