ಗದಗ: ಶೈಕ್ಷಣಿಕ, ಸಾಂಸ್ಕೃತಿಕ ಲೋಕಕ್ಕೆ ದಾಸಶ್ರೇಷ್ಠ ಕನಕ ದಾಸರ ಕೊಡುಗೆ ಅಪಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಹಾತಲಗೇರಿ ನಾಕಾ ಬಳಿಯ ಭಕ್ತ ಕನಕದಾಸ ವೃತ್ತದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಕ್ತ ಕನದಾಸರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಕನಕದಾಸರ ಜಯಂತಿಯನ್ನು ಭಕ್ತಿಪೂರ್ವಕವಾಗಿ, ಅಭಿಮಾನಪೂರ್ವಕವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾಂಸ್ಕೃತಿಕ ಲೋಕಕ್ಕೆ ಅವರ ಕೊಡುಗೆ ದೊಡ್ಡ ಪ್ರಮಾಣದಲ್ಲಿ ಆಧ್ಯಾತ್ಮಿಕ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಕನಕದಾಸರು ಕವಿ, ದಾರ್ಶನಿಕ ಮತ್ತು ಸಂಗೀತಗಾರರಾಗಿ ಬೆಳೆದರು ಮತ್ತು ಕರ್ನಾಟಕದಲ್ಲಿ ಭಕ್ತಿ ಸಾಹಿತ್ಯದ ಯುಗವನ್ನು ಆರಂಭಿಸಿದರು. ಕನಕದಾಸರ ಕಾವ್ಯಗಳು ಕರ್ನಾಟಕ ಶೈಲಿಯಲ್ಲಿ ರಚನೆಯಾದ ಕಾವ್ಯಗಳಾಗಿದ್ದು, ಅವರು ತಮ್ಮ ಎಲ್ಲ ಹಾಡುಗಳಿಗೆ ಕಾಗಿನೆಲೆ ಆದಿಕೇಶವ ಎಂಬ ಕಾವ್ಯನಾಮವನ್ನು ಬಳಸಿದ್ದಾರೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಭಕ್ತ ಕನಕದಾಸರ ದಾಸ ಸಾಹಿತ್ಯದ ಪುಸ್ತಕಗಳನ್ನು ದೊರೆಯುವ ಹಾಗೆ ಮಾಡಿ ಕನದಾಸರ ಭಕ್ತಿ ಸಾಹಿತ್ಯವನ್ನು ಪರಿಚಯಿಸಬೇಕಿದೆ ಎಂದು ಹೇಳಿದರು.ಈ ವೇಳೆ ವಿಪ ಶಾಸಕ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಪ್ರಭು ಬುರಬುರೆ, ರವಿ ದಂಡಿನ, ಪ್ರಕಾಶ ಕರಿ ಸೇರಿ ಅನೇಕರು ಇದ್ದರು.