ಅಂತರ್ಜಾಲದಲ್ಲಿ ಕನ್ನಡ ಸಬಲೀಕರಣ ಅಗತ್ಯ: ಕೆಂಪಣ್ಣ

KannadaprabhaNewsNetwork |  
Published : Apr 13, 2025, 02:10 AM IST
ಸಮ್ಮೇಳನಾಧ್ಯಕ್ಷ ಟಿ.ಕೆಂಪಣ್ಣ ಅವರಿಗೆ ಧ್ವಜ ಹಸ್ತಾಂತರಿಸಲಾಯಿತು. | Kannada Prabha

ಸಾರಾಂಶ

ಅಂತರ್ಜಾಲದಲ್ಲಿ ಕನ್ನಡದ ಹೆಜ್ಜೆ ಗುರುತುಗಳನ್ನು ಮೂಡಿಸಲು ಹೆಚ್ಚು ಹೆಚ್ಚು ಕನ್ನಡದ ಕಂಟೆಂಟ್ ಸೃಷ್ಟಿಯಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಟಿ.ಕೆಂಪಣ್ಣ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಅಂತರ್ಜಾಲದಲ್ಲಿ ಕನ್ನಡದ ಹೆಜ್ಜೆ ಗುರುತುಗಳನ್ನು ಮೂಡಿಸಲು ಹೆಚ್ಚು ಹೆಚ್ಚು ಕನ್ನಡದ ಕಂಟೆಂಟ್ ಸೃಷ್ಟಿಯಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಟಿ.ಕೆಂಪಣ್ಣ ಅಭಿಪ್ರಾಯಪಟ್ಟರು.

ಶನಿವಾರ ನಡೆದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಸಮ್ಮೇಳನಾಧ್ಯಕ್ಷೀಯ ಭಾಷಣ ಮಂಡಿಸಿದರು. ನಾವು ಅಂತರ್ಜಾಲದಲ್ಲಿ ಕನ್ನಡದಲ್ಲಿ ಮಾಹಿತಿಯನ್ನು ಹುಡುಕಿದರೆ ಕೆಲವೊಮ್ಮೆ ದೊರೆಯುವುದಿಲ್ಲ, ದೊರೆತರೂ ಅದು ಪೂರ್ಣ ರೂಪದಲ್ಲಿ ಇರುವುದಿಲ್ಲ. ಕಾರಣ ಸಾಮಾನ್ಯವಾಗಿ ನಾವೆಲ್ಲರೂ ಆಂಗ್ಲ ಭಾಷೆಯಲ್ಲಿಯೇ ಮಾಹಿತಿಯನ್ನ ಹುಡುಕುವ ಪ್ರಯತ್ನ ಮಾಡುತ್ತೇವೆ. ಕನ್ನಡಿಗರು ಅಂತರ್ಜಾಲ ಸೇರಿದಂತೆ ಸಾಮಾಜಿಕ ಜಾಲತಾಲಗಳಲ್ಲಿ ಕನ್ನಡದ ಬಳಕೆ ಮಾಡಿದರೆ ಭಾಷೆಗೆ ಹೆಚ್ಚು ಮಹತ್ವ ದೊರೆಯಲಿದೆ. ಆಗ ಕನ್ನಡ ಅಂತರ್ಜಾಲದಲ್ಲಿ ಪ್ರಧಾನವಾಗಿ ಮಿಂಚುತ್ತದೆ ಎಂದು ಹೇಳಿದರು.

ಸ್ಥಳೀಯ ಸಮಸ್ಯೆಗಳ ಅವಲೋಕನ ಅಗತ್ಯ:

ಆಧುನಿಕ ಜಗತ್ತಿನ ಸಂಕೀರ್ಣತೆಗಳನ್ನು ದಾಟುವಾಗ ನಮ್ಮ ಭಾಷೆ, ನಮ್ಮ ಸಂಸ್ಕೃತಿ ಮತ್ತು ನಮ್ಮ ಗುರುತನ್ನು ಬೆದರಿಸುವ ಹಲವಾರು ಸವಾಲುಗಳನ್ನು ನಾವು ಕಾಣುತ್ತಿದ್ದೇವೆ. ಕನ್ನಡದ ಆಸ್ಮಿತೆಯನ್ನು ಉಳಿಸಿಕೊಳ್ಳುವ ಅಗತ್ಯವಿದ್ದು, ನಮ್ಮ ಕಲೆ, ಸಂಸ್ಕೃತಿ, ಇತಿಹಾಸ ಪರಂಪರೆಗಳ ಮಹತ್ವದ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಬೇಕಿದೆ. ಕನ್ನಡ ಭಾಷೆ, ಸಾಹಿತ್ಯ, ಕನ್ನಡಿಗರ ಮತ್ತು ಕನ್ನಡ ನಾಡಿನ ಸಮಸ್ಯೆಗಳು ಹಾಗೂ ಸ್ಥಳೀಯ ಸಮಸ್ಯೆಗಳ ಅವಲೋಕನವಾಗಬೇಕಿದೆ ಕನ್ನಡ ಸಾಹಿತ್ಯ ನಮ್ಮ ಜನರಿಗೆ ಭರವಸೆ, ಸ್ಪೂರ್ತಿ ಮತ್ತು ಮಾರ್ಗದರ್ಶನದ ದಾರಿ ದೀಪವಾಗಿದೆ. ಜನಪದ ಸಾಹಿತ್ಯದಿಂದ ಮೊದಲಾಗಿ ಪಂಪ, ಜನ್ನ ಮತ್ತು ರನ್ನರ ಪ್ರಾಚೀನ ಮಹಾ ಕಾವ್ಯಗಳಿಂದ ಹಿಡಿದು ಕುವೆಂಪು ಮತ್ತು ಶಿವರಾಮ ಕಾರಂತರ ಆಧುನಿಕ ಮೇರು ಕೃತಿಗಳವರೆಗೆ ನಮ್ಮ ಸಾಹಿತ್ಯ ನಮ್ಮ ಸಂಸ್ಕೃತಿಯ ಹಿರಿಮೆಯ ಸಾರವನ್ನು ಸೆರೆಹಿಡಿದಿವೆ ಎಂದು ಹೇಳಿದರು.

ನಾನು ಓದಿದ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿರುವುದು ಜೀವಿತದ ಮಹತ್ವದ ಕ್ಷಣಗಳಲ್ಲಿ ಪ್ರಮುಖವಾಗಿದೆ. ನನ್ನಂತಹ ಸಾವಿರಾರು ಗ್ರಾಮೀಣ ಮಕ್ಕಳು ಬದುಕು ಕಟ್ಟಿಕೊಳ್ಳಲು ಬೇಕಾದ ವಿದ್ಯಾರ್ಹತೆಯನ್ನು ಈ ಶಾಲೆ ತಂದುಕೊಟ್ಟಿದೆ ಎಂದು ಸ್ಮರಿಸಿದರು.

ಕನ್ನಡ ಎಂಬುದು ಸಂವೇದನೆಯ ಮೂಲ:

ಕನ್ನಡ ಕೇವಲ ಸಂವಹನ ಭಾಷೆಯಲ್ಲ, ಅದರಾಚೆ ಒಂದು ಸಂವೇದನೆ ಇದೆ ಎಂಬುದನ್ನು ನಾವು ಮನಗಾಣಬೇಕು. ನಮ್ಮ ವ್ಯಕ್ತಿತ್ವ ರೂಪಗೊಳ್ಳುವುದು, ನಾವು ಧರಿಸುವ ಬೆಲೆಬಾಳುವ ಬಟ್ಟೆಗಳಿಂದಲ್ಲ, ನಾವು ಮಾಡಿಕೊಳ್ಳುವ ಅಲಂಕಾರಗಳಿಂದಲೂ ಅಲ್ಲ, ಅದು ಸಾಹಿತ್ಯವನ್ನು ಓದುವುದರಿಂದ ಮಾತ್ರ ಸಾಧ್ಯ. ಸಾಹಿತ್ಯವೇ ನಮ್ಮ ಮೌಲ್ಯಗಳ ತಾಯಿ ಎನ್ನುವುದನ್ನು ಮನಗಾಣಬೇಕು ಎಂದರು.

ಗ್ರಾಮೀಣ ಸೊಗಡು ರಕ್ಷಿಸಬೇಕು:

ಗ್ರಾಮಾಂತರ ಜಿಲ್ಲೆಯ ಹಳ್ಳಿಗಳು ನಗರೀಕರಣ ಹಾಗೂ ಕೈಗಾರಿಕರಣಗಳ ಒತ್ತಡಕ್ಕೆ ಸಿಲುಕಿ ಉಪನಗರಗಳಾಗಿ ಪರಿವರ್ತನೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿವೆ. ಜಿಲ್ಲೆಯು ಕೈಗಾರಿಕಾ ಅಭಿವೃದ್ಧಿ ಹಾಗೂ ಹೊಸ ಬಡಾವಣೆಗಳ ಅಭಿವೃದ್ಧಿಗಾಗಿ ಫಲವತ್ತಾದ ಕೃಷಿ ಮತ್ತು ತೋಟಗಾರಿಕಾ ಭೂಮಿಯನ್ನು ಸರ್ಕಾರ ಸ್ವಾಧೀನಕ್ಕೆ ಪಡೆಯುತ್ತಿರುವುದರಿಂದ ಅಮೂಲ್ಯವಾದ ಕೃಷಿ ಭೂಮಿಯ ವಿಸ್ತೀರ್ಣ ಕುಸಿಯುತ್ತಿದೆ. ಫಲವತ್ತಾದ ಕೃಷಿ ಭೂಮಿಯನ್ನು ಬಿಟ್ಟು ಕೃಷಿಯೇತರ ಭೂಮಿಯನ್ನು ವಶಪಡಿಸಿಕೊಳ್ಳುವಂತೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ರೈತರು ಸುಮಾರು ಒಂದು ಸಾವಿರ ದಿನಗಳಿಂದಲು ಸರ್ಕಾರದ ನಿರ್ಧಾರ ವಿರೋಸಿ ಧರಣಿ ನಡೆಸುತ್ತಿದ್ದಾರೆ. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಹಲವಾರು ಗ್ರಾಮಗಳ ರೈತರು ತಮ್ಮ ಫಲವತ್ತಾದ ಕೃಷಿ ಭೂಮಿ ಉಳಿಸಿಕೊಳ್ಳಲು ಅವಿರತ ಹೋರಾಟ ಮಾಡುತ್ತಿದ್ದರೂ ಸರ್ಕಾರ ಗಮನ ಹರಿಸದೆ ಇರುವುದು ವಿಷಾದದ ಸಂಗತಿಯಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿದ್ದ ಬಹುತೇಕ ಸಣ್ಣ ಕೆರೆಗಳು ಹಲವಾರು ಕಾರಣಗಳಿಂದ ಕಣ್ಮರೆಯಾಗಿವೆ. ಇಂದು ನಮ್ಮ ಕಣ್ಣ ಮುಂದೆ ಉಳಿದಿರುವ ದೊಡ್ಡ ಕೆರೆಗಳಲ್ಲಿ ಹೊಸಕೋಟೆಯ ದೊಡ್ಡಕೆರೆ, ಮಧುರೆ ಅಮಾನಿ ಕೆರೆ, ಮಣ್ಣೆಕೆರೆ, ಹಾಗೂ ಅರಳುಮಲ್ಲಿಗೆ ಕೆರೆಗಳು ಮಾತ್ರ ಉಳಿದಿವೆ. ಆದರೆ ಅರಳುಮಲ್ಲಿಗೆ ಕೆರೆ ಬತ್ತಿ ಹೋಗಿ ದಶಕಗಳೆ ಕಳೆದಿವೆ. ಉಳಿದ ಕೆರೆಗಳು ಒಣಗಿ ಹೋದರೆ ಅಂತರ್ಜಲ ಕಡಿಮೆಯಾಗಿ ಕೊಳವೆ ಬಾವಿಗಳು ಬತ್ತಿ ಹೋಗಿ ಕುಡಿಯುವ ನೀರಿಗೆ ಪರದಾಡುವ ಅಪಾಯವಿದೆ. ನಮ್ಮ ಕೆರೆಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ