ಕನ್ನಡಪ್ರಭ ವಾರ್ತೆ ಗುರುಮಠಕಲ್
ನಾಗರಪಂಚಮಿ ಹಿನ್ನೆಲೆ ತಾಲೂಕಿನ ಕಂದಕೂರ ಗ್ರಾಮದ ಕೊಂಡಮ್ಮಾಯಿ ಬೆಟ್ಟದಲ್ಲಿ ಅಸಂಖ್ಯಾತ ಭಕ್ತರ ಮಧ್ಯೆ ಅದ್ಧೂರಿಯಾಗಿ ಜಾತ್ರೆ ನೆರವೇರಿತು.ಗ್ರಾಮದ ಸುತ್ತಲೂ ಹಚ್ಚ ಹಸುರಿನ ಬೆಟ್ಟ-ಗುಡ್ಡದ ಮಧ್ಯೆ ಇರುವ ಕೊಂಡಮಾಯಿ ದೇವಸ್ಥಾನದಲ್ಲಿ ಅಪರೂಪದ ಚೇಳಿನ ಮೂರ್ತಿಗೆ ಪೂಜೆ ಸಲ್ಲುತ್ತದೆ. ಈ ದೇವಿಯ ಕೃಪೆಯಿಂದ ಬೆಟ್ಟದ ತುಂಬೆಲ್ಲಾ ಚೇಳುಗಳು ಕಾಣಿಸುತ್ತವೆ.
ತಾಲೂಕಿನ ಕಂದಕೂರು ಗ್ರಾಮದಲ್ಲಿರುವ ಕೊಂಡಮೇಶ್ವರಿ ದೇವಸ್ಥಾನದ ಸುತ್ತಮುತ್ತಲಿನ ಬೆಟ್ಟದ ಪ್ರದೇಶದಲ್ಲಿ ಶ್ರಾವಣ ಮಾಸದ ಪಂಚಮಿ ದಿನ ಮಕ್ಕಳು ಹಾಗೂ ಭಕ್ತರು ಚೇಳುಗಳನ್ನು ಕೈಯಲ್ಲಿ ಹಿಡಿದು ಆಟವಾಡುತ್ತಾರೆ. ಅವುಗಳನ್ನು ಹಿಡಿದು ಜನರು ಸಂಭ್ರಮ ಪಡುತ್ತಾರೆ. ವಿಶೇಷವೆಂದರೆ ಬೇರೆ ದಿನಗಳಲ್ಲಿ ಇಲ್ಲಿ ಚೇಳುಗಳು ಇರುವುದಿಲ್ಲವಂತೆ. ಗುಡಿಯಲ್ಲಿ ಚೇಳಿನ ಮೂರ್ತಿಗೆ ಪೂಜೆ ಸಲ್ಲಿಸುವುದರಿಂದ ಯಾರಿಗೂ ಕುಟುಕುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.-ವಿಶೇಷ ಪೂಜೆ: ಶ್ರಾವಣ ಮಾಸದ ಪಂಚಮಿಯೆಂದು ನಾಗರ ಮೂರ್ತಿಗೆ ಹಾಲು ಎರೆಯುವುದು ಸಾಮಾನ್ಯ. ಆದರೆ ಕಂದಕೂರು ಗ್ರಾಮಕ್ಕೆ ಹೊಂದಿಕೊಂಡಿರುವ ಕೊಂಡಮ್ಮ ಬೆಟ್ಟದ ಕೊಂಡಮೇಶ್ವರಿ ದೇವಸ್ಥಾನದಲ್ಲಿ ಚೇಳಿನ ಜೊತೆ ಮಕ್ಕಳು, ಭಕ್ತರು ಆಟವಾಡುವ ಮೂಲಕ ಚೇಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
-ಚೇಳು ಹಿಡಿದು ಸಂಭ್ರಮ :ಜಾತ್ರೆಗೆ ಬಂದಿದ್ದ ಭಕ್ತರು ಬೆಟ್ಟದಲ್ಲಿ ಚೇಳುಗಳ ಹುಡುಕಾಟದಲ್ಲಿ ತೊಡಗಿದ್ದರು. ಕಲ್ಲುಗಳ ಸಂದಿನಲ್ಲಿ ಅಡಗಿಕೊಂಡಿದ್ದ ಚೇಳು ಹಿಡಿದು ಸಂಭ್ರಮಿಸಿದರು. ಮಹಿಳೆಯರು, ಮಕ್ಕಳು ತಮ್ಮ ಕೈಯಲ್ಲಿಡಿದು ಆಶ್ಚರ್ಯ ಚಕಿತಗೊಂಡರು. ಈ ದಿನ ಚೇಳುಗಳನ್ನು ಹಿಡಿದುಕೊಂಡರೇ ದೇವರ ಶಕ್ತಿಯಿಂದ ಯಾವುದೇ ತೊಂದರೆಯಾಗುವದಿಲ್ಲ ಎಂಬುದು ಭಕ್ತರ ನಂಬಿಕೆ.
ಸುಮಾರು ಐದಾರು ದಶಕಗಳಿಂದ ಕಂದಕೂರ ಕೊಂಡಮಾಯಿ ಜಾತ್ರೆ ಜರುಗುತ್ತಿದೆ. ಗ್ರಾಮಕ್ಕೆ ಮಾತ್ರ ಸೀಮಿತವಾಗಿದ್ದ ಈ ಜಾತ್ರೆಗೆ ಏಳೆಂಟು ವರ್ಷಗಳಿಂದ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ.ಕೊಂಡಮಾಯಿ ದೇವಿ ಕೃಪೆ:
ಚೇಳು ಕಚ್ಚಿದರೂ ವಿಷ ಏರುವುದಿಲ್ಲ. ಒಂದು ವೇಳೆ ವಿಷ ಏರಿದರೆ ಕೊಂಡಮಾಯಿ ದೇವಿಯ ಭಂಡಾರ ಹಚ್ಚಿಕೊಂಡರೆ ಕ್ಷಣ ಮಾತ್ರದಲ್ಲಿ ವಾಸಿಯಾಗುತ್ತದೆಯಂತೆ. ಜನರು ಇದು ಕೊಂಡಮಾಯಿ ದೇವಿಯ ಪವಾಡ ಎಂದು ನಂಬಿದ್ದಾರೆ. ಬೇರೆ ಸಮಯದಲ್ಲಿ ಗ್ರಾಮಸ್ಥರಿಗೆ ಕಚ್ಚಬಾರದು ಎನ್ನುವ ದೃಷ್ಟಿಯಿಂದ ಪ್ರತಿ ವರ್ಷ ಚೇಳುಗಳನ್ನು ಆರಾಧಿಸಲಾಗುತ್ತದೆ. ನಾಗರ ಪಂಚಮಿ ದಿನ ಇಲ್ಲಿ ಚೇಳುಗಳನ್ನೆ ದೇವರೆಂದು ತಿಳಿದು ಪೂಜಿಸಿ ಮೈಮೇಲೆ ಹಾಕಿಕೊಂಡು ಸಂಭ್ರಮ ಪಡುತ್ತೇವೆ. ರಾಜ್ಯದಲ್ಲಿ ಎಲ್ಲಿಯೂ ಇಲ್ಲದಂತಹ ಒಂದು ವಿಶೇಷ ಆಚರಣೆ ನಮ್ಮ ಗ್ರಾಮದಲ್ಲಿ ನಡೆಯುವುದು ವಿಶೇಷ ಎನ್ನುತ್ತಾರೆ ಭಕ್ತರು.