ಕನ್ನಡಪ್ರಭ ವಾರ್ತೆ ತುಮಕೂರುತಮಗೆ ಕನ್ನಡ ಗೊತ್ತಿಲ್ಲ ಎಂದು ಹೇಳಿದ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಕನ್ನಡ ಪಠ್ಯಪುಸ್ತಕ ಹಾಗೂ ಸಚಿವರ ಹೇರ್ ಕಟ್ಟಿಂಗ್‌ಗೆ ಹಣ ಕಳುಹಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.ನಗರದ ಬಿಜಿಎಸ್ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರಾಥಮಿಕ ಕನ್ನಡ ಪಠ್ಯಪುಸ್ತಕ ಹಾಗೂ ನೋಟುಗಳನ್ನು ಪ್ರದರ್ಶಿಸಿದ ಕಾರ್ಯಕರ್ತರು ಶಿಕ್ಷಣ ಸಚಿವರ ಹೇಳಿಕೆಯನ್ನು ವ್ಯಂಗ್ಯವಾಗಿ ಟೀಕಿಸಿದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವಚೇತನ್ ಮಾತನಾಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮಗೆ ಕನ್ನಡ ಓದಲು ಬರುವುದಿಲ್ಲ ಎಂದು ಹೇಳಿರುವುದು, ಇಂತಹ ಸಚಿವರನ್ನು ಪಡೆದ ಈ ರಾಜ್ಯದ ಜನರ ದುರಾದೃಷ್ಟ. ಕರ್ನಾಟಕ ಸರ್ಕಾರದ ಸಚಿವರು ಕನ್ನಡ ಓದಿ, ಬರೆಯುವುದನ್ನು ಕಲಿಯಲಿ ಎಂದು ಅವರಿಗೆ ಕನ್ನಡ ಕಲಿಕಾ ಪುಸ್ತಕ ಕಳಿಸುತ್ತಿದ್ದೇವೆ ಎಂದು ಹೇಳಿದರು.ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಟಿ.ಕೆ.ಧನುಷ್ ಮಾತನಾಡಿ, ಶಿಕ್ಷಣ ಸಚಿವರು ಹೇರ್ ಕಟ್ಟಿಂಗ್ ಮಾಡಿಸಿಕೊಂಡು ಶಿಸ್ತಿನಿಂದ ಇರಬೇಕು. ಆಗ ಇಲಾಖೆಯಲ್ಲೂ ಶಿಸ್ತು ಮೂಡುತ್ತದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆಯನ್ನು ಸಚಿವ ಮಧು ಬಂಗಾರಪ್ಪ ವ್ಯಂಗ್ಯ ಮಾಡಿದ್ದರು. ಹೇರ್ ಕಟ್ಟಿಂಗ್ ಮಾಡಿಸಲು ತಮಗೆ ಬಿಡುವಿದ್ದರೆ ನೀವೇ ಬಂದು ಮಾಡಿ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.ಸಚಿವರ ಹೇರ್ ಕಟ್ಟಿಂಗ್ ಖರ್ಚಿಗೆಂದು ಬಿಜೆಪಿ ಯುವ ಮೋರ್ಚಾ ಪ್ರತಿ ತಿಂಗಳು ಹಣ ಕಳಿಸುತ್ತದೆ. ಈ ತಿಂಗಳ ಹಣ ಈಗ ಕಳಿಸುತ್ತೇವೆ ಎಂದು ನೋಟುಗಳನ್ನು ಪ್ರದಶಿಸಿದರು. ಬಿಜೆಪಿ ನಗರ ಅಧ್ಯಕ್ಷ ಹನುಮಂತರಾಜು, ಯುವ ಮೋರ್ಚಾ ನಗರ ಅಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಗಂಗೇಶ್, ಮುಖಂಡರಾದ ರಾಕೇಶ್, ಪ್ರವೀಣ್, ರಕ್ಷಿತ್, ಶಶಿ ಹಾಜರಿದ್ದರು.