ಕನ್ನಡ ಬರೀ ಭಾಷೆಯಲ್ಲ, ಬದುಕಿನ ಮೂಲ: ತಹಸೀಲ್ದಾರ್‌ ಜಿ.ಸಂತೋಷಕುಮಾರ

KannadaprabhaNewsNetwork |  
Published : Nov 02, 2025, 03:45 AM IST
ಸ | Kannada Prabha

ಸಾರಾಂಶ

ನೆಲ, ಜಲ, ಭಾಷೆ, ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ

ಹೂವಿನಹಡಗಲಿ: ಕನ್ನಡ ಬರಿ ಭಾಷೆ ಅಷ್ಟೇ ಅಲ್ಲ, ಅದು ನಮ್ಮ ಬದುಕಿನ ಮೂಲವಾಗಿದೆ. ನೆಲ, ಜಲ, ಭಾಷೆ, ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಹಸೀಲ್ದಾರ್‌ ಜಿ.ಸಂತೋಷಕುಮಾರ ಹೇಳಿದರು.ಇಲ್ಲಿನ ಜಿಪಿಜಿ ಕಾಲೇಜು ಆವರಣದಲ್ಲಿ ತಾಲೂಕ ಆಡಳಿತ ಆಯೋಜಿಸಿದ್ದ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡ ನಾಡು, ನುಡಿಯನ್ನು ಜಾತಿ, ಮತ, ಬೇಧ ಮರೆತು ಬೆಳೆಸುವಂತಹ ಪ್ರಯತ್ನ ನಡೆಯಬೇಕಿದೆ. ಕನ್ನಡ ರಾಜ್ಯೋತ್ಸವ ನಾಡಿನ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ. ಕನ್ನಡ ನಾಡಿನ ಪ್ರಾಂತಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯ ರಚನೆಯ ನಂತರದಲ್ಲಿ ಅಂದಿನ ಮುಖ್ಯಮಂತ್ರಿ ದೇವರ ಅರಸು ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡಿದ್ದಾರೆ. ಏಕೀಕರಣಕ್ಕಾಗಿ ನಾಡಿನ ಸಾಕಷ್ಟು ಮಹನೀಯರು ಹೋರಾಟ ಮಾಡಿದ್ದಾರೆ. ಅವರನ್ನು ಸ್ಮರಿಸುವಂತಹ ಕೆಲಸವಾಗಬೇಕಿದೆ ಎಂದರು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆಯಾಗಿದೆ. ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಪಡೆದಿರುವ ಭಾಷೆಯಾಗಿದೆ. ಈ ನಾಡಿಗೆ ಶರಣ, ಸಂತ, ದಾಸ ಶ್ರೇಷ್ಠರು ಕನ್ನಡ ನಾಡಿನ ಸಾಹಿತ್ಯಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೃಷ್ಣನಾಯ್ಕ ಮಾತನಾಡಿ, ಕರ್ನಾಟಕ ಏಕೀಕರಣವನ್ನು ಆಲೂರು ವೆಂಕಟರಾಯರಂತಹ ಮಹನೀಯರು ಹೋರಾಟದ, ಕಿಚ್ಚು ಹಚ್ಚಿ ಕನ್ನಡ ಭಾಷಿಗರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಕರ್ನಾಟಕ ಏಕೀಕರಣ ಆಗದೇ ಹೋಗಿದ್ದರೇ ನಮ್ಮಲ್ಲಿ ಒಗ್ಗಟ್ಟು ಮೂಡುತ್ತಿರಲಿಲ್ಲ, ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿಯ ಮೇಲೆ ನಿರಂತರ ಅಭಿಮಾನ ಹೊಂದಬೇಕಿದೆ ಎಂದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತಮಾಡಿ, ನಮಗೆ ಬದುಕು ಕೊಟ್ಟ ಭಾಷೆ ಕನ್ನಡವನ್ನು ಯಾರು ಮರೆಯಬಾರದು, ಇದನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕೆಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಗಂಟಿ ಜಮಾಲ್‌ ಬೀ, ಉಪಾಧ್ಯಕ್ಷ ಮಂಜುನಾಥ ಸೊಪ್ಪಿನ್‌, ತಾಲೂಕ ಕಸಾಪ ಅಧ್ಯಕ್ಷ ಟಿ.ಪಿ.ವೀರೇಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ, ಪ್ರಾಚಾರ್ಯ ಕೋರಿ ಹಾಲೇಶ. ಚಂದ್ರನಾಯ್ಕ, ತಾಪಂ ಇಒ ಪರಮೇಶ್ವರ, ಬಿಇಒ ಮಹೇಶ ಪೂಜಾರ್‌, ಸಿಪಿಐ ದೀಪಕ್‌ ಆರ್‌.ಬೋಸರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಎಚ್‌.ಇಮಾಮ್‌ ಸಾಹೇಬ್‌, ಸಮಾಜ ಕಲ್ಯಾಧಿಕಾರಿ ಆನಂದ್‌ ಡೊಳ್ಳಿನ್‌ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕೃಷಿ ಕ್ಷೇತ್ರದ ಪಿ.ಅಜ್ಜಪ್ಪ ಹುಗಲೂರು, ಸಾಹಿತ್ಯ ಕ್ಷೇತ್ರದ ನಾಗಮಂಜುಳ ಜೈನ್‌, ಪತ್ರಿಕಾ ಕ್ಷೇತ್ರದ ಎಂ.ಪಿ.ಎಂ.ಶಿವಪ್ರಕಾಶ, ರಂಗಭೂಮಿಯ ಆರ್‌.ಬಿ.ನಾಗರಾಜ, ದೊಡ್ಡಾಟ ಕಲಾವಿದ ರಾಮಪ್ಪ ದಾಸರ, ಸಮಾಜಸೇವೆ ನವಲಿ ಸಂಗಮ್ಮ ರಾಜವಾಳ, ಕನ್ನಡ ಪರ ಹೋರಾಟಗಾರ ಮಲ್ಕಿ ಒಡೆಯರ್‌ ನಾಗಭೂಷಣ, ಕಾಷ್ಟ ಕಲಾವಿದ ವೀರೇಶ ಆಚಾರ್‌, ಸಂಗೀತ ಕ್ಷೇತ್ರದ ಮೌಲಾಸಾಬ್‌, ಸಂಕೀರ್ಣ ಬಿ.ಲಿಂಗಪ್ಪ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜತೆಗೆ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಕುವರ, ಕುವರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ನಂತರದಲ್ಲಿ ರಾಜ್ಯೋತ್ಸವ ಕವಿಗೋಷ್ಠಿ ಆಯೋಜಿಸಲಾಗಿತ್ತು.

ಇದಕ್ಕೂ ಮುನ್ನ ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರವನ್ನು, ಮಂಗಳ ವಾದ್ಯಗಳ ಮೂಲಕ ಮೆರವಣಿಗೆ ಮಾಡಲಾಯಿತು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ