ಎಂ.ಪ್ರಹ್ಲಾದ್
ಕನ್ನಡಪ್ರಭ ವಾರ್ತೆ ಕನಕಗಿರಿಇಲ್ಲಿನ ಐತಿಹಾಸಿಕ ವೆಂಕಟಪತಿ ಬಾವಿಯ ಸುತ್ತಲೂ ಕಸ ಬೆಳೆದಿದ್ದು, ನೂರಾರು ವರ್ಷಗಳ ಇತಿಹಾಸವುಳ್ಳ ಕಟ್ಟಡವೀಗ ಸಂರಕ್ಷಣೆಗೆ ಎದುರು ನೋಡುತ್ತಿದೆ.
ವಿಜಯನಗರ ಕಾಲದ ಸಾಮಂತರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿರುವ ಈ ಬಾವಿ ಕಾಯಕಲ್ಪದಿಂದ ವಂಚಿತಗೊಂಡಿದೆ.ಇದರ ಸುತ್ತಲೂ ಬೆಳೆದಿರುವ ಕಸದ ಪರಿಣಾಮ ಕಟ್ಟಡ ಕುಸಿಯುವ ಹಂತಕ್ಕೆ ತಲುಪಿದೆ. ಸ್ಮಾರಕದ ಮೇಲ್ಚಾವಣಿಯಿಂದ ಮಳೆ ನೀರು ಸೋರುತ್ತಿದ್ದು, ಕಟ್ಟಡದೊಳಗೆ ನೀರು ಹೋಗುತ್ತಿರುವುದರಿಂದ ಈ ಭವ್ಯ ಸ್ಮಾರಕ ಅಕ್ಷರಶಃ ಅಳಿವಿನ ಅಂಚಿನಲ್ಲಿದೆ.
ಐತಿಹ್ಯ ಮರೆಮಾಚುವ ಯತ್ನ:ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಸ್ತಬ್ಧಚಿತ್ರ ಮೆರವಣಿಗೆ ಹಾಗೂ ಕಲಾಕೃತಿ ಪ್ರದರ್ಶನದಲ್ಲಿ ಈ ವೆಂಕಟಪತಿ ಬಾವಿಯ ರೂಪಕ ಗಮನಸೆಳೆದಿತ್ತು. ಈ ಬಾವಿಗೆ ಅನೇಕ ವರ್ಷಗಳಿಂದ ನಿಧಿಚೋರರು ಬೆನ್ನತ್ತಿದ್ದು, ಮುಖ್ಯವಾದ ಸ್ಮಾರಕಗಳನ್ನೆ ಗುರಿಯಾಗಿಸಿ ಧ್ವಂಸ ಮಾಡಲಾಗಿದೆ. ಈಗಾಗಲೇ ಶೇಷಮೂರ್ತಿ, ನಾಟ್ಯಗಾರ್ತಿಯ ಮುಖ ಹಾಗೂ ಬಾವಿಯ ನಟ್ಟನಡುವೆ ಇದ್ದ ನರಸಿಂಹ, ನಂದಿ ವಿಗ್ರಹವೂ ಹಾಳಾಗಿವೆ. ಈ ಸ್ಮಾರಕದಲ್ಲಿದ್ದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರ ಮೂರ್ತಿಗಳು ಮಾಯವಾಗಿವೆ. ವಿಜಯನಗರದ ಇತಿಹಾಸ ಖ್ಯಾತಿ ಪಡೆದ ಸ್ಮಾರಕದ ಐತಿಹ್ಯ ಮರೆಮಾಚುವ ಯತ್ನ ದುಷ್ಕರ್ಮಿಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ.
ಇಚ್ಛಾಶಕ್ತಿ ಕೊರತೆ:ಆನೆಗೊಂದಿಯಂತೆ ಮಾನ್ಯತೆ ಪಡೆದಿದ್ದ ಕನಕಗಿರಿಯನ್ನೂ ಅರಸರು ವಿಜಯನಗರ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರೆನ್ನುವ ಮಾತಿದೆ. ಇನ್ನು ಎರಡನೇ ತಿರುಪತಿ ಎನ್ನುವ ಪ್ರತೀತಿಯೂ ಇದೆ. ಕಲೆ, ಸಾಹಿತ್ಯ, ಸಂಗೀತ ಹಾಗೂ ಶಿಲ್ಪಕಲೆಯ ಶ್ರೀಮಂತಿಕೆ ಹೊಂದಿದ ಕನಕಗಿರಿಯಲ್ಲಿ ಅನೇಕ ದೇಗುಲ, ಬಾವಿಗಳನ್ನು ನಿರ್ಮಿಸಲಾಗಿದ್ದು, ಇವು ಕಾಲದ ಹೊಡೆತಕ್ಕೆ ನಶಿಸಿ ಹೋಗಿವೆ. ಅಳಿದುಳಿದ ಸ್ಮಾರಕ, ಮಂದಿರಗಳನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ.
ಸಿಗುವುದೇ ಶಾಶ್ವತ ಪರಿಹಾರ?:ಮೂರ‍್ನಾಲ್ಕು ತಿಂಗಳಿಗೊಮ್ಮೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸ್ಮಾರಕ ಶುಚಿಗೊಳಿಸುವ ಕಾರ್ಯ ನಡೆಯುತ್ತಿದೆಯಾದರೂ ಬಾವಿಯ ಸಂರಕ್ಷಣೆಗೆ ಶಾಶ್ವತ ಪರಿಹಾರ ಸಿಗದಾಗಿದ್ದು, ಇಲ್ಲಿಯ ಜನರ ಬೇಸರಕ್ಕೆ ಕಾರಣವಾಗಿದೆ. ಜಿಲ್ಲೆಯ ಐತಿಹ್ಯ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸ್ಥಳಕ್ಕೆ ಪ್ರವಾಸಿಗರು ದಂಡು ಹರಿದು ಬರುತ್ತಿದೆ. ವಿಶಿಷ್ಟ, ವೈವಿಧ್ಯಮಯ ಕಲಾಕೃತಿ ಹೊಂದಿದ ಬಾವಿಯ ಉಳಿವಿಗೆ ಜಿಲ್ಲಾಡಳಿತ ಮಹತ್ವದ ಹೆಜ್ಜೆ ಇಡಬೇಕಿದೆ.
ಕೋಟ್
ಕನಕಗಿರಿ ವಿಜಯನಗರ ಕಾಲದ ಶ್ರೀಮಂತ ನಾಡು ಎಂದು ಪ್ರಸಿದ್ಧಿಯಾಗಿತ್ತು. ನಿಧಿಗಳ್ಳರ ಹಾವಳಿಗೆ ಅನೇಕ ಸ್ಮಾರಕ, ಮಂದಿರಗಳು ಧ್ವಂಸವಾಗಿವೆ. ವೆಂಕಟಪತಿ ಬಾವಿ ಪ್ರವಾಸಿಗರ ಮನ ಸೆಳೆದಿದೆ. ಇಂತಹ ಅಮೂಲ್ಯ, ವೈವಿಧ್ಯಮ ಬಾವಿಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದರ ಶಾಶ್ವತ ಅಭಿವೃದ್ಧಿಗೆ ಮುಂದಾಗಬೇಕು ಎಂದು ಇತಿಹಾಸಕಾರ ಅಲ್ಲಾಗಿರಿರಾಜ ಒತ್ತಾಯಿಸಿದ್ದಾರೆ.ಕನಕಗಿರಿ ವೆಂಕಟಪತಿ ಬಾವಿ ಸ್ಮಾರಕ ವಿಶಿಷ್ಟವಾಗಿದೆ. ಇದರ ಸಂರಕ್ಷಣೆಗೆ ಇಲಾಖೆ ಬದ್ಧವಾಗಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ವಾರ ಕನಕಗಿರಿಗೆ ಭೇಟಿ ನೀಡಿ, ಪರಿಶೀಲಿಸಿ, ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಪ್ರಾಚ್ಯ ವಸ್ತು ಇಲಾಖೆ ಉಪನಿರ್ದೇಶಕ ಡಾ. ಶೇಜೇಶ್ವರ ತಿಳಿಸಿದ್ದಾರೆ.