ಕನ್ನಡಪ್ರಭ ವಾರ್ತೆ ಪುತ್ತೂರು
ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಸುಮಾರು ೯೧ ಕಿ.ಮೀ ಉದ್ದದ ಕಾಣಿಯೂರು - ಕಾಞಂಗಾಡು ನಡುವಣ ಪ್ರಸ್ತಾವಿತ ಹೊಸ ರೈಲು ಮಾರ್ಗ ನಿರ್ಮಾಣ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಈ ಹಿಂದೆಯೇ ಸರ್ಕಾರಕ್ಕೆ ನೀಡಿದ ೧೦೦ ಕಿ.ಮೀ ಉದ್ದದ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಮುಖ ನಗರದಲ್ಲಿ ಹಾದು ಹೋಗುವ ಪುತ್ತೂರು - ಕಾಂಞಂಗಾಡ್ ರೈಲ್ವೇ ಮಾರ್ಗದ ಪ್ರಸ್ತಾಪ ಇದೀಗ ಮರುಜೀವ ಪಡೆದುಕೊಂಡಿದೆ.ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಿಂದ ಪುತ್ತೂರು-ಕಾಂಞಂಗಾಡು ರೈಲು ಮಾರ್ಗದ ಸರ್ವೆ ಮಾಡಿ ತಯಾರಿಸಲಾದ ಮೂರು ನೀಲನಕಾಶೆ ಸೇರಿದಂತೆ ಒಟ್ಟು ನಾಲ್ಕು ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ರಚಿಸಿದ ನೀಲನಕಾಶೆಯ ಕುರಿತು ಪುತ್ತೂರು ಸಿಟಿಜನ್ಸ್ ಫಾರಮ್ ಮೂಲಕ ಈಗಾಗಲೇ ಶಾಸಕರಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮನವಿಯಲ್ಲಿ ಕಾಣಿಯೂರು- ಕಾಂಞಂಗಾಡ್ ರೈಲು ಮಾರ್ಗ ೯೧ ಕಿ.ಮೀ ಆಗಿದೆ. ಇದರಲ್ಲಿ ಕಾಞಂಗಾಡ್ ನಿಂದ ಕೊಟ್ಟೋಡಿ, ಬಳಾಂತೋಡು, ಪಾಣತ್ತೂರು, ಕಲ್ಲಪಳ್ಳಿ, ಆಲೆಟ್ಟಿ, ಬೆಳ್ಳಾರೆ ಸುಳ್ಯದ ಮೂಲಕ ಕಾಣಿಯೂರಿನಲ್ಲಿ ಮಂಗಳೂರು- ಬೆಂಗಳೂರು ಹಳಿಯನ್ನು ಸಾಧಿಸಿ ರೈಲ್ವೆ ಸಂಪರ್ಕ ಸಾಧಿಸಲು ಯೋಜನೆ ರೂಪಿಸಲಾಗಿದೆ. ಆದರೆ ಇದು ಪುತ್ತೂರು ವಿಧಾನಸಭಾ ಕ್ಷೇತ್ರವನ್ನು ಕಡಿಮೆ ಸಂಪರ್ಕಿಸುತ್ತದೆ. ಜೊತೆಗೆ ರೈಲು ಮಾರ್ಗ ನಿರ್ಮಾಣದ ಸಂದರ್ಭ ಹಲವು ಪರಿಸರಸೂಕ್ಷ್ಮ ಪ್ರದೇಶಗಳಿಗೆ ಹಾನಿಯಾಗಲಿದೆ.
ಪುತ್ತೂರು - ಕಾಂಞಂಗಾಡ್ ರೈಲು ಮಾರ್ಗ ಪುತ್ತೂರಿನಿಂದ ಪೂರ್ವಕ್ಕೆ ಬೆಂಗಳೂರಿಗೆ ಮತ್ತು ಪಶ್ಚಿಮಕ್ಕೆ ಮಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ. ಪರಿಸರ, ಸಮಾಜದ ದೃಷ್ಟಿಯಿಂದ ಈ ಮಾರ್ಗವು ಆರ್ಥಿಕವಾಗಿದೆ ಮತ್ತು ಇದು ವ್ಯಾಪಾರ ಮಾರ್ಗವಾಗಿ ಬದಲಾಗುತ್ತದೆ. ಈ ಮಾರ್ಗದ ಉದ್ದ ೧೦೩ ಕಿ.ಮೀ., ಗರಿಷ್ಠ ಜನಸಂಖ್ಯೆ, ಪರಿಸರದ ಮೇಲೆ ಕಡಿಮೆ ಪರಿಣಾಮ, ನಿರ್ಮಾಣ ಸಾಮಗ್ರಿಗಳ ಸುಲಭ ಲಭ್ಯತೆ, ಕನಿಷ್ಠ ಏರಿಳಿತಗಳು, ವೆಚ್ಚ-ಪರಿಣಾಮಕಾರಿ ಆಗಿದೆ ಎಂದು ತಿಳಿಸಲಾಗಿದೆ.ಕೇರಳದಿಂದ ಕಾಸರಗೋಡು, ಚಳ್ಳಿಕೆರೆ, ಕೊಟ್ಟಿಕೋಲ್, ಬನ್ನಾರಕ್ಯಾ, ಬಾಲಕ್ಕ ಅಡ್ಕತೊಡಿಯಾಗಿ ಕರ್ನಾಟಕ ಗಡಿಗೆ ಬರುವಾಗ ಮುಳ್ಳೇರಿಯ, ನಾಟೆಕಲ್, ಏತಡ್ಕ, ಪೆರ್ಲ, ಅಡ್ಯನಡ್ಕ, ವಿಟ್ಲ, ಕಬಕದ ಮೂಲಕ ಪುತ್ತೂರಿಗೆ ಸಂಪರ್ಕ ಆಗುತ್ತದೆ. ಜೊತೆಗೆ ಕಾಣಿಯೂರು - ಕಾಂಞಂಗಾಡು ರೈಲು ಮಾರ್ಗ ಮಾಡಲು ದೊಡ್ಡ ಮೀಸಲು ಕಾಡುಗಳು, ನದಿಗಳು ಮತ್ತು ಹೊಳೆಗಳ ಮೂಲ ಬಿಂದುಗಳು, ಕಡಿದಾದ ಇಳಿಜಾರಿನ ಬೆಟ್ಟಗಳು, ಬಂಡೆಗಳ ಹೊರಹರಿವುಗಳು, ಅಲೆಗಳಿರುವ ಭೂಪ್ರದೇಶ, ನಿರ್ಮಾಣ ವೆಚ್ಚ ಹೆಚ್ಚು ಎಂದು ಪುತ್ತೂರು ಸಿಟಿಜನ್ಸ್ ಫಾರಮ್‌ನ ಹಿರಿಯ ವಕೀಲ ರಾಮ್‌ಮೋಹನ್ ರಾವ್ ಮತ್ತು ಪಿ.ಕೆ ಸತೀಶನ್ ತಿಳಿಸಿದ್ದಾರೆ.
ನಾಲ್ಕು ಪ್ರಸ್ತಾವನೆ ಸಲ್ಲಿಕೆ:ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಿಂದ ಪುತ್ತೂರು ಕಾಂಞಂಗಾಡ್ ರೈಲು ಮಾರ್ಗದ ಸರ್ವೆ ನಡೆಸಿ ಮೂರು ನೀಲ ನಕಾಶೆ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ಸರ್ಕಾರದ ವತಿಯಿಂದಲೂ ಸರ್ವೆ ನಡೆಸಿ ನೀಲ ನಕಾಶೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾವನೆ-೧ರಲ್ಲಿ ರೈಲು ೧೦೩ ಕಿ.ಮೀ ದೂರವನ್ನು ಒಳಗೊಂಡಿದ್ದರೂ, ಗರಿಷ್ಠ ಜನಸಂಖ್ಯೆ, ನಗರ ಒಟ್ಟುಗೂಡಿಸುವಿಕೆಗಳ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸೇವೆ ಸಲ್ಲಿಸುತ್ತದೆ ಮತ್ತು ಪರಿಸರದ ಮೇಲೆ ಪರಿಣಾಮವು ಕನಿಷ್ಠವಾಗಿರುತ್ತದೆ.
ಪ್ರಸ್ತಾವನೆ-೨ರಲ್ಲಿ ರೈಲು ಮಾರ್ಗ ೮೫ ಕಿ.ಮೀ. ಒಳಗೊಂಡಿದ್ದು, ಒಳನಾಡಿನ ಹಳ್ಳಿಗಳನ್ನು ಒಳಗೊಂಡಿದೆ, ಚದುರಿದ ಜನಸಂಖ್ಯಾ ಪ್ರದೇಶ, ಮೀಸಲು ಅರಣ್ಯ ಪ್ರದೇಶಗಳ ಮೂಲಕ ಈ ಮಾರ್ಗ ಹಾದುಹೋಗುತ್ತದೆ, ಒರಟಾದ ಸ್ಥಳಾಕೃತಿಯಿಂದಾಗಿ ನಿರ್ಮಾಣ ವೆಚ್ಚ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.ಪ್ರಸ್ತಾವನೆ-೩ರಲ್ಲಿ ರೈಲು ಮಾರ್ಗದ ಒಟ್ಟು ಉದ್ದ ೭೧ ಕಿ.ಮೀ. (ಅಸ್ತಿತ್ವದಲ್ಲಿರುವ ೧೬ ಕಿ.ಮೀ.), ಕೈಗಾರಿಕಾ ಪ್ರದೇಶ, ಪ್ರವಾಸಿ ತಾಣ, ಗಿರಿಧಾಮಗಳು, ದಟ್ಟವಾದ ಸಸ್ಯವರ್ಗ, ಪ್ರಮುಖ ಜೀವವೈವಿಧ್ಯ ಪ್ರದೇಶವನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತಾವನೆ-೪(ಸರ್ಕಾರದ ಪ್ರಸ್ತಾವನೆ)ಯಂತೆ ದೊಡ್ಡ ಮಟ್ಟದಲ್ಲಿ ಮೀಸಲು ಅರಣ್ಯಗಳು, ನದಿಗಳು ಮತ್ತು ಹೊಳೆಗಳ ಮೂಲ ಬಿಂದುಗಳು, ಕಡಿದಾದ ಇಳಿಜಾರಿನ ಬೆಟ್ಟಗಳು, ಬಂಡೆಗಳ ಹೊರಹರಿವುಗಳು ಅಲ್ಲದೆ ನಿರ್ಮಾಣ ವೆಚ್ಚ ಹೆಚ್ಚಾಗಲಿದೆ ಎಂಬ ಅಭಿಪ್ರಾಯವಿದೆ. --------------ಕಾಂಞಂಗಾಡ್ ಕೇರಳದ ಪಶ್ಚಿಮ ಕರಾವಳಿಯಲ್ಲಿದೆ. ಕೊಂಕಣ ರೈಲ್ವೆ ಈ ನಗರದ ಮೂಲಕ ಹಾದುಹೋಗುತ್ತದೆ. ಸ್ಥಳಾಕೃತಿಯ ಅಧ್ಯಯನದ ಪ್ರಕಾರ ಪ್ರಸ್ತಾವಿತ ರೈಲು ಮಾರ್ಗ ಪ್ರದೇಶವು ಸೌಮ್ಯವಾದ ಇಳಿಜಾರಿನ ಬೆಟ್ಟಗಳನ್ನು ಹೊಂದಿದ್ದು, ಎರಡೂ ಬದಿಗಳಲ್ಲಿ ದಟ್ಟ ಸಸ್ಯವರ್ಗವನ್ನು ಹೊಂದಿದೆ. ಈ ಪ್ರದೇಶದಲ್ಲಿ ಚಂದ್ರಗಿರಿ ನದಿ ಬರಿದಾಗುತ್ತಿದೆ. ನದಿಯ ದಡದಲ್ಲಿ ಎತ್ತರವು ತುಲನಾತ್ಮಕವಾಗಿ ಕಡಿಮೆಯಾಗಿದೆ ಮತ್ತು ಕೆಲವು ಸ್ಥಳಗಳಲ್ಲಿ ಇದು ಲ್ಯಾಟರೈಟ್ ಮಣ್ಣು ಮತ್ತು ಬಂಡೆಗಳನ್ನು ಒಳಗೊಂಡಿದೆ. ಈ ಪ್ರದೇಶವನ್ನು (ಆಗ್ನೇಯ ಜಿಲ್ಲೆಗಳ ಕಡೆಗೆ) ರೈಲು ಮಾರ್ಗಕ್ಕಾಗಿ ಆಯ್ಕೆ ಮಾಡಬಹುದು.
-ಪಿ.ಕೆ.ಸತೀಶನ್, ಸಿಟಿಝನ್ಸ್ ಫಾರಮ್ ಪುತ್ತೂರು.--------------ಸ್ಥಳಾಕೃತಿಯ ವೈಶಿಷ್ಟ್ಯಗಳ ಆಧಾರದ ಮೇಲೆ, ಪ್ರಸ್ತಾವನೆ ೨, ಪ್ರಸ್ತಾವನೆ-೩ ಮತ್ತು ಪ್ರಸ್ತಾವನೆ-೪ ನಿರ್ಮಾಣಕ್ಕೆ ತಾಂತ್ರಿಕವಾಗಿ ಸವಾಲಿರುವುದು ಕಂಡು ಬರುತ್ತಿದೆ. ಈ ಪ್ರದೇಶಗಳಲ್ಲಿ ಹಲವಾರು ಹೊಳೆಗಳು, ಕಡಿದಾದ ಇಳಿಜಾರು ಬೆಟ್ಟಗಳು ಮತ್ತು ದಟ್ಟ ಕಾಡುಗಳಿವೆ. ಈ ವಲಯಗಳಲ್ಲಿ ರೈಲು ಮಾರ್ಗಗಳನ್ನು ನಿರ್ಮಿಸಲು ವಿಶಾಲವಾದ ಅರಣ್ಯದ ನಷ್ಟವಾಗಬಹುದು ಮತ್ತು ಕಾಡು ಪ್ರಭೇದಗಳ ವಲಸೆಗೆ ಕಾರಣವಾಗಬಹುದು ಮತ್ತು ಪರಿಸರ ವ್ಯವಸ್ಥೆಯನ್ನು ಅಸಮತೋಲನಗೊಳಿಸುವ ಮೂಲಕ ಅಲ್ಲಿಗೆ ಹೋಗಬಹುದು. ಪ್ರಸ್ತಾವನೆ-೧ ರೈಲ್ವೇ ಮಾರ್ಗ ನಿರ್ಮಾಣಕ್ಕೆ ಹೆಚ್ಚು ಸೂಕ್ತವಾಗಿ ಕಂಡು ಬರುತ್ತಿದೆ.-ರಾಮ್‌ಮೋಹನ್ ರಾವ್, ಸಿಟಿಝನ್ಸ್ ಫಾರಮ್ ಪುತ್ತೂರು.