ಕನಕದಾಸರ ಜೀವನ ನಮ್ಮೆಲ್ಲರಿಗೂ ದಾರಿದೀಪ: ತಮ್ಮಯ್ಯ

KannadaprabhaNewsNetwork | Published : Jan 10, 2024 1:46 AM

ಸಾರಾಂಶ

ಚಿಕ್ಕಮಗಳೂರು ನಗರದ ಕೆಎಸ್ಆರ್ ಟಿಸಿ ಡಿಪೋದಲ್ಲಿ ಕೆಎಸ್ಆರ್ ಟಿಸಿ ಕುರುಬ ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ಕನಕ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಶಾಸಕ ತಮ್ಮಯ್ಯ ಸಮಾಜದಲ್ಲಿ ಅಸ್ಪೃಶ್ಯತೆ, ಶೋಷಣೆ ತೊಲಗಿಸುವ ನಿಟ್ಟಿನಲ್ಲಿ ಕೀರ್ತನೆ ಹಾಗೂ ತತ್ವಪದಗಳ ಮೂಲಕ ಮಾನವ ಕುಲಕ್ಕೆ ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಿದ ಮಹಾ ಪುರುಷ ಕನಕದಾಸರ ಜೀವನ ನಮ್ಮೆಲ್ಲರಿಗೂ ಪ್ರೇರಣೆ ಎಂದು ಹೇಳಿದರು.

- ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ಡಿಪೋನಲ್ಲಿ ಕನಕ ಜಯಂತೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಮಾಜದಲ್ಲಿ ಅಸ್ಪೃಶ್ಯತೆ, ಶೋಷಣೆ ತೊಲಗಿಸುವ ನಿಟ್ಟಿನಲ್ಲಿ ಕೀರ್ತನೆ ಹಾಗೂ ತತ್ವಪದಗಳ ಮೂಲಕ ಮಾನವ ಕುಲಕ್ಕೆ ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಿದ ಮಹಾ ಪುರುಷ ಕನಕದಾಸರ ಜೀವನ ನಮ್ಮೆಲ್ಲರಿಗೂ ಪ್ರೇರಣೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಕೆಎಸ್ಆರ್ ಟಿಸಿ ಡಿಪೋದಲ್ಲಿ ಕೆಎಸ್ಆರ್ ಟಿಸಿ ಕುರುಬ ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ಕನಕ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಜಾತೀಯತೆ ತೊಲಗಿಸುವ ನಿಟ್ಟಿನಲ್ಲಿ ಕನಕದಾಸರು ಹಲವಾರು ಕೀರ್ತನೆಗಳನ್ನು ರಚಿಸಿ ಜನರಲ್ಲಿರುವ ಅಸಮಾನತೆ ಎಂಬ ಕೆಟ್ಟ ಮನಸ್ಥಿತಿಯನ್ನು ಹೊರ ತೆಗೆಯುವಲ್ಲಿ ಶ್ರಮವಹಿಸಿದ ದಾರ್ಶನಿಕರು ಎಂದ ಅವರು, ಕನಕದಾಸರು, ಬಸವಣ್ಣ ಸೇರಿದಂತೆ ಅನೇಕ ಮಹನೀಯರ ಬದುಕಿನ ಉದ್ದೇಶವನ್ನು ಪರಿಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ಕನಕದಾಸರು ಎಂದಿಗೂ ಒಂದೇ ಜಾತಿಗೆ ಸೀಮಿತರಾದವರಲ್ಲ. ಪ್ರತಿಯೊಬ್ಬರ ಧ್ವನಿಯಾಗಿದ್ದರು. ಇಂದಿನ ಯುವಪೀಳಿಗೆ ಅವರ ವಿಚಾರಧಾರೆಗಳನ್ನು ಅರಿತು ಮುನ್ನೆಡೆಯಬೇಕಿದೆ. ಪ್ರಸ್ತುತ ಕನಕದಾಸರು ನಮ್ಮೊಂದಿಗಿಲ್ಲದಿದ್ದರೂ ಅವರು ನೀಡಿದ ಸಂದೇಶ ಚಾಚುತಪ್ಪದೇ ಪಾಲಿಸಿಕೊಂಡಲ್ಲಿ ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದರು.

ಸಮಾನತೆಗಾಗಿ ಹೋರಾಡಿ ಸಮುದಾಯವನ್ನು ಮೇಲೆತ್ತಿದ ಸಾಮಾಜಿಕ ಹೋರಾಟಗಾರರಾಗಿ ಸಮಾಜದಲ್ಲಿ ಶಾಶ್ವತ ಛಾಪು ಮೂಡಿಸಿದ ಮಹಾನೀಯರ ಜಯಂತಿಗಳನ್ನು ಆಚರಿಸುವ ಜೊತೆಗೆ ಅವರು ಹಾಕಿಕೊಟ್ಟ ಮಾರ್ಗ ದರ್ಶನದಲ್ಲಿ ಸಾಗಿದರೆ ಮಾತ್ರ ಅವರು ಸಾರಿದ ಸಂದೇಶ ಅರ್ಥ ಪೂರ್ಣವಾಗಲಿದೆ ಎಂದು ತಿಳಿಸಿದರು.

ಕನ್ನಡಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ, ತಮ್ಮ ಕೀರ್ತನೆಗಳ ಮೂಲಕ ಜನರ ಹೃದಯದಲ್ಲಿ ಆಧ್ಯಾತ್ಮಿಕ ಜಾಗೃತಿ ತುಂಬಿದ ಕನಕದಾಸರು ಭಕ್ತಿ, ನಂಬಿಕೆ ಮತ್ತು ಪ್ರೀತಿಯಿಂದ ಹಲವಾರು ಭಕ್ತಿಗೀತೆಗಳನ್ನು ರಚಿಸಿದ್ದರು. ಜೊತೆಗೆ ಅತ್ಯುತ್ತಮ ಕವಿ ಮತ್ತು ಸಂಗೀತಗಾರ ಮಾತ್ರವಲ್ಲದೆ ಅತ್ಯುತ್ತಮ ವಾಗ್ಮಿ ಮತ್ತು ವಿದ್ವಾಂಸರಾಗಿದ್ದರು ಎಂದು ಹೇಳಿದರು.

ಕೆಎಸ್ಆರ್ ಟಿಸಿ ಚಿಕ್ಕಮಗಳೂರು ವಿಭಾಗದ ಸಹಾಯಕ ಲೆಕ್ಕಾಧಿಕಾರಿ ಕೆ.ಎ.ಜಯಣ್ಣ ಮಾತನಾಡಿ ನಾಡಿನಲ್ಲಿ ವಿಶೇಷ ಕೀರ್ತನೆಗಳ ಮೂಲಕ ಕನಕದಾಸರು ಜಾತೀಯತೆ ವಿರುದ್ಧ ಹೋರಾಡಿದವರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಎಸ್ಆರ್ ಟಿಸಿ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್.ಬಸವರಾಜು, ಕುರುಬ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರತಿಯೊಬ್ಬರ ಸಹಕಾರದಿಂದ ಇಂದು ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕನಕರ ಹೆಸರಿನಲ್ಲಿ ಸಾಮಾಜಿಕ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ನಾರಾಯಣಪುರ, ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೆ.ಎ.ರಾಜಣ್ಣ, ವಕೀಲ ಅನಿಲ್‌ಕುಮಾರ್, ನಿವೃತ್ತ ಯೋಧ ಎಂ.ಎಂ.ಪ್ರಕಾಶ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಕೆಎಸ್ಆರ್ ಟಿಸಿ ಚಿಕ್ಕಮಗಳೂರು ವಿಭಾಗೀಯ ಸಂಚಾರ ಅಧಿಕಾರಿ ಎಚ್.ಕೆ.ಚನ್ನಬಸಪ್ಪ, ಸಹಾಯಕ ಕಾನೂನು ಅಧಿಕಾರಿ ಎಸ್.ಮಮತ, ಜಾಗೃತಾ ಧಿಕಾರಿ ಸಿ.ಎಸ್.ಸ್ಮಿತಾ, ಕಲ್ಯಾಣಾಧಿಕಾರಿ ಜಿ.ಭಾಗ್ಯ, ಸಹಾಯಕ ಅಭಿಯಂತರ ಶ್ರೀಧರ್‌ಸ್ವಾಮಿ, ಆಡಳಿತಾಧಿಕಾರಿ ಎಚ್.ಮಂಜಣ್ಣ, ಘಟಕ ವ್ಯವಸ್ಥಾಪಕರಾದ ಎಂ.ಬೇಬಿಬಾಯಿ, ಬಿ.ಆರ್.ಮಂಜುನಾಥ್ ಹಾಜರಿದ್ದರು. 9 ಕೆಸಿಕೆಎಂ 3

ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ಡಿಪೋನಲ್ಲಿ ಮಂಗಳವಾರ ನಡೆದ ಕನಕ ಜಯಂತ್ಯುತ್ಸವವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು.

Share this article