ಕನ್ನಡ ಭಾಷೆಯಲ್ಲ, ಜೀವನ ವಿಧಾನ: ಶಂಕರ ದೇವನೂರ

KannadaprabhaNewsNetwork |  
Published : Dec 27, 2024, 12:45 AM IST
26ಎಚ್.ಎಲ್.ವೈ-1: ಮತ್ತು 1(ಎ):  ಗುರುವಾರ ಪಟ್ಟಣದ ಪುರಭವನದಲ್ಲಿ ಆಯೋಜಿಸಿದ ಹಳಿಯಾಳ ತಾಲೂಕ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರಿನ ಹಿರಿಯ ಸಾಹಿತಿ ಶಂಕರ ದೇವನೂರ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಸಾಹಿತ್ಯ ಲೋಕ ಶ್ರೀಮಂತಗೊಳಿಸುವುದರಲ್ಲಿ ಕನ್ನಡದ ಪಾತ್ರ ಅತ್ಯಂತ ಮಹತ್ವದಾಗಿದೆ. ಪಂಪನಿಂದ ಹಿಡಿದು ಕುವೆಂಪು ವರೆಗೆ ಬೆಳೆದು ಬಂದ ಕನ್ನಡವನ್ನು ನೋಡಿದರೆ ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯಕ್ಕಿಂತಲೂ ಕಡಿಮೆಯಾದುದಲ್ಲ. ಅದಕ್ಕಾಗಿ ಇಂದು ಕನ್ನಡ ಭಾಷೆಗೆ ಸಾಹಿತ್ಯಲೋಕದಲ್ಲಿ ಮಹತ್ವವಿದೆ ಎಂದು ಹಿರಿಯ ಸಾಹಿತಿ ಶಂಕರ ದೇವನೂರ ಹೇಳಿದರು.

ಹಳಿಯಾಳ: ಕನ್ನಡ ಕೇವಲ ಭಾಷೆಯಲ್ಲ, ಅದೊಂದು ಜೀವನ ವಿಧಾನ, ಸುಂದರ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಇದೆ. ಜಗತ್ತಿನಲ್ಲಿಯೇ ಕನ್ನಡ ಅತ್ಯಂತ ಶ್ರೀಮಂತ ಮತ್ತು ಸುಂದರ ಸಮೃದ್ಧ ಭಾಷೆಯಾಗಿದೆ. ಕನ್ನಡ ಹಣತೆಯನ್ನು ಬೆಳಗಿಸುವ ಮನಸ್ಸುಗಳಾಗೋಣ ಎಂದು ಮೈಸೂರಿನ ಹಿರಿಯ ಸಾಹಿತಿ ಶಂಕರ ದೇವನೂರ ಹೇಳಿದರು.

ಗುರುವಾರ ಪಟ್ಟಣದ ಪುರಭವನದಲ್ಲಿ ಆಯೋಜಿಸಿದ್ದ ಹಳಿಯಾಳ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕನ್ನಡ ಮಾತನಾಡಿದರೆ ಸಾಕು, ಕನ್ನಡ ಬೆಳೆಯಲಿದೆ. ಆದರೆ ಕನ್ನಡ ಭಾಷೆ ಬಲ್ಲ ಬಹುತೇಕರು ಕನ್ನಡದ ಬಗ್ಗೆ ವಹಿಸುತ್ತಿರುವ ತಾತ್ಸಾರದ ಭಾವನೆ ಬೇಸರ ತರಿಸುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಸಾಹಿತ್ಯ ಲೋಕ ಶ್ರೀಮಂತಗೊಳಿಸುವುದರಲ್ಲಿ ಕನ್ನಡದ ಪಾತ್ರ ಅತ್ಯಂತ ಮಹತ್ವದಾಗಿದೆ. ಪಂಪನಿಂದ ಹಿಡಿದು ಕುವೆಂಪು ವರೆಗೆ ಬೆಳೆದು ಬಂದ ಕನ್ನಡವನ್ನು ನೋಡಿದರೆ ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯಕ್ಕಿಂತಲೂ ಕಡಿಮೆಯಾದುದಲ್ಲ. ಅದಕ್ಕಾಗಿ ಇಂದು ಕನ್ನಡ ಭಾಷೆಗೆ ಸಾಹಿತ್ಯಲೋಕದಲ್ಲಿ ಮಹತ್ವವಿದೆ. ಇದಕ್ಕಾಗಿ ಹೆಮ್ಮೆಪಡಬೇಕು ಎಂದರು.

ಕನ್ನಡ ಭಾಷೆಯ ಬೆಳವಣಿಗೆಗೆ ಅನೇಕ ಮಹನೀಯರು ಪಟ್ಟ ಶ್ರಮವನ್ನು ನಾವು ಮರೆಯಬಾರದು. ಕನ್ನಡಕ್ಕೆ ಎಲ್ಲವನ್ನೂ ಅರಿಯುವ ಹಾಗೂ ಮನವರಿಕೆ ಮಾಡುವ ಶಕ್ತಿಯಿದೆ. ವಚನಕಾರರು ಕನ್ನಡದ ಮೂಲ ಬೇಸಾಯಗಾರರು, ವಚನಗಳಲ್ಲಿರುವ ಸತ್ಯದ ನುಡಿಗಳು ಬದುಕಿಗೆ ಮಾರ್ಗ ತೋರಬಲ್ಲವು ಎಂದರು. ಸಾಹಿತ್ಯ ಲೋಕ ಮತ್ತು ಕನ್ನಡ ಭಾಷೆಯ ಬೆಳವಣಿಗೆಗೆ ಸಾಹಿತ್ಯ ಸಮ್ಮೇಳನಗಳು ಪ್ರೇರಣೆ ನೀಡುತ್ತವೆ ಎಂದರು.

ಪಾರದರ್ಶಕ: ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಜವಾಬ್ದಾರಿಯನ್ನು ವಹಿಸಿದ ಆನಂತರ ನಾನು ಪ್ರತಿಯೊಂದು ಕಾರ್ಯಕ್ರಮ ಚಟುವಟಿಕೆಯನ್ನು ಪಾರದರ್ಶಕವಾಗಿ ಮಾಡಿದ್ದೇನೆ. ಪ್ರತಿಯೊಂದು ಸಮ್ಮೇಳನಗಳು ನಡೆದ ಕೆಲವೇ ದಿನಗಳಲ್ಲಿ ಲೆಕ್ಕಾಚಾರವನ್ನು ಬಹಿರಂಗವಾಗಿ ಪ್ರಕಟಿಸುವ ಹೊಸ ಸಂಪ್ರದಾಯ ಆರಂಭಿಸಿದ್ದೇನೆ. ಆದರೆ ಜಿಲ್ಲೆಯ ಕೆಲವು ಮನಸ್ಸುಗಳಿಗೆ ಇಂತಹ ಪಾರದರ್ಶಕತೆ ಅರಗಿಸಿಕೊಳ್ಳಲಾಗುತ್ತಿಲ್ಲ, ಅದಕ್ಕೆ ವೃಥಾ ಅಪಪ್ರಚಾರ ಮಾಡುತ್ತಿದ್ದಾರೆ. ನೈತಿಕತೆ, ಪ್ರಾಮಾಣಿಕ ಇಲ್ಲದೇ ಅಪವಾದ ಮಾಡಬಾರದು. ಇಂತಹ ನೈತಿಕತೆ, ಪ್ರಾಮಾಣಿಕತೆಯಿಲ್ಲದವರ ಮಧ್ಯೆ ನಾವು ಕನ್ನಡದ ಪ್ರೀತಿಯ ಕಾಳುಗಳನ್ನು ಬಿತ್ತಲು ಹೊರಟ್ಟಿದ್ದು, ಸರ್ವರೂ ಈ ಕನ್ನಡದ ಪವಿತ್ರ ಕಾಯಕದಲ್ಲಿ ಕೈಜೋಡಿಸಬೇಕು ಎಂದರು.

ಹಳಿಯಾಳ ತಹಸೀಲ್ದಾರ್‌ ಪ್ರವೀಣ ಹುಚ್ಚಣ್ಣನವರ, ಬಿಇಒ ಪ್ರಮೋದ ಮಹಾಲೆ ಮಾತನಾಡಿ, ಕನ್ನಡ ನುಡಿಯ ಬೆಳವಣಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದರು.

ಸಮ್ಮೇಳನದ ಧ್ವಜಾರೋಹಣ: ಬೆಳಗ್ಗೆ ನಡೆದ ಸಮಾರಂಭದಲ್ಲಿ ತಹಸೀಲ್ದಾರ್‌ ಪ್ರವೀಣ ಹುಚ್ಚಣ್ಣನವರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್‌.ವಾಸರೆ ಅವರು ಪರಿಷತ್ತಿನ ಧ್ವಜಾರೋಹಣ ಮಾಡಿದರು. ತದನಂತರ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ. ಡಿ.ಎನ್. ಕಾಂಬ್ರೇಕರ ಅವರ ಭವ್ಯ ಮೆರವಣಿಗೆ ಪಟ್ಟಣದಲ್ಲಿ ನಡೆಯಿತು. ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತದಿಂದ ಆರಂಭಗೊಂಡ ಮೆರವಣಿಗೆ ಮುಖ್ಯ ಮಾರ್ಗದ ಮೂಲಕ ಸಮ್ಮೇಳನ ನಡೆಯುವ ಪುರಭವನ ವರೆಗೂ ನಡೆಯಿತು. ಮೆರವಣಿಗೆಯಲ್ಲಿ ಗೌಳಿಗರ ನೃತ್ಯ ಗಮನ ಸೆಳೆಯಿತು.

ಕೃತಿಗಳ ಲೋಕಾರ್ಪಣೆ: ಸಮ್ಮೇಳನದಲ್ಲಿ ಹಳಿಯಾಳದ ಹವ್ಯಾಸಿ ಬರಹಗಾರರಿಂದ ಸಂಗ್ರಹಿತ ಹಳಿಯಾಳ ಕಥಾ ಕಾವ್ಯ ಮಾಲಿಕೆ, ಸುಮಂಗಲಾ ಅಂಗಡಿ ಬರೆದ ವಚನ ಚಿಂತನ, ಶಿಕ್ಷಕ ಕಾಳಿದಾಸ ಬಡಿಗೇರ ಬರೆದ ಕಾಡುವ ಕಲ್ಪನೆಗಳು ಕಥಾ ಸಂಕಲನ, ಬೊಂಬೆಯಾಟ ತಜ್ಞ ಸಿದ್ದಪ್ಪ ಬಿರಾದಾರ ಬರೆದ ಶಿಕ್ಷಣದಲ್ಲಿ ಅಭಿನಯ ಅಧ್ಯಯನ ಕೃತಿಯನ್ನು ಬಿಡುಗಡೆ ಮಾಡಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ