-ಕುರುಬರ ಸಂಘದಲ್ಲಿ ಕನಕ ಜಯಂತಿ
-ನೀತಿ ಸಂಹಿತೆ ನೆಪದಲ್ಲಿ ಜಿಲ್ಲಾಡಳಿತದಿಂದ ಕುರುಬ ಮುಖಂಡರ ನಿರ್ಲಕ್ಷ್ಯ: ಆರೋಪಕನ್ನಡಪ್ರಭ ವಾರ್ತೆ ರಾಮನಗರಚನ್ನಪಟ್ಟಣ ಉಪ ಚುನಾವಣೆಯ ನೀತಿ ಸಂಹಿತೆ ನೆಪ ಹೇಳಿ ಜಿಲ್ಲಾಡಳಿತ ದಾಸ ಶ್ರೇಷ್ಠ ಕನಕದಾಸರ ಜಯಂತಿಗೆ ಸಮುದಾಯದ ಮುಖಂಡರನ್ನೂ ಆಹ್ವಾನಿಸದೆ ಜಿಲ್ಲಾಡಳಿತ ಕಚೇರಿಗೆ ಸೀಮಿತಗೊಳಿಸುವ ಮೂಲಕ ಕುರುಬ ಸಮುದಾಯವನ್ನು ಅವಮಾನಿಸಿದೆ ಎಂದು ಕುರುಬರ ಸಂಘದ ತಾಲೂಕು ಅಧ್ಯಕ್ಷ ರೇಣುಕಪ್ಪ ಕಿಡಿಕಾರಿದರು.
ನಗರದ ಹೊರ ವಲಯದ ಕುಂಬಾಪುರದಲ್ಲಿರುವ ಕುರುಬರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಸರಳವಾಗಿ ಆಚರಿಸುತ್ತಿರುವ ಕನಕದಾಸರ ಜಯಂತಿಗೆ ಸಮುದಾಯದ ಮುಖಂಡರನ್ನು ಆಹ್ವಾನಿಸದಿರುವುದು ನಮಗೆ ನೋವುಂಟು ಮಾಡಿದೆ ಎಂದರು.ಪ್ರತಿ ವರ್ಷ ಕನಕದಾಸರ ಜಯಂತಿ ಆಚರಣೆ ಸಂಬಂಧ ಜಿಲ್ಲಾಡಳಿತ ಪೂರ್ವ ಭಾವಿ ಸಭೆಯನ್ನು ಆಯೋಜಿಸಿ, ಸಮುದಾಯದ ಮುಖಂಡರ ಅಭಿಪ್ರಾಯ ಸಂಗ್ರಹಿಸುತ್ತಿತ್ತು. ಆದರೆ, ಈ ಬಾರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಿಲ್ಲ. ಕಾರ್ಯಕ್ರಮವನ್ನು ಇಲಾಖಾ ವ್ಯಾಪ್ತಿಗೆ ಸೀಮಿತಗೊಳಿಸಿ ಆಚರಿಸಿದೆ. ಈ ಸರಳ ಕಾರ್ಯಕ್ರಮಕ್ಕೂ ಸಮಾಜದ ಮುಖಂಡರಿಗೆ ಆಹ್ವಾನ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಹ್ವಾನ ನೀಡದ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸತೀಶ್ ಅವರನ್ನು ಪ್ರಶ್ನಿಸಿದರೆ, ನಮಗೆ ಜಯಂತಿ ಆಚರಿಸಲು ಸರ್ಕಾರ ಕೇವಲ 3 ಸಾವಿರ ಮಾತ್ರ ನೀಡಿದೆ ಎಂಬ ಉಡಾಫೆ ಉತ್ತರ ನೀಡುತ್ತಾರೆ. ಕನಕ ಜಯಂತಿ ಆಚರಣೆ ಮಾಡಲು ಸಮುದಾಯದ ಮುಖಂಡರಿಗೆ ಹಣ ಕೇಳಿದ್ದರೆ ಕಾರ್ಯಕ್ರಮದ ಇಡೀ ವೆಚ್ಚವನ್ನು ನಾವೇ ಭರಿಸುತ್ತಿದ್ದೆವು. ಅಧಿಕಾರಿಗಳ ಧೋರಣೆ ಖಂಡಿಸಿ ಸಮುದಾಯದ ಮುಖಂಡರು ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದರು. ಆದರೆ, ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಪ್ರತಿಭಟನೆ ಕೈ ಬಿಟ್ಟಿರುವುದಾಗಿ ಹೇಳಿದರು.ಸರ್ಕಾರ ಕನಕ ಜಯಂತಿ ಸೇರಿದಂತೆ ಮಹಾತ್ಮರ ಹುಟ್ಟಿದ ದಿನದಂದು ರಜೆ ಘೋಷಣೆ ಮಾಡಿ ಅದ್ಧೂರಿಯಾಗಿ ಜಯಂತಿ ಆಚರಿಸುತ್ತದೆ. ಅಧಿಕಾರಿಗಳು ಇಂತಹ ಮಹತ್ವದ ಕಾರ್ಯಕ್ರಮವನ್ನು ಆಯಾಯ ಜಾತಿ ಹಾಗೂ ಸಮುದಾಯಕ್ಕೆ ಸೀಮಿತಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರ್ಶ ಪುರುಷರ ಜೀವನಗಾಥೆಯನ್ನು ಸರ್ಕಾರದ ಅಧಿಕಾರಿಗಳೇ ಸಂಕುಚಿತಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ದಾಸಶ್ರೇಷ್ಠ ಕನಕದಾಸರು ಒಂದು ವರ್ಗ ಅಥವಾ ಸಮುದಾಯವನ್ನು ಜಾಗೃತಗೊಳಿಸುವ ಕೆಲಸ ಮಾಡಲಿಲ್ಲ. ಜಾತಿ ಮತ ಧರ್ಮದ ವಿರುದ್ಧ ಹೋರಾಟ ಮಾಡುವ ಮೂಲಕ ಸಮಾಜದಲ್ಲಿ ಸಮಾನತೆ ಸಾರಿದ ಮಹಾಪುರುಷ. ಅಂತಹ ಮಹಾನ್ ಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮದೇ ಸಮಾಜದವರಾಗಿದ್ದಾರೆ. ಅಂತಹ ಸಮುದಾಯವನ್ನೇ ನಿರ್ಲಕ್ಷ್ಯ ಭಾವನೆಯಿಂದ ಕಾಣಲಾಗುತ್ತಿದೆ. ನಾವು ಕಾರ್ಯಕ್ರಮದಲ್ಲಿ ಹಿತ ವಚನ ಕೇಳಲು ಹೋಗುತ್ತಿದ್ದೆವು ವಿನಾಃ ಬೇರೆ ನಿರೀಕ್ಷೆಗಳು ಏನು ಇರಲಿಲ್ಲ ಎಂದು ರೇಣುಕಪ್ಪ ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅರಳಪ್ಪ, ಖಜಾಂಚಿ ಉಮೇಶ್, ಉಪಾಧ್ಯಕ್ಷ ಸಿದ್ದೇಗೌಡ, ಸಹ ಕಾರ್ಯದರ್ಶಿ ಬಸವರಾಜು, ಮುಖಂಡರಾದ ಪುಟ್ಟರಾಜು, ರಾಮಕೃಷ್ಣ ಯ್ಯ, ರುದ್ರಯ್ಯ, ಚನ್ನಮಾನಹಳ್ಳಿ ರಾಜು, ಮಂಜು, ಸಿ.ಕೆಂಪಣ್ಣ, ನಾಗ ಸಂದೀಪ್, ಹೊಸೂರುದೊಡ್ಡಿ ಪಾಪಣ್ಣ, ನಂಜುಂಡಪ್ಪ ಉಪಸ್ಥಿತರಿದ್ದರು.18ಕೆಆರ್ ಎಂಎನ್ 1.ಜೆಪಿಜಿರಾಮನಗರದ ಹೊರ ವಲಯದ ಕುಂಬಾಪುರದಲ್ಲಿರುವ ಕುರುಬರ ಸಂಘದ ಆವರಣದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು.