ಕನಕಪುರ: ಕ್ಷೇತ್ರ ಪುನರ್ ವಿಂಗಡನೆ ನಂತರ ನೂತನ ತಾಲೂಕಿನ ಶಾಸಕನಾಗಿ ಆಯ್ಕೆಯಾಗಿ ರಾಜ್ಯದ ಯಾವುದೇ ಮೂಲೆಯ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ನಡೆಯದ ಅಭಿವೃದ್ಧಿ ಮಾಡಿರುವುದು ಕ್ಷೇತ್ರದ ಜನರ ಮುಂದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಪತ್ರಕರ್ತರ ಸಂಘಕ್ಕೆ ನಿವೇಶನ ಹಾಗೂ ಕಟ್ಟಡ ನಿರ್ಮಿಸಿ ಕೊಡುವಂತೆ ಸದಸ್ಯರು ಮನವಿ ಸಲ್ಲಿಸಿದ್ದಾರೆ. ರಾಮನಗರ ಕ್ಷೇತ್ರವನ್ನು ಪ್ರತಿನಿಧಿಸಿ ಹುನ್ನತ ಹುದ್ದೆಗಳನ್ನು ಅನುಭವಿಸಿದ ಮಾಜಿ ಪ್ರಧಾನಿ ಹೆಚ್‌ಡಿಡಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದುವರೆಗೂ ನಿವೇಶನ ನೀಡದಿರುವುದು ಪತ್ರಕರ್ತರ ದುರ್ದೈವ ಎಂದು ಹೇಳಿದರು.ಇಡೀ ರಾಜ್ಯದಲ್ಲಿ ಜಿಲ್ಲಾ ಮಟ್ಟದಲ್ಲಿಲ್ಲದ ಅಂಬೇಡ್ಕರ್ ಭವನ, ನಗರಸಭಾ ಕಚೇರಿ, ತಾಲೂಕು ಕಚೇರಿ, ನೂತನವಾಗಿ ತಲೆ ಎತ್ತುತ್ತಿರುವ ನ್ಯಾಯಾಲಯಗಳ ಸಂಕೀರ್ಣ, ತಾಲೂಕು ಕೇಂದ್ರದಲ್ಲಿ ಕನಕ ಉದ್ಯಾನವನ ಹೀಗೆ ಹತ್ತು ಹಲವು ಅಭಿವೃದ್ಧಿ ಕೆಲಸಗಳು, ತಾಲೂಕಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಾ ಬರುತ್ತಿದ್ದು, ತಾಲೂಕನ್ನು ಮಾದರಿ ಕೇಂದ್ರವನ್ನಾಗಿ ಮಾಡಿರುವುದು ತೃಪ್ತಿ ತಂದಿದೆ ಎಂದು ತಿಳಿಸಿದರು.
ಜಿಲ್ಲೆಯ ಜನರಿಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೂ ಇರುವ ಅವಿನಾಭಾವ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಿದ್ದನ್ನು ಸಹಿಸದ ಪ್ರತಿಪಕ್ಷದ ನಾಯಕರು ಈ ಕುರಿತು ಇಲ್ಲ - ಸಲ್ಲದ ಅಪಪ್ರಚಾರ ಮಾಡುತ್ತಾ ಜನರ ಮನಸ್ಸಿನಲ್ಲಿ ಹುಳಿ ಹಿಂಡಲು ಹೊರಟಿರುವುದು ನೋವಿನ ಸಂಗತಿ ಎಂದು ಹೇಳಿದರು.ಈಗಿನ ಬೆಂಗಳೂರು ಗ್ರಾಮಾಂತರ ಲೋಕಸಭೆ ಸ್ಥಾನ ಮೊದಲು ಕನಕಪುರ ಲೋಕಸಭೆ ಆಗಿತ್ತು. ಇಲ್ಲಿಂದಲೇ ಜಾಫರ್ ಷರೀಫ್, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಆರಿಸಿ ಹೋಗಿದ್ದರು. ಕನಕಪುರ ಲೋಕಸಭಾ ಹೆಸರನ್ನು ಬದಲಿಸಿದಾಗ ಚಕಾರ ಎತ್ತದ ಮಹಾನ್ ನಾಯಕರು ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರಿಗೆ ಟೀಕೆ ಮಾಡುತ್ತಿರುವುದು ಅವರ ಎಡಬಿಡಂಗಿ ತನವನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೇ ಬೆಂಗಳೂರಿನ ಕಾರ್ಯಕ್ರಮ ಒಂದರಲ್ಲಿ ಬೆಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾಲ ಬದಲಾದಂತೆ ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಜೀವನ ಶೈಲಿಯ ಬದಲಾವಣೆಗಾಗಿ ಮುಂದಾಲೋಚನೆಯಿಂದ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿರುವುದರಿಂದ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುವುದು ಅನಿವಾರ್ಯವಾಗಿದ್ದು, ಇದಕ್ಕೆ ಏನೇ ಅಡ್ಡಿ ಆತಂಕ ಬಂದರೂ ಇದನ್ನು ಕಾರ್ಯರೂಪಕ್ಕೆ ತರುವುದು ಶತಸಿದ್ಧ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಿವಾಲ್ದಾಪ್ಪನ ಬೆಟ್ಟದ ಅನ್ನದಾನೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಮಾಜಿ ಅಧ್ಯಕ್ಷ ನಾರಾಯಣಗೌಡ, ಆರ್.ಇ.ಎಸ್.ಸಂಸ್ಥೆ ಅಧ್ಯಕ್ಷ ಹೆಚ್.ಕೆ ಶ್ರೀಕಂಠು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಕೆ.ಎನ್.ದಿಲೀಪ್, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗನಂದ, ತಾಲೂಕು ಪ್ರಗತಿಪರ ಒಕ್ಕೂಟಗಳ ಅಧ್ಯಕ್ಷ ಕುಮಾರ ಸ್ವಾಮಿ, ಭಾಸ್ಕರ್, ಪ್ರಶಾಂತ್, ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತಿಕೆರೆ ಜಯರಾಮ್, ಜಿಲ್ಲಾ ಅಧ್ಯಕ್ಷ ಸೂರ್ಯಪ್ರಕಾಶ್, ಬಿ.ಟಿ.ಉಮೇಶ್, ಶಿವರಾಜು, ಮಧು, ಸುರೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಸಿ.ವೆಂಕಟೇಶ್ ಮತ್ತಿತರರಿದ್ದರು.
ಕೆ ಕೆ ಪಿ ಸುದ್ದಿ 02:ಕನಕಪುರದಲ್ಲಿ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ತಾಲೂಕಿನ ಹಿರಿಯ ಪತ್ರಕರ್ತರಾದ ಬಾಬುರಾವ್, ಕಾ.ಪ್ರಕಾಶ್, ಕೃಷ್ಣಪ್ಪ ಶಿವಲಿಂಗಯ್ಯ ಹಾಗೂ ಪತ್ರಿಕಾ ವಿತರಕ ನರಸಿಂಹ ಮೂರ್ತಿ ಹಾಗೂ ಸಮಾಜ ಸೇವಕ ಮರಸಪ್ಪ ರವಿ ಅವರನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವು ಸನ್ಮಾನಿಸಿದರು.
ಕೆಕೆಪಿ ಸುದ್ದಿ 01:ಕನಕಪುರದದಲ್ಲಿ ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕೆ ಕೆ ಪಿ ಸುದ್ದಿ 1(2) :ಕನಕಪುರದಲ್ಲಿ ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು. ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಸಚಿವ ಎನ್.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.