ಕನ್ನಡಪ್ರಭ ವಾರ್ತೆ ಇವಣಗಿ ವರದಾನಿ ಲಕ್ಕಮ್ಮದೇವಿ ಮುಖ್ಯವೇದಿಕೆ (ಬ.ಬಾಗೇವಾಡಿ)
ನಾಡಿನ ಶಾಸನಗಳು ಮತ್ತು ಪ್ರಾಚೀನ ಗ್ರಂಥಗಳು ನಾಡಿನ ಹಿರಿಮೆ-ಗರಿಮೆಯನ್ನು ಸಾರಿ ಹೇಳುತ್ತವೆ. ಕನ್ನಡ ಭಾಷೆಯ ಸೊಗಡು ಎಲ್ಲರನ್ನು ಮೃದುಗೊಳಿಸುವ ಶಕ್ತಿ ಹೊಂದಿವೆ ಎಂದು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಸಿದ್ದರಾಮ ಬಿರಾದಾರ ಹೇಳಿದರು.ತಾಲೂಕಿನ ಇವಣಗಿ ಗ್ರಾಮದ ವರದಾನಿ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ನಡೆದ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಾಚೀನ ಕಾಲದಿಂದಲೂ ಕನ್ನಡ ಭಾಷೆಯ ಸೊಗಡು ಮತ್ತು ಬೆಡಗು ಅನುಪಮವಾಗಿದೆ. ೧೨ನೇ ಶತಮಾನದಲ್ಲಿ ವಚನಕಾರರು ಸರಳ ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಕನ್ನಡವನ್ನು ಕಟ್ಟಿ ಗಟ್ಟಿಗೊಳಿಸಿದ್ದಾರೆ ಎಂದರು.
೧೨ನೇ ಶತಮಾನದಲ್ಲಿ ವಿಶ್ವಗುರು ಬಸವೇಶ್ವರರು ಮಾಡಿದ ಕ್ರಾಂತಿ ಯಾವುದೇ ಕ್ರಾಂತಿ ಮತ್ತು ಬೆಳವಣಿಗೆಗೆ ಸರಿಸಾಟಿಯಾಗುವುದಿಲ್ಲ. ಎಲ್ಲರನ್ನು ಅಪ್ಪಿಕೊಂಡು ಸಮಾನತೆಯ ಬೀಜವನ್ನು ಬಿತ್ತಿದರು. ಬಸವನಬಾಗೇವಾಡಿ ತಾಲೂಕು ನಾಡು-ನುಡಿಗೆ ಶ್ರೇಷ್ಠ ಕೊಡುಗೆ ನೀಡಿದ್ದು, ಈ ನೆಲ ಸಿಸು ಸಂಗಮೇಶ, ಸಂಗಮೇಶ ಗುಜಗೊಂಡ, ಶಂಕರ ಬೈಚಬಾಳ, ಸಿ.ಬಿ.ಪಟ್ಟಣದ, ಲ.ರು.ಗೊಳಸಂಗಿ ಸೇರಿದಂತೆ ಅನೇಕ ಸಾಹಿತಿಗಳನ್ನು ನೀಡಿದೆ. ಜೊತೆಗೆ ಅನೇಕ ಜನಪದ ಕಲಾವಿದರನ್ನು ನೀಡಿದೆ. ಕನ್ನಡ ನಾಡು-ನುಡಿಯ ಸೇವೆಯನ್ನು ಅನೇಕರು ತಮ್ಮ ಸಾಹಿತ್ಯ ಕೃಷಿ, ಕಲಾ ಸೇವೆ ಮೂಲಕ ಸಲ್ಲಿಸುತ್ತಿದ್ದಾರೆ. ನನ್ನ ಕನ್ನಡ ಸಾಹಿತ್ಯ ಸೇವೆ ಗುರುತಿಸಿ ಸಮ್ಮೇಳನ ಸರ್ವಾಧ್ಯಕ್ಷತೆಗೆ ಆಯ್ಕೆ ಮಾಡಿರುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಭಿನಂದಿಸುವುದಾಗಿ ಹೇಳಿದರು.ಸಮ್ಮೇಳನ ಉದ್ಘಾಟಿಸಿದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ೧೨ನೇ ಶತಮಾನದಲ್ಲೆ ಬಸವಾದಿ ಶರಣರು ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದಕ್ಕೆನೆ ಮಾಡಿದ್ದು ಶ್ಲಾಘನೀಯ ಎಂದರು.
ಸಾನಿಧ್ಯ ವಹಿಸಿದ್ದ ಜಮಖಂಡಿ ಓಲೇಮಠ ಉತ್ತರಾಧಿಕಾರಿ ಆನಂದದೇವರು ಮಾತನಾಡಿ, ಕನ್ನಡ ಸಂಸ್ಕ್ರತಿಯನ್ನು ಮಕ್ಕಳಿಗೆ ಕಲಿಸಬೇಕಿದೆ. ಮಕ್ಕಳಿಗೆ ಮೊಬೈಲ್ ಬದಲಾಗಿ ಕನ್ನಡ ಪುಸ್ತಕ ನೀಡಿದರೆ ಅವರು ಬೌದ್ಧಿಕವಾಗಿ ಬೆಳೆಯಲು ಅನುಕೂಲ. ಕನ್ನಡ ಸಾಹಿತ್ಯದಲ್ಲಿ ಅವಿನಾಭಾವ ಸಂಬಂಧ ಕಾಣುತ್ತೇವೆ. ಜಾಗತೀಕರಣದಿಂದ ಮುಂದಿನ ದಿನಗಳಲ್ಲಿ ಕೇವಲ ೫೦ ಭಾಷೆಗಳು ಮಾತ್ರ ಉಳಿಯಲಿವೆ. ಇದರಲ್ಲಿ ಕನ್ನಡ ಭಾಷೆಯೂ ಇರಲಿದೆ. ಇದಕ್ಕೆ ಕಾರಣ ವಚನ ಸಾಹಿತ್ಯಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದನ್ನು ಸ್ಮರಿಸಿದರು.ವಕೀಲ ಚಂದ್ರಶೇಖರ ಸುಭಾನಪ್ಪರ ಮಾತನಾಡಿ, ನಾಡಿಗೆ ಅನ್ನ ನೀಡುವ ರೈತರ ಕುರಿತು ಸಮ್ಮೇಳನಗಳಲ್ಲಿ ರೈತರ ಗೋಷ್ಠಿ ಆಯೋಜನೆ ಮಾಡಿ ರೈತರಿಗೆ ಗೌರವ ಸಲ್ಲಿಸಬೇಕಿದೆ. ಜಗತ್ತಿನಲ್ಲಿ ವಕೀಲ, ಕವಿ, ಸಾಹಿತಿ ಸೇರಿ ಬೇರೆ ವೃತ್ತಿಯವರು ಇರದಿದ್ದರೂ ಪರವಾಗಿಲ್ಲ. ರೈತ ಇಲ್ಲದೇ ಹೋದರೆ ಯಾರಿಗೂ ಅನ್ನ ಸಿಗುವುದಿಲ್ಲ. ರೈತರನ್ನು ಗೌರವಿಸುವ ಕೆಲಸವಾಗಲಿ ಎಂದು ಸಲಹೆ ನೀಡಿದರು. ಅನ್ಯಭಾಷೆ ಕಡಿಮೆ ಬಳಸಿ ಕನ್ನಡ ಮಾತಾಡುವಂತೆ ಮನವಿ ಮಾಡಿದರು.
ಸಾನಿಧ್ಯ ವಹಿಸಿದ್ದ ಚನ್ನಬಸವ ಶ್ರೀ, ಸಿದ್ದಲಿಂಗ ಶ್ರೀ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ, ವಕೀಲ ಬಿ.ಕೆ.ಕಲ್ಲೂರ, ಡಿಎಸ್‌ಎಸ್ ಮುಖಂಡ ಅಶೋಕ ಚಲವಾದಿ, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ, ವ್ಹಿಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ ಮಾತನಾಡಿದರು.ವೇದಿಕೆಯಲ್ಲಿ ನಿಕಟಪೂರ್ವ ಸರ್ವಾಧ್ಯಕ್ಷ ಈರಣ್ಣ ಬೆಕಿನಾಳ, ನರಸಲಗಿ ಗ್ರಾಪಂ ಅಧ್ಯಕ್ಷ ಅಣ್ಣುಗೌಡ ಬಿರಾದಾರ, ಬಿಇಒ ವಸಂತ ರಾಠೋಡ ಇದ್ದರು. ಯಮನಪ್ಪ ಮಿಣಜಗಿ ಸ್ವಾಗತಿಸಿದರು. ಕೊಟ್ರೇಶ ಹೆಗ್ಡಾಳ, ಭೀಮರಾಯ ಚಕ್ರಮನಿ ನಿರೂಪಿಸಿದರು. ಶಿವು ಮಡಿಕೇಶ್ವರ ವಂದಿಸಿದರು.
ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಸಮ್ಮೇಳನದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜನಪದ ಗಾಯಕ ಬಸವರಾಜ ಹಾರಿವಾಳ, ಖೋ ಖೋ ಸಾಧಕ ಶಿಕ್ಷಕ ಎನ್.ಬಿ.ದಾಸರ, ಇನ್‌ಸ್ಪೈರ್ ಅವಾರ್ಡ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಪ್ರಿಯಾಂಕಾ ಲಮಾಣಿ, ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಬಸವರಾಜ ಕೋಟಿ ಅವರನ್ನು ಸಾಹಿತ್ಯ ಪರಿಷತ್ತಿನಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ರವಿಗೌಡ ಚಿಕ್ಕೊಂಡ, ಮಹೇಶ ಮುಳವಾಡ ಸೇರಿದಂತೆ ಅನೇಕರಿಗೆ ಕರ್ನಾಟಕ ಸುವರ್ಣ ಸಂಭ್ರಮದಂಗವಾಗಿ ಪರಿಷತ್ತಿನಿಂದ ಗೌರವಿಸಲಾಯಿತು.-
ಕೋಟ್ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯವನ್ನು ಎಲ್ಲ ಮನದಾಳಕ್ಕೆ ಮುಟ್ಟಿಸುತ್ತಿದೆ. ಯಾರ ಮನಸ್ಸನ್ನು ನೋಯಿಸುವ ಕೆಲಸ ಮಾಡುತ್ತಿಲ್ಲ. ಕಾರ್ಯಕ್ರಮ ಆಯೋಜನೆ ವೇಳೆ ಸಣ್ಣ-ಪುಟ್ಟ ತಪ್ಪುಗಳು ಸಹಜ. ಯಾವ ಕನ್ನಡಾಭಿಮಾನಿಯೂ ಕಾರ್ಯಕ್ರಮ ಬಗ್ಗೆ ಗೊಂದಲ ಸೃಷ್ಟಿ ಮಾಡಬಾರದು. ಈ ತಾಲೂಕು ಸಮ್ಮೇಳನ ಯಶಸ್ವಿಯಾಗಿ ಜರುಗಲು ಇವಣಗಿ ಗ್ರಾಮಸ್ಥರ ಸಹಕಾರ ಮರೆಯುವಂತಿಲ್ಲ. ಈ ಅಕ್ಷರ ಜಾತ್ರೆ ಪ್ರತಿಯೊಬ್ಬ ಕನ್ನಡಿಗನ ಹಬ್ಬ.
- ಹಾಸಿಂಪೀರ ವಾಲೀಕಾರ, ಕಸಾಪ ಜಿಲ್ಲಾಧ್ಯಕ್ಷ